ರಜಾ ಸಮಯ ಕಳೆದು ಇನ್ನೇನು ಮಕ್ಕಳೆಲ್ಲ ಶಾಲೆಗೆ ಹೋಗಲು ಅಣಿಯಾಗುತ್ತಿದ್ದಾರೆ. ರಜೆಯಲ್ಲಿ ತಾವು ಕಳೆದ ಸಂತಸದ ಸಮಯವನ್ನು ಮೆಲುಕು ಹಾಕುತ್ತ ಶಾಲೆ ಕಡೆಗೆ ಹೆಜ್ಜೆ ಇಡಲು ತಯಾರಿ ಪ್ರಾರಂಭಿಸಿದ್ದಾರೆ.
ರಾಜ್ಯದಲ್ಲಿ ಶಾಲೆ ಶುರುವಾಗ್ತಿದೆ. ಬೇಸಿಗೆ ರಜೆ ಮುಗಿಸಿ ಮಕ್ಕಳು ಮತ್ತೆ ಜ್ಞಾನದ ಹಾದಿಯತ್ತ ಹೆಜ್ಜೆ ಇಡುತ್ತಿದ್ದಾರೆ. ಮಕ್ಕಳನ್ನು ವೆಲ್ ಕಮ್ ಮಾಡಲು ಶಾಲೆಗಳು ಸಜ್ಜಾಗಿವೆ.
ಶಾಲಾ ಪ್ರಾರಂಭ: ಹೊಸ ಉತ್ಸಾಹದ ದಿನಗಳು :
ಬೇಸಿಗೆ ರಜೆಯ ಮೋಜನ್ನು ಮುಗಿಸಿ, ಪುಸ್ತಕ, ಕಲಿಕೆ ಮತ್ತು ಸ್ನೇಹಿತರ ಬಳಗದೊಂದಿಗೆ ಬೆರೆಯಲು ಮಕ್ಕಳು ಉತ್ಸುಕರಾಗಿದ್ದಾರೆ. ಶೈಕ್ಷಣಿಕ ವರ್ಷದ ಆರಂಭದ ದಿನಗಳು ಮಕ್ಕಳ ಪಾಲಿಗೆ ಅತ್ಯಂತ ಮಹತ್ವದಾಗಿರುತ್ತವೆ. ಯಾಕೆಂದರೆ ಹೊಸ ತರಗತಿ, ಹೊಸ ಪುಸ್ತಕ, ಹೊಸ ಶಿಕ್ಷಕರು, ಹೊಸ ಕನಸುಗಳು.
ಶಾಲೆ ಆರಂಭದ ದಿನಗಳಲ್ಲಿ ಮಕ್ಕಳು ಸಮಯಕ್ಕೆ ಸರಿಯಾಗಿ ಏಳುವುದು, ಓದುವುದು ಮತ್ತು ಆಟದಲ್ಲಿ ತೊಡಗಿಸಿಕೊಳ್ಳುವಂತೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಕಲ್ಪಿಸುವುದು ಪಾಲಕರ ಕರ್ತವ್ಯ. ರಜೆಯ ನಂತರ ಶಾಲೆಗೆ ಮರಳುವಾಗ ಮಕ್ಕಳಲ್ಲಿ ಕಲಿಕೆಯ ಹೊಸ ಉತ್ಸಾಹವನ್ನು ತುಂಬಲು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು.
ಪಾಲಕರ ಚಿಂತೆ – ಸರ್ಕಾರಿ vs ಖಾಸಗಿ :
ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರೂ ಸಿದ್ಧವಾಗುತ್ತಿದ್ದಾರೆ. ಆದರೆ ಇಲ್ಲಿ ಎರಡೂ ಚಿತ್ರಣ ಕಾಣುತ್ತದೆ:
- ಸರಕಾರಿ ಶಾಲೆ: ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ನೋಟ್ ಬುಕ್, ಸಮವಸ್ತ್ರ, ಶೂ-ಸಾಕ್ಸ್, ಹಾಗೂ ಸೈಕಲ್ ಮತ್ತು ಮಧ್ಯಾಹ್ನ ಬಿಸಿ ಊಟ, ಹಾಲು ಪೂರೈಕೆಯಾಗುತ್ತಿರುವುದರಿಂದ ಪಾಲಕರಿಗೆ ಆ ಕುರಿತ ಚಿಂತೆ ಇಲ್ಲ. ಇದರಿಂದ ಶಾಲಾ ಹಾಜರಾತಿಯಲ್ಲಿ ಪ್ರಗತಿ ಆಗಿದೆ. ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಪ್ರಗತಿ ಕಾಣುತ್ತಿರುವುದು ಶೈಕ್ಷಣಿಕ ಅಭಿವೃದ್ಧಿಯ ಸಂಕೇತವಾಗಿದೆ.
