ಯುಗಾದಿ ಎಂಬ ಪದವು ಯುಗಾದಿ ಎಂಬ ಪದದಿಂದ ಬಂದಿದೆ. ಮುಖ್ಯವಾಗಿ ಯುಗಾದಿ ಎಂಬ ಪದವು ಎರಡು ಶ್ರೇಷ್ಠ ಪದಗಳ ಸಂಯೋಜನೆಯಾಗಿದೆ: ಯುಗ, ಅಂದರೆ ಯುಗ ಅಥವಾ ಅವಧಿ; ಮತ್ತು ಆದಿ, ಅಂದರೆ ಯಾವುದೋ ಒಂದು ವಿಷಯದ ಆರಂಭ. ಆದ್ದರಿಂದ, ಯುಗಾದಿ ಎಂದರೆ ಅಕ್ಷರಶಃ ಹೊಸ ವರ್ಷದ ಆರಂಭ.
ಮುಖ್ಯವಾಗಿ ಚಾಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಯುಗಾದಿ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಯುಗಾದಿ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಸೌರಮಾನ ಯುಗಾದಿ ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ ಕರಾವಳಿಯವರು ಸೌರಮಾನ ಯುಗಾದಿ ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ.
ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು.ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಈ ಒಂದು ಶ್ಲೋಕ ಹೇಳುತ್ತಾರೆ
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| – ಇದರ ಅರ್ಥ ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಯುಗಾದಿ ಎಲ್ಲ ಹಬ್ಬದ ಹಾಗಲ್ಲ. ಅದು ಪ್ರಕೃತಿಯೊಂದಿಗೆ ನೇರ ಸಂಬಂಧ ಹೊಂದಿರುವಂತದ್ದು. ಯುಗಾದಿ ಬಂದಿದೆಯೆಂದು ನಿಸರ್ಗವೇ ನಮಗೆ ತಿಳಿಸುತ್ತದೆ. ಅದುವರೆಗೂ ಎಲೆಗಳುದುರಿ ಬೋಳಾಗಿದ್ದ ಮರಗಿಡಗಳು ಚಿಗುರಿ ಹೂ, ಕಾಯಿ, ಹಣ್ಣು ಹೊತ್ತು ನಿಲ್ಲುತ್ತವೆ. ಸಂಪಿಗೆ, ಮಲ್ಲಿಗೆಗಳು ಅರಳಿ ಘಮಘಮಿಸುತ್ತವೆ. ಹಲಸು, ಮಾವು, ನೇರಳೆ, ಗೇರು ಇನ್ನೂ ಅದೆಷ್ಟೋ ಕಾಡುಹಣ್ಣುಗಳು ಸಿಗುವುದೂ ಈ ಕಾಲದಲ್ಲಿಯೇ. ಹೀಗೆ ವಸಂತಾಗಮನದ ಹೊತ್ತಿಗೆ ಪ್ರಕೃತಿ ಹೊಸ ಚಿಗುರು, ಹೂವು, ಹಣ್ಣಿನೊಂದಿಗೆ ಸಂಭ್ರಮಿಸುವಂತೆಯೇ ಸುತ್ತಲಿನ ಜೀವರಾಶಿಗಳಿಗೂ ಅದೇನೋ ಹೊಸ ಚೈತನ್ಯ, ಅನಂತ ಉಲ್ಲಾಸದಿಂದ ಇರುತ್ತವೆ.
ಯುಗಾದಿ ಎಂದರೆ ಸಂವತ್ಸರದ ಮೊದಲ ದಿನ ಮಾತ್ರ ಅಲ್ಲ ಜೀವನದ ಒಂದೊಂದು ಕ್ಷಣವೂ ಹೊಸತಾಗಬೇಕು.ಬದುಕಿನ ಸಿಹಿ ಕಹಿಗಳೆರಡನ್ನು ಸಮಾನವಾಗಿ ಸ್ವೀಕರಿಸಬೇಕು. ಒಂದೊಂದು ಕ್ಷಣವನ್ನೂ ಖುಷಿಯಿಂದ ಸವಿಯಬೇಕು ಬ್ರಹ್ಮಾಂಡದ ಅಧ್ಭುತವನ್ನು ಕುತೂಹಲದಿಂದ ನೋಡಬೇಕು.ಕಾಲ ನಿಂತ ನೀರ ಅಲ್ಲ ಸದಾಕಾಲ ಸಾಗುತ್ತಿರುತ್ತದೆ ಹಾಗೇಯೇ ನಾವು ಕಾಲದೊಂದಿಗೆ ನವ ಉಲ್ಲಾಸದಿಂದ ಸಾಗಬೇಕು.
ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ
ಸತತ ಕೃಷಿಯೋ ಪ್ರಕೃತಿ- ಮಂಕುತಿಮ್ಮ
- ರೇಷ್ಮಾ ಶೆಟ್ಟಿ

















