ಬಳ್ಳಾರಿ / ಕಂಪ್ಲಿ : ಸಮಾಜದ ಕೆಲಸ ದೇವರ ಕೆಲಸ ಎಂಬಂತೆ ವಾಸವಿ ಯುವಜನ ಸಂಘದ ನೂತನ ಪದಾಧಿಕಾರಿಗಳು ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸುವ ಜೊತೆಗೆ ಇನ್ನಿತರ ಸಮಾಜ ಸೇವೆಗಳಿಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಆರ್ಯವೈಶ್ಯ ಯುವಜನ ಸಂಘದ ರಾಜ್ಯಾಧ್ಯಕ್ಷ ಭೀಮ್‌ರಾಜ್ ಗಂಗಾವತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಪ್ಲಿ ವಾಸವಿ ಯುವಜನ ಸಂಘದಿಂದ ಸಮೀಪದ ಆನೆಗುಂದಿಯ ಅಂಜನಾದ್ರಿ ಬಳಿಯ ಹನುಮನಹಳ್ಳಿಯ ಹಂಪಿ ಡೆಲ್‌ಮೌಂಟ್ ರೆಸಾರ್ಟ್ನಲ್ಲಿ ಆಯೋಜಿಸಿದ್ದ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಅಭಿವೃದ್ಧಿ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ, ಶಿಸ್ತು, ಸಂಯಮ ಕಲಿಸುವುದು ಕೂಡ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷ ಎನ್.ತಿರುಮಲೇಶ ಅಧಿಕಾರ ಸ್ವೀಕರಿಸಿ ಮಾತನಾಡಿ, ಯುವಜನ ಸಂಘವೂ ನಮ್ಮನ್ನು ಗುರುತಿಸಿ, ಕಂಪ್ಲಿ ಅಧ್ಯಕ್ಷರನ್ನಾಗಿ ಮಾಡಿರುವುದು ಖುಷಿಯಾಗಿದ್ದು, ಈ ಜವಾಬ್ದಾರಿಗೆ ತಕ್ಕಂತೆ ಕೆಲಸ ಮಾಡಲಾಗುವುದು. ಆರ್ಯವೈಶ್ಯ ಮತ್ತು ವಾಸವಿ ಯುವಜನ ಸಂಘದ ಪದಾಧಿಕಾರಿಗಳ ಸಹಕಾರದೊಂದಿಗೆ ಮತ್ತು ಸ್ಥಳೀಯ ಮುಖಂಡರ ಮಾರ್ಗದರ್ಶನದಲ್ಲಿ ಸಮಾಜದ ಏಳಿಗೆಗೆ ಮತ್ತು ಇನ್ನಿತರ ಸಮಾಜ ಸೇವೆಗೆ ನಿರಂತರವಾಗಿ ಶ್ರಮಿಸಲಾಗುವುದು ಎಂದರು.
ವಾಸವಿ ಯುವಜನ ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ಮಂಜೇಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ನಂತರ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಬದಲ್ಲಿ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯ ಸಹ ಕಾರ್ಯದರ್ಶಿ ಕೆ.ಜಗದೀಶ, ಆರ್ಯವೈಶ್ಯ ಸಂಘದ ಧರ್ಮಕರ್ತ ವೈ.ಚಂದ್ರಮೋಹನ ಶ್ರೇಷ್ಠಿ, ಕಂಪ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿ.ವಿ.ಸುಬ್ಬರಾವ್, ವಾಸವಿ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಬಿ.ಕೋಟೇಶ್ವರ್, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ರಮಾದೇವಿ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ರಾಜಾರಾವು ಸೇರಿದಂತೆ ಅನೇಕರಿದ್ದರು.
ಪದಗ್ರಹಣ: ಇಲ್ಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಎನ್.ತಿರುಮಲೇಶ, ಉಪಾಧ್ಯಕ್ಷರಾಗಿ ಎಂ.ಸಂದೀಪ್, ಸಿ.ಸುನೀಲ್ ಕುಮಾರ, ಮಾಧ್ಯಮ ಸಲಹೆಗಾರರಾಗಿ ಕೆ.ಜಗದೀಶ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಸರ್ವಾನುಮತದಿಂದ ಆಯ್ಕೆಗೊಂಡು ಪದಗ್ರಹಣ ಮಾಡಿದರು.
ವರದಿ : ಜಿಲಾನಸಾಬ್ ಬಡಿಗೇರ್




