- ಖಾಸಗಿ ಶಾಲೆ: ಆದರೆ ಖಾಸಗಿ ಶಾಲೆಗೆ ಹೋಗುವ ಮಕ್ಕಳ ಪಾಲಕರಿಗೆ ಮುಂಬರುವ ಖರ್ಚಿನ ಬಗ್ಗೆ ತಲೆಬಿಸಿ ಶುರುವಾಗುತ್ತಿದೆ. ಶಾಲಾ ಶುಲ್ಕ, ಮಕ್ಕಳಿಗೆ ಹೊಸ ಬಟ್ಟೆ, ಸ್ಕೂಲ್ ಬ್ಯಾಗ್ ಮುಂತಾದವುಗಳಿಗೆ ಹಣ ಹೊಂದಿಸುವ ಕುರಿತು ಆಲೋಚಿಸುವಂತಾಗಿದೆ. ಇದೇ ಸಂದರ್ಭದಲ್ಲಿ ಮಳೆಗಾಲವೂ ಪ್ರಾರಂಭವಾಗುತ್ತಿರುವುದರಿಂದ ಶಾಲಾ ಮಕ್ಕಳಿಗೆ ರೇನ್ ಕೋಟ್, ಕೊಡೆ ಮುಂತಾದ ಪರಿಕರ ತೆಗೆಸಿಕೊಡಬೇಕಾಗಿದೆ.
ಶಾಲಾ ಪ್ರಾರಂಭೋತ್ಸವ – ಅದ್ದೂರಿ ಸ್ವಾಗತ:
ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ವತಿಯಿಂದಲೂ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಾಲಾ ಪ್ರಾರಂಭದ ದಿನ ಪ್ರತಿ ಸರಕಾರಿ ಶಾಲೆಯಲ್ಲಿಯೂ ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಲಾ ಪ್ರಾರಂಭಕ್ಕೂ ಒಂದು ದಿನ ಮೊದಲೇ ಶಾಲೆಗೆ ತೆರಳಿ ಸ್ವಚ್ಛತೆ ಸೇರಿದಂತೆ ವಿವಿಧ ತಯಾರಿಗಳನ್ನು ಮಾಡಿಕೊಳ್ಳಲು ಇಲಾಖೆಯಿಂದ ಈಗಾಗಲೇ ಶಿಕ್ಷಕರಿಗೆ ಸೂಚಿಸಲಾಗಿದೆ. ಶಾಲಾ ಪ್ರಾರಂಭದ ದಿನ ತಳಿರು ತೋರಣಗಳಿಂದ ಶಾಲಾ ಕೊಠಡಿಗಳನ್ನು ಅಲಂಕರಿಸಲು ಹಾಗೂ ಊರಿನ ಗಣ್ಯರ ಉಪಸ್ಥಿತಿಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ನಡೆಸಬೇಕೆಂದು ಶಿಕ್ಷಣ ಇಲಾಖೆ ಈಗಾಗಲೇ ಸಂಬಂಧ ಪಟ್ಟವರಿಗೆ ತಿಳಿಸಲಾಗಿದೆ.
