ಬಳ್ಳಾರಿ / ಕಂಪ್ಲಿ : ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಲಿ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಯಲ್ಲಮ್ಮಕ್ಯಾಂಪ್ ಬಳಿಯಲ್ಲಿರುವ ಸ್ಫೂರ್ತಿ ನವೋದಯ ತರಬೇತಿ ಕೇಂದ್ರದಲ್ಲಿ 4ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮಾ.29ರ ರವಿವಾರದಂದು ಬೆಳಿಗ್ಗೆ 11:00ಗಂಟೆಗೆ ರಾಜ್ಯ ಮಟ್ಟದ ಸ್ಪೂರ್ತಿ ನವೋದಯ ಜೀನಿಯಸ್ ಅವಾರ್ಡ್-2026 ಪರೀಕ್ಷೆ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡು, ಪರೀಕ್ಷೆ ಬರೆಯುವ ಮೂಲಕ ಆಕರ್ಷಕ ಬಹುಮಾನ ತಮ್ಮದಾಗಿಸಿಕೊಳ್ಳಬೇಕು ಎಂದು ಸ್ಪೂರ್ತಿ ನವೋದಯ ತರಬೇತಿ ಕೇಂದ್ರದ ಅಧ್ಯಕ್ಷ ಮುತ್ತಣ್ಣ ವೈ. ನಂದ್ಯಾಳ್ ತಿಳಿಸಿದ್ದಾರೆ.
ಅವರು ಮಂಗಳವಾರ ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿದ ನಂತರ ಮಾತನಾಡಿ, ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ ನಿಟ್ಟಿನಲ್ಲಿ ಜೀನಿಯಸ್ ಅವಾರ್ಡ್ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 15 ಸಾವಿರ ರೂ.ಗಳ ನಗದು ಬಹುಮಾನ, ದ್ವಿತೀಯ 10 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ 5 ಸಾವಿರ ನಗದು ಬಹುಮಾನ ಸಿಗಲಿದೆ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ನವೋದಯ ತರಬೇತಿ ಶಿಕ್ಷಣ ನೀಡಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಹೆಸರು ನೋಂದಾಯಿಸಿಕೊಂಡು, ಪರೀಕ್ಷಾ ಬರೆದು ಅವಾರ್ಡ್ ಪಡೆಯಬೇಕು. ಪರೀಕ್ಷಾ ನೋಂದಣಿ ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಯು ಕನ್ನಡ, ಇಂಗ್ಲೀಷ್, ಗಣಿತ, ಸಾಮಾನ್ಯ ಜ್ಞಾನ, ಬುದ್ಧಿ ಸಾಮಾರ್ಥ್ಯ ವಿಷಯ ಸೇರಿದಂತೆ ಒಟ್ಟು 50 ಪ್ರಶ್ನೆಗಳನ್ನು ಒಳಪಟ್ಟಿರುತ್ತದೆ. ಈ ಪರೀಕ್ಷೆಯನ್ನು 2026-27ನೇ ಸಾಲಿನ ನವೋದಯ, ಸೈನಿಕ, ಕಿತ್ತೂರು ತರಬೇತಿ ಪ್ರವೇಶಾತಿ ಪರೀಕ್ಷೆ ಎಂದು ಪರಿಗಣಿಸಲಾಗುವುದು ಮತ್ತು ಇಲ್ಲಿನ ನವೋದಯ ತರಬೇತಿ ಕೇಂದ್ರದಲ್ಲಿ 6,7,8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಬೇಸಿಗೆ ತರಬೇತಿ ಶಿಬಿರವನ್ನು ಎಪ್ರೀಲ್-2ರಂದು ಪ್ರಾರಂಭಿಸಲಾಗುತ್ತದೆ. 4 ಮತ್ತು 5ನೇ ತರಗತಿಯ ನವೋದಯ, ಸೈನಿಕ, ಕಿತ್ತೂರು, ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು. ಇಲ್ಲಿನ ಜೀನಿಯಸ್ ಅವಾರ್ಡ್ ಪರೀಕ್ಷೆ ಬರೆಯಲು ಇಚ್ಛಿಸುವವರು ಮಗುವಿನ ಹೆಸರು, ಊರು, ಶಾಲೆಯ ಹೆಸರು ಬರೆದು 6363133593ಗೆ ವಾಟ್ಸಾಪ್ ಮೆಸೇಜ್ ಮಾಡಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-9740416060 ಮತ್ತು 9880539392ಗೆ ಸಂಪರ್ಕಿಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರಮೇಶ ಎನ್.ಶಿವಪುರ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















