ಬಳ್ಳಾರಿ / ಕಂಪ್ಲಿ : ಶಾಂತಯುತ ಹಾಗೂ ಕಾನೂನುಬದ್ಧವಾಗಿ ಹೋರಾಟ ನಡೆಸುತ್ತಿದ್ದ ಕುಡುತಿನಿ ರೈತರ ಮೇಲೆ ಇಂಜಕ್ಷನ್ ಆರ್ಡರ್ ತಂದು ಧರಣಿ ತಡೆಯಲು ಕ್ರಮ ಕೈಗೊಂಡಿರುವುದನ್ನು ಖಂಡಿಸಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ತಡೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ಹೋರಾಟ ನಡೆಯಲಿದೆ ಎಂದು ಆರೋಪಿಸಿ, ಸಮಿತಿಯು ನ್ಯಾಯಾಲಯಕ್ಕೆ ಕೆಐಡಿಬಿಯಿಂದ ಸುಳ್ಳು ಮಾಹಿತಿ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಆಧಾರದ ಮೇಲೆ ರೈತರ ವಿರುದ್ಧ ಇಂಜಕ್ಷನ್ ಆದೇಶ ಪಡೆಯಲಾಗಿದೆ ಎನ್ನಲಾಗಿದೆ.
ಇದೇ ವೇಳೆ, ಇಂದು ಬೆಳಿಗ್ಗೆ 6 ಗಂಟೆಯಿಂದ ಜೂನ್ 7ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಈ ಕ್ರಮವನ್ನು ವಿರೋಧಿಸಿ ನೂರಾರು ರೈತರು ತಮ್ಮ ಜಮೀನುಗಳತ್ತ ತೆರಳಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದವೂ ನಡೆದಿದೆ. ರೈತರು ಸ್ಥಳದಲ್ಲೇ ಧರಣಿ ನಡೆಸುವುದಾಗಿ ಪಟ್ಟು ಹಿಡಿದ ಹಿನ್ನೆಲೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ಕಂಪ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು.
ಠಾಣೆಯಲ್ಲಿ ಹೋರಾಟಗಾರರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದರೂ, “ನಮ್ಮ ನ್ಯಾಯಯುತ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ಊಟ ಮಾಡುವುದಿಲ್ಲ” ಎಂದು ಕೆಲವರು ಉಪವಾಸ ಸತ್ಯಾಗ್ರಹಕ್ಕೆ ಮುಂದಾದರು. ಪರಿಣಾಮವಾಗಿ ಕೆಲ ಹೋರಾಟಗಾರರು ಅಸ್ವಸ್ಥಗೊಂಡು ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾದರು.
ಅಸ್ವಸ್ಥಗೊಂಡವರ ಆರೋಗ್ಯವನ್ನು ವಿಚಾರಿಸಿದ ಕಂಪ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಾಸುಕುಮಾರ್ ಅವರು ಹೋರಾಟಗಾರರಿಗೆ ಊಟ ಮಾಡುವಂತೆ ಮನವಿ ಮಾಡಿದರು.
ರೈತರಿಗೆ ಯಾವುದೇ ತೊಂದರೆಯಾದರೂ ನೇರ ಹೊಣೆ ಜಿಲ್ಲಾಡಳಿತವೇ ಕಾರಣ ಎಂದು ರೈತ ಮುಖಂಡ ಬಿ.ವಿ ಗೌಡ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಪರಿಸ್ಥಿತಿ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















