ಅದ್ವೈತ ಪ್ರತಿಪಾದಕರಾದ ಶ್ರೀ ಶಂಕರ ಭಗವತ್ಪಾದರು ಜಗತ್ತಿಗೆ ನೀಡಿದ ಕೊಡುಗೆ ಅತ್ಯಮೂಲ್ಯವಾದದ್ದು, ಅದನ್ನು ಅನುಸರಿಸಿ, ಜೀವನ ಪಾವನ ಮಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಲಯನ್ ಶಂಕರ ಹೆಗಡೆ ಭದ್ರನ್ ಅವರು ನುಡಿದರು.
ಅವರು ಶಿರಸಿಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜಸ್ಟಿಸ್ ಜಿ ಎನ್ ಸಭಾಹಿತ, ಜಸ್ಟಿಸ್ ವಿಷ್ಣು ಸಭಾಹಿತ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶ್ರೀ ಶಂಕರ ಭಗವತ್ಪಾದರ ಜನ್ಮ, ವಿದ್ಯಾಭ್ಯಾಸ, ಪರಿಕ್ರಮ, ಪಾಂಡಿತ್ಯದಲ್ಲಿ ಪರಾಕ್ರಮ, ಅಲ್ಪ ಜೀವಿತಾವಧಿಯಲ್ಲೇ ಸಾಗರದಷ್ಟು ಸಾಧನೆ ಮಾಡಿದ ಕುರಿತು ವಿವರಿಸುತ್ತಿದ್ದರು. ಕನಕಧಾರಾ, ದಶಶ್ಲೋಕೀ ಇತ್ಯಾದಿ ಅವರ ಕೃತಿಗಳ ಕುರಿತು, ಕೃತಿ ರಚಿತವಾದ ಹಿನ್ನೆಲೆಯ ಕುರಿತು ವಿಸ್ತಾರವಾಗಿ ತಿಳಿಸಿದರು. ಅದ್ವೈತದಲ್ಲಿ ಪ್ರತಿಪಾದಿಸಿದ ಜಾಗೃತ್, ಸ್ವಪ್ನ, ಸುಷುಪ್ತಿ ಅವಸ್ಥೆ ಕುರಿತು, ವ್ಯಕ್ತಿಯ ರೂಪಾಂತರ ಕುರಿತು ಸಭಿಕರ ಮನಮುಟ್ಟುವಂತೆ ವಿಶ್ಲೇಷಿಸಿದರು. ಅಹಂ ಬ್ರಹ್ಮಾಸ್ಮಿ , ಬ್ರಹ್ಮ ಸತ್ಯಂ ಜಗನ್ಮಿಥ್ಯಂ ಮುಂತಾದ ಶಂಕರರ ವಿಚಾರಧಾರೆಗಳನ್ನು ತೆರೆದಿಟ್ಟರು. ಶಂಕರರ ಮಹಾ ಸಾಧನೆಗಳಾದ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದ್ದು, ಸರ್ವಜ್ಞ ಪೀಠ ಏರಿದ್ದು ಅವರ ಅಸಾಮಾನ್ಯ ವ್ಯಕ್ತಿತ್ವದ ಕೈಗನ್ನಡಿ ಎಂದು ತಿಳಿಸಿ ಹೇಳಿದರು. ಶಂಕರರ ಚಿಂತನಾ ಧಾರೆಗಳು ಜನರ ಮನ ತಲುಪುವಲ್ಲಿ ಉಪನ್ಯಾಸ ಯಶಸ್ವಿಯಾಯಿತು. ಶ್ರೀ ಎಂ ಎಸ್ ಹೆಗಡೆ ಅವರು ಉಪನ್ಯಾಸಕರಿಗೆ ಗೌರವ ಸಮರ್ಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಚೇತನಾ ಭಟ್ ಹುತ್ಗಾರ ಹಾಗೂ ಚೇತನಾ ಭಟ್ ಮತ್ತಿಹಳ್ಳಿ ಅವರಿಂದ ಭಗವದ್ಗೀತೆ ಹಾಗೂ ಶಂಕರ ಸ್ತೋತ್ರಗಳ ಪಠಣ ಕಾರ್ಯಕ್ರಮ ನಡೆಯಿತು. ಇವರಿಗೆ ಪರಮೇಶ್ವರಿ ಜೋಶಿ, ಲಕ್ಷ್ಮಿ ಹೆಗಡೆಯವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರೆ ಆಶಾ ಸಭಾಹಿತ ಹಾಗೂ ಸುಧಾ ಹೆಗಡೆಯವರು ಗೌರವಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ವಿಜ್ಞಾನಿ ಡಾ. ಎಲ್ ಜಿ ಭಟ್ಗದ್ದೆಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಶ್ರೇಷ್ಠ ಚಿಂತಕ, ಸಾಹಿತಿ ಎಲ್ ಆರ್ ಭಟ್ ಸನ್ಮಾನಿತರ ಸಾಧನೆಯನ್ನು ಕೊಂಡಾಡುತ್ತಾ ಆಶಯ ನುಡಿ ನುಡಿದರು, ಸನ್ಮಾನಿತರ ತಂಗಿ ಲಕ್ಷ್ಮಿ ಹೆಗಡೆ ಅವರು ಅಣ್ಣನ ಒಡನಾಟದ ಆತ್ಮೀಯ ಅನಿಸಿಕೆಗಳನ್ನು ಹಂಚಿಕೊಂಡರು. ಸನ್ಮಾನಿತ ಎಲ್ ಜಿ ಭಟ್ಗದ್ದೆ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಎಲ್ಲವೂ ಗುರುಗಳ ಕೃಪಾಶೀರ್ವಾದ ಎಂದು ಭಾವುಕರಾಗಿ ನುಡಿದರು. ಲಕ್ಷ್ಮಣ ಶಾನಭಾಗ, ಡಿ ಎ ಹೆಗಡೆ, ಎಂ ಜಿ ಭಾಗವತ್ ಹಾಗೂ ಜನಾರ್ಧನ ಭಟ್ಟ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇಂದಿರಾ ರಾಮಚಂದ್ರ ಬೈಲಕೇರಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರೆ, ತ್ರಿವೇಣಿ ಹೆಗಡೆ ಅವರು ಗಣ್ಯರನ್ನು ಪರಿಚಯಿಸಿದರು ಹಾಗೂ ನಾಗೇಂದ್ರ ಮಾರ್ಕಾಂಡೆ ವಂದಿಸಿದರು.
ಈ ಸಂದರ್ಭದಲ್ಲಿ ಅಂಕಣಕಾರರಾದ ಅನಂತ ಪದ್ಮನಾಭ , ಬಾಲಕೃಷ್ಣ ಕಾರಂತ, ವಾಸುದೇವ ಶಾನಭಾಗ , ಪತ್ರಕರ್ತ ಮೋಹನ ಭಟ್, ಆರ್ ಎಸ್ ಹೆಗಡೆ, ಕಾಶಿನಾಥ ಹೆಗಡೆ, ಸುರೇಶ ಸಂಕೊಳ್ಳಿ, ಎಸ್ ಮಂಜುನಾಥ, ಪ್ರಭಾತ ಹೆಗಡೆ, ಮಾದೇವಿ ಮಾರ್ಕಾಂಡೆ, ಕೃಷ್ಣವೇಣಿ, ರಾಧಾ ಹೆಗಡೆ, ದಯಾನಂದ ಹೆಗಡೆ, ಗುರುಪಾದ ಹೆಗಡೆ, ಲಕ್ಷ್ಮಿ ಭಟ್, ಗೀತಾ ಹೆಗಡೆ, ಪಾರ್ವತಿ ಹೆಗಡೆ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















