ಬೀದರ್/ಬಸವಕಲ್ಯಾಣ : ಪ್ರಜಾವಾಣಿ ದಿನಪತ್ರಿಕೆಯ ವರದಿಗಾರ ಗುರುಪ್ರಸಾದ ಮೆಂಟೇ ಅವರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಆರೋಪಿಸಿ, ಮನವಿ ಸಲ್ಲಿಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡಪರ ಸಂಘಟನೆಗಳ ಮುಖಂಡರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಕರ್ಣಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಬಸವಕಲ್ಯಾಣ ತಾಲ್ಲೂಕ ಘಟಕದ ವತಿಯಿಂದ ತಾಲ್ಲೂಕು ಅಧ್ಯಕ್ಷ ಸುರೇಶ್ ಜಮ್ಮು ಅವರ ನೇತೃತ್ವದಲ್ಲಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವನ್ನು ಪತ್ರಕರ್ತೀಯ ಕರ್ತವ್ಯದ ಭಾಗವಾಗಿ ಮಾತ್ರ ವರದಿ ಮಾಡಲಾಗಿದೆ. ಆದರೆ ಆ ವರದಿಯನ್ನು ತಪ್ಪಾಗಿ ಅರ್ಥೈಸಿ ವರದಿಗಾರರ ಮೇಲೆ ಆಧಾರ ರಹಿತ ಆರೋಪ ಮಾಡಲಾಗಿದೆ ಎಂದು ಹೇಳಿದರು.
ಪತ್ರಕರ್ತರು ಸಮಾಜದಲ್ಲಿನ ಸಮಸ್ಯೆಗಳು ಹಾಗೂ ಜನಸಾಮಾನ್ಯರ ಸಂಕಷ್ಟಗಳನ್ನು ಬೆಳಕಿಗೆ ತರುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ವರದಿಗಾರರ ಮೇಲೆ ಉದ್ದೇಶಪೂರ್ವಕವಾಗಿ ಸುಳ್ಳು ಆರೋಪ ಮಾಡುವ ಮೂಲಕ ಒತ್ತಡ ತರುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು.
ಇಂತಹ ಕ್ರಮಗಳು ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದರ ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ವಿರುದ್ಧವಾಗಿವೆ. ಹೀಗಾಗಿ ವರದಿಗಾರರ ವಿರುದ್ಧ ಸುಳ್ಳು ಆರೋಪ ಮಾಡಿ ಮನವಿ ಸಲ್ಲಿಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಜಿತ್ ಸೂರ್ಯವಂಶಿ , ಧನರಾಜ ಡಿ. ರಾಜೋಳೆ, ದತ್ತಾತ್ರಿ .ಧುರೆ. ಸುನಿಲ್ ಕೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















