ಬಳ್ಳಾರಿ / ಕಂಪ್ಲಿ : ಸ್ಥಳೀಯ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ತಾಲೂಕು ಮಟ್ಟದ ಸಮನಸ್ವಯ ಮತ್ತು ಪರಿಶೀಲನಾ ಸಮಿತಿ ಹಾಗೂ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆ ಸೋಮವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ನಾಲ್ಕು ಕರೆಗಳು ಬಂದಿದ್ದವು. ಆದರೆ, ಇದರಲ್ಲಿ ಒಂದು ಖಚಿತ ಮಾಹಿತಿ ಕಂಡು ಬಂದಿದ್ದು, ಉಳಿದ ಮೂರು ಕರೆಗಳು ನಕಲಿಗಳಾಗಿದ್ದವು. ಈಗಾಗಲೇ ಪೋಕ್ಸೋ ಕಾಯ್ದೆಯಡಿ ಮೂರು ಪ್ರಕರಣಗಳು ದಾಖಲಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲು ಆಯಾ ಗ್ರಾಮೀಣ ಸಮಿತಿಗೆ ಸೂಚಿಸಲಾಗಿದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಕರಿಗೆ ಬಾಲ್ಯ ವಿವಾಹ ಜಾಗೃತಿಯ ತರಬೇತಿ ಅಗತ್ಯವಾಗಿದೆ. ಶಾಲೆಗಳಲ್ಲಿ ಅತಿಥಿ ಶಿಕ್ಷಕರ, ಅಡುಗೆ ಸಹಾಯಕರ ಪೊಲೀಸ್ ಪರಿಶೀಲನೆ ನಡೆಸಲಾಗುತ್ತದೆ. ಶಾಲೆಯಲ್ಲಿ ಏಳು ದಿನ ಶಾಲೆಯಿಂದ ಗೈರಾದ ಮಕ್ಕಳ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಪ್ರತಿಯೊಂದು ಹಂತದಲ್ಲಿ ಮಹಿಳೆಯರ, ಮಕ್ಕಳ ರಕ್ಷಣೆ ಜೊತೆಗೆ ಬಾಲ್ಯ ವಿವಾಹ ತಡೆಗಟ್ಟಲು ಅತಿ ಹೆಚ್ಚಿನ ಮಟ್ಟದಲ್ಲಿ ಕಾವಲು ಸಮಿತಿಯವರು ಹಾಗೂ ರೀಡ್ಸ್ ಸಂಸ್ಥೆಯವರು ಎಚ್ಚರವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಪೊಲೀಸ್ ಎಎಸ್‌ಐ ಬಸವರಾಜ, ಇಸಿಒ ರೇವಣ್ಣ, ತಾಲುಕು ಪಂಚಾಯತಿಯ ವ್ಯವಸ್ಥಾಪಕ ಶ್ರೀಶೈಲಗೌಡ, ಉಪ ನೋಂದಣಾಧಿಕಾರಿ ಶ್ರೀನಿವಾಸ, ನಿಲಯ ಪಾಲಕ ವಿರುಪಾಕ್ಷಪ್ಪ, ಅಂಗನವಾಡಿ ಮೇಲ್ವಿಚಾರಕಿ ಲತೀಫಾಬೇಗಂ, ರೀಡ್ಸ್ ಸಂಸ್ಥೆಯ ಎಚ್.ಸಿ.ರಾಘವೇಂದ್ರ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















