ಬಾಳು ಬೆಳಗಿತು
ಕಷ್ಟದ ಮೂಟೆ ಕರಗಿತು
ಹರುಷದ ಶಂಖನಾದ ಮೊಳಗಿತು.
ಕೈಚಳಕ ತೋರಿತು
ನಾಲಿಗೆ ಹದ್ದು ಮೀರಿತು
ಮನಸು ನೋವಿನ ಕೆರೆಗೆ ಹಾರಿತು.
ಭೂಮಿ ಋಣವ ತೀರಿತು
ಬೆನ್ನಿಗೆ ಹೊರದ ಭಾರ ಹೇರಿತು
ಅಜ್ಞಾನ ಕಲ್ಲು ಮುಳ್ಳಿನ ದಾರಿ ತೋರಿತು.
ನೆಮ್ಮದಿ ಕಳೆಯಿತು
ಸತ್ಯದ ತಲೆ ಕೆಳಗಾಯಿತು
ಅನ್ಯಾಯವೇ ಮೇಲೆದ್ದು ಬೆಳೆಯಿತು.
ಮೋಸ ಕೈಮಾಡಿ ಕರೆಯಿತು
ನುಂಗದ ನೋವು ಕೊರೆಯಿತು
ಬಡತನವೇ ಮೇಲೆಂದು ಮೆರೆಯಿತು.
ಮಾತು ಸೋತು ಮರುಗಿತು
ಹೆತ್ತ ಕರುಳು ಕನಿಕರದಿ ಕರಗಿತು
ನೊಂದ ಮನಸ್ಸೊಂದು ಸೊರಗಿತು.
ಸುಳ್ಳಿಗಂಜಿ ಸತ್ಯ ಸರಿಯಿತು
ಅಧರ್ಮಕ್ಕೆ ಹೆದರಿ ಧರ್ಮ ಮರುಗಿತು
ಅನ್ಯಾಯದೆದುರು ನ್ಯಾಯ ಮಂಡಿಯೂರಿತು.
- ಡಾ. ಅಶೋಕ ಕುಮಾರ ಮಟ್ಟಿ, ಯಾದಗಿರಿ




















