
ಬಳ್ಳಾರಿ / ಕಂಪ್ಲಿ : ವರ್ಷವಿಡೀ ಅಂಗನವಾಡಿಗಳಲ್ಲಿ ಮಕ್ಕಳು ಶಾಲಾಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಮಾಡುತ್ತಾರೆ, ಪಾಲಕರು, ಪೋಷಕರು ಅವರ ಮಕ್ಕಳ ಕಲಿಕೆ ಗುರುತಿಸಲು ಬಾಲ ಮೇಳ ಕಾರ್ಯಕ್ರಮ ಪಟ್ಟಣದ ಐತಿಹಾಸಿಕ ಸೋಮಪ್ಪನ ದೇವಸ್ಥಾನ ಮುಂಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ, ಶಿಶು ಅಭಿ ವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕಂಪ್ಲಿ ಸಿರುಗುಪ್ಪ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಷನ್ ಕಂಪ್ಲಿ ಇವರ ಸಹಯೋಗದಲ್ಲಿ ಕಂಪ್ಲಿ ಪಟ್ಟಣದ ಎ ಮತ್ತು ಬಿ ವಲಯಗಳು ಅರಳಿಬಾಲ್ಯ- ಬೆಳಗಲಿ ಭವಿತವ್ಯ ಘೋಷ ವಾಕ್ಯದಡಿಯಲ್ಲಿ ಬಾಲ ಮೇಳ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಲತೀಫಾ ಬೇಗಂ ಉದ್ಘಾಟಿಸಿ ಮಾತನಾಡಿ ಅಂಗನವಾಡಿ ಕೇಂದ್ರಗಳಲ್ಲಿ ಕಿರಿಯ ಪ್ರಾಥಮಿಕ ಹಂತದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಆಟಗಳ ಮೂಲಕ ಸಂತೋಷಮಯ ವಾತಾವರಣದಲ್ಲಿ ನೀಡಲಾಗುತ್ತಿದೆ. ಆಟಿಕೆಗಳ ಮೂಲಕ, ವಿವಿಧ ಬಣ್ಣಗಳು, ಕೃತಕ ಗಿಡಗಳ ಮೂಲಕ ಮಕ್ಕಳಿಗೆ ಸಾಮಾನ್ಯ ಜ್ಞಾನವನ್ನು ತಿಳಿಸಿಕೊಡಲಾಗುತ್ತದೆ. ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಜೊತೆಗೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಲಾಗುತ್ತಿದೆ. ಮಕ್ಕಳು ವಸ್ತುಗಳನ್ನು ನೋಡಿದ ತಕ್ಷಣವೇ ಅದರ ಬಗ್ಗೆ ಮಾಹಿತಿ ನೀಡುತ್ತವೆ ಈ ರೀತಿಯಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ ಎಂದರು.
ಮಕ್ಕಳಿಂದ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮ ಜರುಗಿದವು.
ಬಾಲ ಮೇಳದಲ್ಲಿ ಕಂಪ್ಲಿ ಎ ಮತ್ತು ಬಿ ವಲಯದ ಅಂಗನವಾಡಿ ಕೇಂದ್ರಗಳ ಮಕ್ಕಳು ವೇಷಭೂಷಣ, ವಿವಿಧ ಪ್ರದರ್ಶನ ನೀಡುವ ಜೊತೆಗೆ ಆಕರ್ಷಕ ನೃತ್ತ ಪ್ರದರ್ಶನ ಪಾಲಕರ ಮನುಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಆಜೀಂ ಪ್ರೇಮ್ ಜಿ ಫೌಂಡೇಷನ್ ರಾಘವೇಂದ್ರ ಮತ್ತು ಸಿಬ್ಬಂದಿಗಳು, ಎರಡು ವಲಯಗಳ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು, ಮಕ್ಕಳ ಪೋಷಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















