ಬಳ್ಳಾರಿ / ಕಂಪ್ಲಿ : ಪಟ್ಟಣದ ವಿರಶೈವ ಸಂಘದ ಶಾರದಾ ಶಾಲೆ ಆವರಣದಲ್ಲಿ ಕಂಪ್ಲಿ ತಾಲ್ಲುಕು ಪತಂಜಲಿ ಯೋಗ ಸಮಿತಿಯಿಂದ ವಿಶೇಷವಾಗಿ ಮಕ್ಕಳಿಗಾಗಿ ಬೇಸಿಗೆ ಯೋಗ ಶಿಬಿರವನ್ನು ಆರಂಭಿಸಲಾಯಿತು.
ಬೇಸಿಗೆ ಯೋಗ ಶಿಬರಕ್ಕೆ ಚಾಲನೆ ನೀಡಿ ಮಾತನಾಡಿದ ಕಂಪ್ಲಿ ತಾಲ್ಲೂಕು ಪತಂಜಲಿ ಯೋಗ ಸಮಿತಿ ತಾಲ್ಲೂಕು ಪ್ರಭಾರಿ ಡಿ.ಮೌನೇಶ್, ಏ.4 ರಿಂದ ಮೇ.30 ರವರೆಗೆ ಪ್ರತಿ ದಿನ ಬೆಳಿಗ್ಗೆ 5-45 ರಿಂದ 7-15ರವರೆಗೆ ಯೋಗ ಶಿಬಿರ ನಡೆಯಲಿದೆ. ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಮಧುಮೇಹ,ಅಸ್ತಮಾ, ರಕ್ತದೊತ್ತಡ, ಬೆನ್ನುನೋವು, ಮಂಡಿನೋವು ಮೊದಲಾದ ರೋಗಗಳನ್ನು ತಡೆಗಟ್ಟಬಹುದಾಗಿದೆ. ವಿಶೇಷವಾಗಿ ಮಕ್ಕಳು ನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ಬೆಳವಣಿಗೆ, ಸದೃಡ ದೇಹ, ಜ್ಞಾಪಕಶಕ್ತಿ, ಏಕಾಗ್ರತೆ, ರೋಗ ನಿರೋಧಕ ಶಕ್ತಿ ಉತ್ತಮ ಸಂಸ್ಕಾರವನ್ನು ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ವಿಶೇಷ ಬೇಸಿಗೆ ಯೋಗ ಶಿಬಿರನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಕಂಪ್ಲಿ ತಾಲ್ಲೂಕು ಪತಂಜಲಿ ಯೋಗ ಸಮಿತಿ ಇಂತಹ ವಿಶೇಷ ಶಿಬಿರನ್ನು ಆಯೋಜಿಸಿದ್ದು, ಪಟ್ಟಣದ ಪಾಲಕರು ತಮ್ಮ ಮಕ್ಕಳಿಗೆ ಯೋಗ ಅಭ್ಯಾಸ ಮಾಡಲು ಪ್ರೇರೇಪಿಸಬೇಕು ಹಾಗೂ ಮಕ್ಕಳು ಇಂತಹ ಯೋಗ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಶಿಬಿರಕ್ಕೆ ನಿತ್ಯ ಆಗಮಿಸಬೇಕೆಂದರು.
ನಂತರ ಮಕ್ಕಳಿಗೆ ವಿವಿಧ ಯೋಗಾ ಆಸನಗಳನ್ನು, ಧ್ಯಾನ,ಪ್ರಾಣಾಯಾಮದ ಬಂಗಿಗಳನ್ನು, ಸೂರ್ಯ ನಮಸ್ಕಾರ, ಪ್ರಾರ್ಥನೆಯನ್ನು ಹೇಳಿಕೊಡಲಾಯಿತು. ಕೊನೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವಾದ ಮೊಳಕೆಯೊಡೆದ ಕಾಳುಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ 50 ರಿಂದ 60ಕ್ಕೂ ಅಧಿಕ ಮಕ್ಕಳು, ಹಿರಿಯ ನಾಗರೀಕರು ಭಾಗವಹಿಸಿದ್ದರು.
ಬೇಸಿಗೆ ಯೋಗ ಶಿಬಿರದಲ್ಲಿ ಎಸ್.ಜಿ.ಚಿತ್ರಗಾರ, ಹಿರಿಯರಾದ ತಿಪ್ಪೇಸ್ವಾಮಿ,ಯೋಗ ಸಾಧಕರಾದ ವಿರೂಪಾಕ್ಷಿ, ಶಿವಮೂರ್ತಿ, ರಾಜಾರಾಮ್ ಗಾಂಧಿ, ಚಂದ್ರಪ್ಪ, ನಿರ್ಮಲಮ್ಮ, ರುದ್ರಮ್ಮ, ಲಲಿತಮ್ಮ, ಉಮಾ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















