ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲ್ಲೂಕಿನ ಹೊಸೂರ ಗ್ರಾಮದ ಗಾಡಿಕೇರಿ ಓಣಿಯಲ್ಲಿ ದಿನಾಂಕ 14-04-2026ರಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದೊಂದಿಗೆ ಆಚರಿಸಲಾಯಿತು.
ಗ್ರಾಮಸ್ಥರು, ಯುವಕರು ಹಾಗೂ ಹಿರಿಯರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮಕ್ಕೆ ವಿಶೇಷ ಕಳೆ ತುಂಬಿತು.
ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ನಂತರ ನಡೆದ ಸಭೆಯಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕರಾದ ನಿತ್ಯಾನಂದ ಬರದೂರ ಅವರು, ಅಂಬೇಡ್ಕರ್ ಅವರು ಶೋಷಿತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಡೆಸಿದ ನಿರಂತರ ಹೋರಾಟವನ್ನು ಸ್ಮರಿಸಿದರು. ಸಮಾಜದಲ್ಲಿ ಅಸಮಾನತೆ ನಿವಾರಣೆಗಾಗಿ ಅವರು ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ಅಣ್ಣಪ್ಪ ಪೂ. ಲಮಾಣಿ ಅವರು ಮಾತನಾಡಿ, ಅಂಬೇಡ್ಕರ್ ಅವರ ಜೀವನವು ಪ್ರತಿಯೊಬ್ಬರಿಗೂ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ಅನುಸರಿಸುವುದರಿಂದ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಮಾನತೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ ಬಿ.ಹೆಚ್, ಶಂಕರಗೌಡ ಪಾಟೀಲ, ಮಂಜುನಾಥಗೌಡ ಲ್ಯಾವನಗೌಡ್ರು ಪಾಟೀಲ, ಬಸನಗೌಡ ಪಾಟೀಲ್, ಎಲ್ಲಪ್ಪ ಹೊಸಮನಿ, ಈರನಗೌಡ ಫ. ದೊಡ್ಡಗೌಡ್ರು, ಅನ್ವರಸಾಬ ಮುಲ್ಲಾ, ಬಾಪುನಗೌಡ ಕಿಡಕಿನಮನಿ, ಮುತ್ತುನಗೌಡ ಸಂಕನಗೌಡ್ರು, ಬಾಹುಬಲಿ ಧಾರವಾಡ, ಪಂಚಾಯತಿ ಕಾರ್ಯದರ್ಶಿಗಳಾದ ಸದಾನಂದ ಚಿಗಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಊರಿನ ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಮಾದೇವಪ್ಪ ಕರಿಯಪ್ಪ ಮಾದರ, ರಾಮಣ್ಣ ಕರೆಪ್ಪ ಮಾದರ, ಉಳವಪ್ಪ ಕರಿಯಪ್ಪ ಮಾದರ, ನಿಂಗಪ್ಪ ಪಕೀರಪ್ಪ ಮಾದರ, ಮಲಕಪ್ಪ ನೀಲಪ್ಪ ಮಾದರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಎಸ್.ಸಿ ಘಟಕ ಕಾಂಗ್ರೆಸ್ ಸಮಿತಿ) ಶೇಖಪ್ಪ ಡಿ. ಮಾದರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ವರದಿ ಬಸವರಾಜ ಎಸ್. ಎನ್.




















