
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೈಲೇಶ್ವರ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ‘ಪ್ರಜಾಸೌಧ’ದ ಸ್ಥಳ ಆಯ್ಕೆಯನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು ಇಂದು 49ನೇ ದಿನಕ್ಕೆ ಯಶಸ್ವಿಯಾಗಿ ಪೂರೈಸಿದೆ. ದಿನ ಕಳೆದಂತೆ ಈ ಹೋರಾಟಕ್ಕೆ ಸಾರ್ವಜನಿಕ ಬೆಂಬಲ ಹೆಚ್ಚುತ್ತಿದ್ದು, ಇಂದು ಪಟ್ಟಣದ ಆಶ್ರಯ ಕಾಲೋನಿ ಮೈನಾರಿಟಿ ಯಂಗ್ ಕಮಿಟಿಯ ಪದಾಧಿಕಾರಿಗಳು ಧರಣಿ ನಿರತರಿಗೆ ಸಾಥ್ ನೀಡಿದರು.
ನಿರ್ಜನ ಪ್ರದೇಶದಲ್ಲಿ ಸೌಧ ಬೇಡ: ಹೋರಾಟಗಾರರ ಪಟ್ಟು
ಪಟ್ಟಣದಿಂದ ಸುಮಾರು 4–5 ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ಸೌಧ ನಿರ್ಮಿಸಿದರೆ ರೈತರು, ಮಹಿಳೆಯರು ಮತ್ತು ವೃದ್ಧರಿಗೆ ಓಡಾಡಲು ತೊಂದರೆಯಾಗುತ್ತದೆ ಎಂಬುದು ನಾಗರಿಕರ ಪ್ರಮುಖ ಆಕ್ಷೇಪ. “ಸಾರ್ವಜನಿಕರಿಗೆ ಸುಲಭವಾಗಿ ಸಿಗುವ ಜಾಗದಲ್ಲಿ ಕಚೇರಿಗಳಿರಬೇಕು ಹೊರತು, ನಗರದಿಂದ ದೂರವಲ್ಲ” ಎಂದು ಹೋರಾಟಗಾರರು ಪ್ರತಿಪಾದಿಸುತ್ತಿದ್ದಾರೆ.
ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ದೇವರ ಹಿಪ್ಪರಗಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮೌನವನ್ನು ಖಂಡಿಸಿದರು. “ಜನರು ರಸ್ತೆಯಲ್ಲಿ ಕುಳಿತು 50 ದಿನಗಳಾಗುತ್ತಾ ಬಂದರೂ ಜನಪ್ರತಿನಿಧಿಗಳು ಇತ್ತ ಕಡೆ ಮುಖ ಮಾಡದಿರುವುದು ದುರ್ದೈವ. ಮತ ನೀಡಿದ ಜನರ ಸಂಕಷ್ಟಕ್ಕೆ ಸ್ಪಂದಿಸದ ಶಾಸಕರು ಇದ್ದೂ ಇಲ್ಲದಂತಾಗಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಭಾಗಿಯಾದ ಪ್ರಮುಖರು
ಈ ಸಂದರ್ಭದಲ್ಲಿ ಅಸ್ಲಾಂ ಜಮಖಂಡಿ,ಖಾಜಾಪಟೇಲ್ ಪಟೇಲ್, ರಫೀಕ್ ಬೀಳಗಿ, ಆಯುಸ ಸೋಲಾಪುರ, ಹುಸೇನ್ ಬೆಳ್ಳುಬ್ಬಿ, ನಬಿ ಪಾಲವಾಲೆ,ಜಾಕೀರ ಬೇಪಾರಿ, ಲಾಡಾನ ಮಕಾನದಾರ, ಸಾಹಿಲ ಜಮಖಂಡಿ ಮೊಬಿನ್ ತಳ್ಳಳ್ಳಿ, ತನ್ವೀರ್ ಬಿಸ್ತಿ,ಇರ್ಫಾನ್ ಅತ್ತಾರ, ರಿಹಾನ್ ಅತ್ತಾರ, ಆಸೀಫ್ ನದಾಫ, ಅಮಿತ್ ಮನಗೂಳಿ, ಪ್ರಕಾಶ್ ಹಜೇರಿ, ಪರಶುರಾಮ ತಂಗಡಗಿ ,ಸುರೇಶ ಹಜೇರಿ ,ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚಬಾಳ) ಮುತ್ತಪ್ಪ ಚಾಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ ಮುದಕಪ್ಪ ಬಡಿಗೇರ, ಸಿರಸಕುಮಾರ ಹಜೇರಿ, ಮಲ್ಲು ಮೇಟಿ, ಸೇರಿದಂತೆ ಅನೇಕರು ಮತ್ತು ಪಟ್ಟಣದ ಗಣ್ಯರು ಭಾಗವಹಿಸಿದ್ದರು.
ಮುಂದಿನ ಎಚ್ಚರಿಕೆ:
ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸ್ಥಳವನ್ನು ಬದಲಿಸದಿದ್ದರೆ, ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸಮಿತಿ ಎಚ್ಚರಿಸಿದೆ.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















