ಶಿವಮೊಗ್ಗ: ಹೊಸ ಜಾಹೀರಾತು ನೀತಿ ಜಾರಿಗೊಳಿಸುವ ಮುನ್ನ ಪುನರ್ ಪರಿಶೀಲನೆಗೆ ಒಳಪಡಿಸಬೇಕೆಂದು ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ, ಪತ್ರಿಕಾ ಭವನ, ಆರ್.ಟಿ.ಓ. ಕಛೇರಿ ರಸ್ತೆ, ಶಿವಮೊಗ್ಗ ಇವರು ಮಾನ್ಯ ಮುಖ್ಯಮಂತ್ರಿಗಳಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಶ್ರೀ ಪ್ರಭುಲಿಂಗ ಕವಲೀಶೆಟ್ಟಿ ಮುಖಾಂತರ ಮನವಿ ಸಲ್ಲಿಸಿದರು.
ತಮ್ಮ ಮನವಿಯಲ್ಲಿ ಕರ್ನಾಟಕ ಹೊಸ ಜಾಹೀರಾತು ನೀತಿ ಜಾರಿಗೊಳಿಸುವ ಮುನ್ನ ಸಮಗ್ರವಾಗಿ ಪುನರ್ ಪರಿಶೀಲಿಸುವಂತೆ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ಒತ್ತಾಯಿಸುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಸರಕಾರವು ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಲಿದೆಯಲ್ಲದೆ ರಾಜ್ಯ ರಾಜ್ಯ ಸರಕಾರವು ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಲು ಮುಂದಾಗುವ ಮೂಲಕ ಸಂಕಷ್ಟದಲ್ಲಿರುವ ಪತ್ರಿಕೆಗಳನ್ನು ಮೇಲೆತ್ತುವ ಬದಲು ಕತ್ತು ಹಿಸುಕುವ ಸಂಚಾಗಿದೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆಗಳ ಮಾನ್ಯತೆಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಮಾಧ್ಯಮ ಪರಿಶೀಲನಾ ಸಮಿತಿಯಿಂದ ಪುನರ್ ಪರಾಮರ್ಶಿಸುವುದು, ಸ್ಥಳೀಯ ಪತ್ರಿಕೆಗಳು ಕನಿಷ್ಠ 3000 ಪ್ರಸರಣ ಸಂಖ್ಯೆ ಹೊಂದಿರಬೇಕು ಎನ್ನುವುದೂ ಸಮರ್ಥನೀಯ ಅಲ್ಲ ಎಂದಿರುವ ಪತ್ರಿಕಾ ಸಂಪಾದಕರ ಸಂಘವು ಸರ್ಕಾರವೇ ಖಾಯಂ ನೌಕರರನ್ನು ನೇಮಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ, ಅಲ್ಲಿ ಎಲ್ಲವೂ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿದೆ. ಹೀಗಿರುವಾಗ ಪತ್ರಿಕೆ ಅದರಲ್ಲೂ ಸ್ಥಳೀಯ ಪತ್ರಿಕೆಗಳಲ್ಲಿ ಖಾಯಂ ನೌಕರರು ಇರಬೇಕು, ಅದೂ ಇಂತಿಷ್ಟೇ ಇರಬೇಕು, ಅವರಿಗೆ ಎಲ್ಲಾ ಸೌಲಭ್ಯಗಳು ನೀಡಬೇಕು ಎಂಬುದು ಎಷ್ಟರ ಮಟ್ಟಿಗೆ ಸರಿ? ಬಹಳ ಮುಖ್ಯವಾಗಿ ಸ್ಥಳೀಯ ಪ್ರಸರಣ ಸಂಖ್ಯೆಯನ್ನು ನಿಗಧಿ ಪಡಿಸಿರುವುದೂ ಸಹ ಅವೈಜ್ಞಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದೆಯಲ್ಲದೆ ಹೊಸ ನೀತಿಯಲ್ಲಿ, ಬೆಂಗಳೂರೂ ಒಂದೇ, ಮಲೆನಾಡಿನ ಮೂಲೆಯ ತಾಲೂಕೂ ಒಂದೇ ಎನ್ನುವಂತಾಗಿದ್ದು ಇದನ್ನು ಕೈ ಬಿಟ್ಟು, ಆಯಾ ತಾಲೂಕಿನ ಜನಸಂಖ್ಯೆಯ ಆಧಾರದ ಮೇಲೆ ಪ್ರಸರಣ ಸಂಖ್ಯೆಯನ್ನು ನಿಗಧಿ ಪಡಿಸುವಂತಾಗಬೇಕು ಎಂದೂ ಒತ್ತಾಯಿಸಿದೆ.
ಪತ್ರಿಕೆಗಳ ಟೈಟಲ್ ವರ್ಗಾವಣೆ ಮಾಡಿದರೆ ಮಾನ್ಯತಾ ಪಟ್ಟಿಯಿಂದ ಕೈಬಿಡುವ ಕ್ರಮವೂ ಸಹ ಪತ್ರಿಕೆ ಮಾಲೀಕನ ಹಕ್ಕುಗಳನ್ನು ಕಸಿದುಕೊಳ್ಳುವಂತಾಗಲಿದೆ. ಹಾಗೂ ಪತ್ರಿಕೆಗಳು ದೀರ್ಘಕಾಲ ಮುದ್ರಣಗೊಳ್ಳಲು ತೊಡಕಾಗಲಿದೆ. ಜಾಹೀರಾತು ದರ ಪರಿಷ್ಕರಣೆ ವಿಷಯದಲ್ಲಿ ಕರ್ನಾಟಕ ಜಾಹೀರಾತು ನೀತಿ-2013 ಅನ್ವಯ ಶೇ. 12ರಷ್ಟು ಜಾಹೀರಾತು ದರವನ್ನು 2 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಿತ್ತು. ಆದರೆ ಕಳೆದ ಐದು ವರ್ಷಗಳಿಂದ ದರ ಪರಿಷ್ಕರಣೆಯಾಗಿಲ್ಲ ಎಂದು ವಿವರಿಸಲಾಗಿದೆಯಲ್ಲದೆ ಕರ್ನಾಟಕ ಹೊಸ ಜಾಹೀರಾತು ನೀತಿಯ ಈ ಪ್ರಮುಖ ನ್ಯೂನ್ಯತೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಕೂಡಲೇ ಇವುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ. ವಾರ್ತಾ ಇಲಾಖೆಯು ಸಹ ಪೂರ್ವಾಗ್ರಹ ಮನಸ್ಥಿತಿಯಿಂದ ಹೊರ ಬಂದು, ಹೊಸ ಜಾಹೀರಾತು ನೀತಿಯನ್ನು ಎಲ್ಲರ ಸಲಹೆ ಪಡೆದು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು




















