ಬಾಗಲಕೋಟೆ/ ಮುಧೋಳ : ಗುರುವಿನಲ್ಲಿ ಶರಣಾಗತಿಯನ್ನು ಹೊಂದಿ ಮನದಲ್ಲಿರುವ ಅಹಂಕಾರವನ್ನ ತ್ಯಾಗ ಮಾಡಿ ಗುರು ಆಜ್ಞೆಯನ್ನು ಪಾಲನೆ ಮಾಡುವುದರೊಂದಿಗೆ ಗುರುಸೇವೆಯಲ್ಲಿ ಸ್ವಾರ್ಥವಿಲ್ಲದ ಭಕ್ತಿ ಮಾಡಿದಾಗ ಮಾತ್ರ ಮುಕ್ತಿ ಹೊಂದಲು ಸಾಧ್ಯ ಎಂದು ಮುಗಳಖೋಡದ ಶ್ರೀಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಆಲಗುಂಡಿ ಬಿಕೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ಚಿಂತನ ಬಳಗವು ಆಯೋಜಿಸಿದ 33ನೇ ಶಿವಾನುಭವ ಕಾರ್ಯಕ್ರಮದಲ್ಲಿ “ಗುರುಪೂರ್ಣಿಮೆ” ವಿಷಯವನ್ನು ಆಧಾರವಾಗಿಟ್ಟುಕೊಂಡು ಮಾತನಾಡುತ್ತಾ ಗುರುವಿನ ವಾಕ್ಯವನ್ನು ಶ್ರದ್ಧಾ ಭಕ್ತಿಯಿಂದ ಶ್ರವಣ ಮಾಡಿದಾಗ ಜ್ಞಾನವು ಪ್ರಾಪ್ತಿಯಾಗುತ್ತದೆ. ಗುರು ಕರಣೆ ಸಂಪಾದಿಸದವನಿಗೆ ಏನು ಮಾಡಿದರೂ ಜ್ಞಾನ ದೊರೆಯಲಾರದು ಎಂದರು.
ಸದ್ಗುರು ಶಿವಲಿಂಗೇಶ್ವರ ಮಠದ ಪೂಜ್ಯರಾದ ಸಿದ್ದಯ್ಯ ಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸವ ಚಿಂತನ ಬಳಗದ ಮುಖ್ಯಸ್ಥರಾದ ಸದುಗೌಡ ಸೈಯಪ್ಪಗೋಳ .ಸುಹಾಸಿನಿ ಮುರನಾಳ. ಗಿರಿಜಮ್ಮ ತೊರಲಿ. ವಿವೇಕಾನಂದ ಹಿರೇಮಠ. ಮುಂತಾದವರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಬಸವ ಬಳಗದ ಮುಖಂಡರಾದ ಹನುಮಂತ ಕಲಬಿ ಸ್ವಾಗತಿಸಿ ವಂದಿಸಿದರು.
– ಕರುನಾಡ ಕಂದ ಸುದ್ದಿ




















