
ಬಳ್ಳಾರಿ / ಕಂಪ್ಲಿ : ಸುಮಾರು ವರ್ಷಗಳಿಂದ ಸಮಾಜ ಸೇವೆಯೊಂದಿಗೆ ಜೆಸಿಐ ಜನರ ಮನದಲ್ಲಿ ಹಚ್ಚಹಸಿರಾಗಿ ಉಳಿದಿದೆ ಎಂದು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜೆಎಫ್‌ಎಸ್ ಸುರೇಶ್ ಗೊಂಪಾ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಹೊಸಪೇಟೆ ಬಸ್ ನಿಲ್ಲಿಸುವ ಸ್ಥಳದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕ ಅಧ್ಯಕ್ಷ ಡಾ.ಭರತ್ ಪದ್ಮಸಾಲಿ ನೇತೃತ್ವದಲ್ಲಿ ಶನಿವಾರ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ತಾತ್ಕಾಲಿಕ ಬಸ್ ತಂಗುದಾಣ ಹಾಗೂ ಪೇಟೆ ಬಸವೇಶ್ವರ ದೇವಸ್ಥಾನದ ಬಳಿಯ ನೀರಿನ ಅರವಟ್ಟಿಗೆ ಉದ್ಘಾಟಿಸಿ ಮಾತನಾಡಿ, ಜೆಸಿಐಯಂತಹ ಸಂಸ್ಥೆಯು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವಂತಹ ಅವಕಾಶವನ್ನು ಸಂಸ್ಥೆಯ ಸದಸ್ಯರಿಗೆ ಅವಕಾಶ ಮಾಡಿಕೊಡುತ್ತದೆ. ಸಮಾಜದಲ್ಲಿನ ಶೋಷಿತರ ಪರವಾದ ಕೆಲಸಗಳನ್ನು ಮಾಡುವಲ್ಲಿ ಸದಸ್ಯರು ಮುಂಚೂಣಿಯಲ್ಲಿ ಇರಬೇಕು, ಸಮಾಜಕ್ಕೆ ಸೇವೆ ಸಲ್ಲಿಸುವುದು ಸಂಸ್ಥೆಯ ಮುಖ್ಯ ಧ್ಯೇಯ. ಜನಸಾಮಾನ್ಯರ ಕಾಳಜಿ ಅರಿತು ಅವರ ಶ್ರೇಯಸ್ಸಿಗಾಗಿ ದುಡಿಯುವುದು ಮಾನವ ಧರ್ಮ. ಈ ಧರ್ಮವನ್ನು ಜೆಸಿಐ ಸಂಸ್ಥೆ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಜೆಸಿಐ ಕಂಪ್ಲಿ ಸೋನಾ ಅಧ್ಯಕ್ಷ ಡಾ.ಭರತ್ ಪದ್ಮಶಾಲಿ ಮಾತನಾಡಿ, ಮನುಷ್ಯನು ಸ್ವಾರ್ಥಪರ ಚಿಂತನೆ ಬಿಟ್ಟು ವಿಶ್ವಮಾನವನಾಗಬೇಕು. ಲಭಿಸಿದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಸಂಸ್ಕಾರ, ಸಂಸ್ಕೃತಿಯನ್ನು ಮರೆತ್ತಿರುವುದು ಆತಂಕಕಾರಿ. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುವುದು ಧರ್ಮ. ದೇಶದ ಅಭಿವೃದ್ಧಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ. ಮನುಷ್ಯನಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಇದ್ದಾಗ ಮಾತ್ರ ಗೌರವ ಸಿಗುತ್ತದೆ’. ಈಗಾಗಲೇ ಬೇಸಿಗೆ ಆರಂಭಗೊಂಡಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ಬರುವ ಜನರ ನೀರಿನ ದಾಹನೀಗಿಸುವ ದೃಷ್ಠಿಯಿಂದ ನೀರಿನ ಅರವಟ್ಟಿಗೆ ಆರಂಭಿಸಲಾಗಿದೆ. ಮತ್ತು ಅಂಬೇಡ್ಕರ್ ವೃತ್ತದ ಹೊಸಪೇಟೆ ಬಸ್ ನಿಲ್ಲಿಸುವ ಸ್ಥಳದಲ್ಲಿ ಬಿಸಿಲು ಎನ್ನದೇ ಕಾಯುವ ಪ್ರಯಾಣಿಕಾರಿಗಾಗಿ ತಾತ್ಕಾಲಿಕವಾಗಿ ತಟ್ಟಿಯಿಂದ ಬಸ್ ತಂಗುದಾಣ ನಿರ್ಮಿಸಿದ್ದು, ಇದರಿಂದ ಜನತೆಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಜೆಸಿಐ ವಲಯ 24ರ ಅಧ್ಯಕ್ಷ ಜೆಎಫ್‌ಎಸ್‌ಸಿಎ ಮಧುಸೂದನ್, ಪ್ರಮುಖರಾದ ಡಾ.ಬಿ.ಸುಧಾಕರ್, ಬಿ.ಎಸ್.ಅರುಂಧತಿ, ಜೆಸಿ ಅಖಿಲ್ ಅಕ್ಕಿ, ಜೆಸಿ ಪ್ರಸಾದ್ ಗಡದ್, ನಿರಂಜನ್ ಗುಪ್ತಾ, ಡಿ.ಮೌನೇಶ್, ಜಿ.ಚಂದ್ರಶೇಖರ್‌ಗೌಡ, ರಮೇಶ್ ಬೆಳಂಕರ್, ರಾಕೇಶ್ ಬಾಗ್ರೇಚಾ, ಇಂದ್ರಜಿತ್ ಸಿಂಗ್, ಎಚ್ ಜಿ ಎಫ್ ಬಡಿಗೇರ್ ಜೀಲನ್ ಸಾಬ್, ಮಂಜೇಶ್ ದಾರೋಜಿ, ಡಾ. ಶ್ರದ್ಧಾ ಭರತ್ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















