
ಬೆಳಗಾವಿ: ಬಾಗಲಕೋಟೆ ಉಪಚುನಾವಣೆಯ ತೀವ್ರ ಪ್ರಚಾರದ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ವಲ್ಪ ವಿಶ್ರಾಂತಿಗೆ ತಿರುಗಿದ್ದಾರೆ.
ಕ್ಷೇತ್ರದಲ್ಲಿ ತಿಂಗಳಿಗೂ ಹೆಚ್ಚು ಕಾಲ ತಂಗಿ ಕೈ ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರ ನಡೆಸಿದ ಅವರು, ಇದೀಗ ತಮ್ಮ ತವರಿನ ಭಾಗ ಗೋಕಾಕಕ್ಕೆ ಭೇಟಿ ನೀಡಿದ್ದಾರೆ.
ಪ್ರಚಾರದ ಒತ್ತಡದಿಂದ ಹೊರಬಂದ ಸಚಿವರು ಗೋಕಾಕದ ಯೋಗಿ ಕೊಳ್ಳದ ಪ್ರಕೃತಿ ಸೌಂದರ್ಯದ ನಡುವೆ ಕೆಲ ಹೊತ್ತು ಕಳೆಯುತ್ತಾ ರಿಲ್ಯಾಕ್ಸ್ ಆಗಿರುವುದು ಗಮನಸೆಳೆದಿದೆ.
ಮಾರ್ಕಂಡೇಯ ನದಿ ತಟದಲ್ಲಿ ಕುಳಿತು ಮಿರ್ಚಿ ಬಜ್ಜಿ ಸವಿಯುತ್ತಾ ಅವರು ಜಾಲಿ ಮೂಡ್ಗೆ ಜಾರಿದರು.
ಬಾಗಲಕೋಟೆ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಸತೀಶ್ ಜಾರಕಿಹೊಳಿ ಅವರಿಗೆ ಮಹತ್ವದ ಜವಾಬ್ದಾರಿ ನೀಡಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ ಅವರು ಇದೀಗ ವಿಶ್ರಾಂತಿಗೆ ಸಮಯ ಕೊಡುತ್ತಿದ್ದಾರೆ.
ಸರಳತೆಗಾಗಿ ಹೆಸರಾದ ಸತೀಶ್ ಜಾರಕಿಹೊಳಿ, ಗೋಕಾಕ ಭೇಟಿ ವೇಳೆ ಅಭಿಮಾನಿಗಳೊಂದಿಗೆ ಬೆರೆತು ಮಾತನಾಡಿ, ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಯಾವುದೇ ಆಡಂಬರವಿಲ್ಲದೆ ಜನಸಾಮಾನ್ಯರೊಂದಿಗೆ ಹೊಂದಿಕೊಳ್ಳುವ ಅವರ ನಡವಳಿಕೆ ಮತ್ತೆ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ ವಿಠ್ಠಲ ಖೋಕಾಟೆ




















