
ಬೆಳಗಾವಿ ಲೋಕಾಯುಕ್ತ ದಾಳಿ: ದಿನಗೂಲಿ ನೌಕರನಿಂದ ಕೋಟಿ ಕುಬೇರನಾದ ಎಇಇ ಅಜಯಸಿಂಗ್ ರಜಪೂತ್ ಬಯಲು..!
ಬೆಳಗಾವಿಯಲ್ಲಿ ನಡೆದ ಲೋಕಾಯುಕ್ತ ದಾಳಿ ಭಾರೀ ಸಂಚಲನ ಮೂಡಿಸಿದೆ. ನಗರಾಭಿವೃದ್ಧಿ ಕೋಶ (DUDC)ನಲ್ಲಿ ಎಇಇ ಆಗಿರುವ ಅಜಯಸಿಂಗ್ ರಜಪೂತ್ ಮನೆ ಸೇರಿದಂತೆ ಹಲವು ಕಡೆಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಬೆಚ್ಚಿಬೀಳಿಸುವ ಅಕ್ರಮ ಆಸ್ತಿ ಪತ್ತೆಯಾಗಿದೆ.
1992ರಲ್ಲಿ ದಿನಗೂಲಿ ನೌಕರನಾಗಿ ಸೇವೆ ಆರಂಭಿಸಿದ್ದ ಅಜಯಸಿಂಗ್, ಹಂತ ಹಂತವಾಗಿ ಮೇಲೇರಿ ಇಂದು ಕೋಟ್ಯಂತರ ಆಸ್ತಿ ಹೊಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಮೂರು ದಿನಗಳ ಕಾಲ ನಡೆದ ಸರ್ಚ್ ಆಪರೇಷನ್ನಲ್ಲಿ 14 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ದಾಳಿಯ ವೇಳೆ ಡೈಮಂಡ್ ನೆಕ್ಲೇಸ್, ವಜ್ರದ ಉಂಗುರಗಳು, ಬಂಗಾರದ ಗಟ್ಟಿಗಳು ಸೇರಿದಂತೆ ಒಟ್ಟು 5.96 ಕೆಜಿ ಚಿನ್ನ ಮತ್ತು 5 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. ಜೊತೆಗೆ 3.12 ಕೋಟಿ ರೂ. ಬ್ಯಾಂಕ್ ಠೇವಣಿ, ಐಷಾರಾಮಿ ಕಾರು-ಬೈಕ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಇಷ್ಟೇ ಅಲ್ಲದೆ, ಹೆಂಡತಿ ಹಾಗೂ ಅತ್ತೆಯ ಹೆಸರಿನಲ್ಲಿ ಇಟ್ಟಿದ್ದ SBI ಲಾಕರ್ಗಳಲ್ಲೂ ಚಿನ್ನಾಭರಣಗಳು ಪತ್ತೆಯಾಗಿವೆ. ಹುಕ್ಕೇರಿ, ಹುಬ್ಬಳ್ಳಿ, ಗೋಕಾಕ್ ಸೇರಿದಂತೆ ವಿವಿಧ ಕಡೆಗಳಲ್ಲಿ 18 ನಿವೇಶನಗಳ ದಾಖಲೆಗಳು ಸಿಕ್ಕಿವೆ. ಬೆಳಗಾವಿಯ ಆಂಜನೇಯ ನಗರದಲ್ಲಿ ಮೂರು ಮನೆಗಳಿದ್ದು, ಒಂದರಲ್ಲಿ ಅರ್ಧ ಕೆಜಿ ಚಿನ್ನ ಪತ್ತೆಯಾಗಿದೆ.
ಹುಕ್ಕೇರಿ SBI ಲಾಕರ್ನಲ್ಲಿ 400 ಗ್ರಾಂ ಚಿನ್ನ, ಗ್ರಾಮೀಣ ಬ್ಯಾಂಕ್ಗಳಲ್ಲಿ ಚಿನ್ನ-ಬೆಳ್ಳಿ ಗಟ್ಟಿಗಳು ಸಿಕ್ಕಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.
ಮೂಲತಃ ಹುಕ್ಕೇರಿಯವರಾದ ಅಜಯಸಿಂಗ್, 2008ರಲ್ಲಿ ಖಾಯಂ ಸೇವೆಗೆ ಸೇರಿ ಬಳಿಕ ಎಂಜಿನಿಯರಿಂಗ್ ಹುದ್ದೆಗಳಲ್ಲಿ ಏರಿಕೆಯಾಗುತ್ತಾ ಎಇಇ ಹುದ್ದೆವರೆಗೆ ಬಂದಿದ್ದಾರೆ. ಆದರೆ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಸಿಪಿಐ ನಿರಂಜನ ಪಾಟೀಲ ಅವರಿಗೆ ದೊರೆತ ಗೌಪ್ಯ ಮಾಹಿತಿ ಆಧರಿಸಿ, ಎಸ್ಪಿ ಪ್ರಸನ್ ದೇಸಾಯಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಒಟ್ಟಾರೆ, ದಿನಗೂಲಿ ನೌಕರನಿಂದ ಕೋಟಿ ಕುಬೇರನಾಗಿರುವ ಈ ಪ್ರಕರಣ, ಸರ್ಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಮುಖವಾಡವನ್ನು ಮತ್ತೊಮ್ಮೆ ಬಿಚ್ಚಿಟ್ಟಿದೆ. ಇನ್ನೂ ಹೆಚ್ಚಿನ ಅಕ್ರಮ ಆಸ್ತಿ ಇರುವ ಶಂಕೆಯಿಂದ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.
ವರದಿ ವಿಠ್ಠಲ ಖೋಕಾಟೆ




