‘ಶಾಲೆ ಕಡೆ ನನ್ನ ನಡೆ’ – ಯಾರೂ ಹೊರಗುಳಿಯಬಾರದು :
ಮೇ 20ರಿಂದ ಮೇ 31ರ ವರೆಗೆ ‘ಶಾಲೆ ಕಡೆ ನನ್ನ ನಡೆ’, ‘ಶಾಲೆಗೆ ಬರಲು ನನಗೊಂದು ಅವಕಾಶ’ ಎಂಬ ವಿಶೇಷ ದಾಖಲಾತಿ ಆಂದೋಲನ ಆಯಾ ಶಾಲಾ ವ್ಯಾಪ್ತಿಯಲ್ಲಿ ಶಿಕ್ಷಕರ ನೇತೃತ್ವದಲ್ಲಿ ನಡೆಯುತ್ತಿದೆ. ಶಾಲೆಯಿಂದ ಹೊರಗುಳಿದ, ಶಾಲೆಗೆ ದಾಖಲಾಗಿ ಶಾಲೆಗೆ ಬಾರದೇ ಇರುವ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಆಂದೋಲನ ಇದಾಗಿದೆ.
ಶಿಕ್ಷಣ ಎಲ್ಲರ ಹಕ್ಕು. ಒಂದು ಮಗು ಕೂಡ ಶಾಲೆಯಿಂದ ವಂಚಿತವಾಗಬಾರದು ಎಂಬುದು ಈ ಆಂದೋಲನದ ಆಶಯ.
ಕೊನೆಯ ಮಾತು: ಕನಸಿನ ರೆಕ್ಕೆ ಕಟ್ಟಿಕೊಳ್ಳುವ ಸಮಯ —
ಇಂದು ಸರಕಾರ ಶಾಲಾ ಮಕ್ಕಳಿಗೆ ಸಕಲ ಸೌಲಭ್ಯ ನೀಡುತ್ತಿದೆ. ಆದರೆ ನಿಜವಾದ ಶಿಕ್ಷಣ ಸಿಗುವುದು ತರಗತಿ ಕೊಠಡಿಯಲ್ಲಿ ಮಾತ್ರ ಅಲ್ಲ. ಮನೆಯಲ್ಲಿ, ಸಮಾಜದಲ್ಲಿ, ಆಟದ ಮೈದಾನದಲ್ಲಿ ಸಿಗುತ್ತದೆ.
ಪಾಲಕರೇ, ಮಕ್ಕಳ ಬ್ಯಾಗ್‌ನ ತೂಕ ನೋಡಬೇಡಿ, ಕನಸಿನ ತೂಕ ನೋಡಿ. ಮಾರ್ಕ್ಸ್ ಕಾರ್ಡ್ ಕೇಳಬೇಡಿ, ಕಲಿತದ್ದೇನು ಎಂದು ಕೇಳಿ.
ಶಿಕ್ಷಕರೇ, ನೀವು ಪಾಠ ಹೇಳುವ ಯಂತ್ರಗಳಲ್ಲ, ದೀಪ ಹಚ್ಚುವ ಕೈಗಳು. ಒಂದು ಮಗುವಿನ ಭವಿಷ್ಯ ರೂಪಿಸುವ ಶಿಲ್ಪಿಗಳು ನೀವು.
ಮಕ್ಕಳೇ, ಪುಸ್ತಕ ನಿಮ್ಮ ಗೆಳೆಯ, ಶಾಲೆ ನಿಮ್ಮ ದೇವಾಲಯ, ಜ್ಞಾನ ನಿಮ್ಮ ಆಸ್ತಿ. ಆಡಂಬರದ ಮೊಬೈಲ್‌ಗಿಂತ ಅಕ್ಷರದ ಬೆಳಕು ಶ್ರೇಷ್ಠ.
ಆಶಯ ಮಾತು:
ಹೊಸ ಬ್ಯಾಗ್, ಹೊಸ ಪುಸ್ತಕ, ಹೊಸ ಸಮವಸ್ತ್ರದ ಜೊತೆಗೆ ಹೊಸ ಕನಸು ಹೊತ್ತು ಶಾಲೆಗೆ ಹೋಗಿ.ನಾಳಿನ ಕರ್ನಾಟಕವನ್ನು ಕಟ್ಟುವವರು ಮುದ್ದಿನ ಮಕ್ಕಳು ನೀವೇ.
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ್ ಜಿಲ್ಲೆ.




















