ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಮಾಜಿಕ ಕಳಕಳಿ, ನೊಂದವರ ಪರ ಧ್ವನಿ

ತರಳಬಾಳು ಶ್ರೀಗಳ ನೈಜ ವ್ಯಕ್ತಿತ್ವದ ವಾಸ್ತವ ನಿಲುವು

ಕರ್ನಾಟಕದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಇತಿಹಾಸದಲ್ಲಿ ಮಠಮಾನ್ಯಗಳ ಪಾತ್ರ ಮಹತ್ತರವಾದದ್ದು. ಮಠಗಳು ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗದೆ, ಅಕ್ಷರ, ಅನ್ನ ಮತ್ತು ಜ್ಞಾನದಾಸೋಹದ ಮೂಲಕ ಸಾಮಾನ್ಯ ಜನತೆಯ ಬದುಕಿಗೆ ಬೆಳಕಾಗಿವೆ. ಇಂತಹ ಪರಂಪರೆಯಲ್ಲಿ ಸಿರಿಗೆರೆಯ ತರಳಬಾಳು ಬೃಹನ್ಮಠ ಮತ್ತು ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕೊಡುಗೆ ನಾಡಿಗೆ ಚಿರಪರಿಚಿತ. ವಿಶೇಷವಾಗಿ ರೈತ ಸಮುದಾಯ ಮತ್ತು ಗ್ರಾಮೀಣಾಭಿವೃದ್ಧಿಯ ವಿಚಾರದಲ್ಲಿ ಶ್ರೀಗಳು ಮಾಡಿರುವ ನಿಸ್ವಾರ್ಥ ಸೇವೆ ಇತಿಹಾಸ ಪುಟಗಳಲ್ಲಿ ದಾಖಲಾರ್ಹ.
ಬರಪೀಡಿತ ಮಧ್ಯ ಕರ್ನಾಟಕದ ಬಯಲುಸೀಮೆ ಭಾಗದಲ್ಲಿ ರೈತರ ಬದುಕು ನೀರಿನ ಕೊರತೆಯಿಂದ ಕಂಗಾಲಾಗಿದ್ದಾಗ, ಸರ್ಕಾರಗಳ ಮೇಲೆ ಒತ್ತಡ ತಂದು ಕೆರೆ ತುಂಬಿಸುವ ಬೃಹತ್ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸಿದ ಕೀರ್ತಿ ತರಳಬಾಳು ಶ್ರೀಗಳಿಗೆ ಸಲ್ಲುತ್ತದೆ. ಶಾಂತಿಸಾಗರ (ಸೂಳೆಕೆರೆ) ಹಾಗೂ ಭದ್ರಾ ನದಿಯಿಂದ ನೂರಾರು ಕೆರೆಗಳಿಗೆ ನೀರು ಹರಿಸುವ ಯೋಜನೆಗಳು ಶ್ರೀಗಳ ನಿರಂತರ ಪರಿಶ್ರಮ, ಸಾಮಾಜಿಕ ಆಂದೋಲನ ಮತ್ತು ದೃಢ ಸಂಕಲ್ಪದಿಂದಲೇ ಅನುಷ್ಠಾನಗೊಂಡವು. ರೈತರ ಹೊಲ-ಗದ್ದೆಗಳಿಗೆ ನೀರು ಒದಗಿಸಿ, ಅಂತರ್ಜಲ ಮಟ್ಟ ಹೆಚ್ಚಿಸಿ, ಕೃಷಿಕರ ಕಣ್ಣೀರು ಒರೆಸಿದ ಧೀಮಂತ ಸಂತರು ಅವರು. ಕೃಷಿ ಸಂಕಷ್ಟದಲ್ಲಿದ್ದಾಗ ಅನ್ನದಾತನ ಪರವಾಗಿ ನಿಂತು ಹೋರಾಡಿದ ಇಂತಹ ಪೂಜ್ಯರನ್ನು ಕೇವಲ ಒಂದು ರಾಜಕೀಯ ಅಥವಾ ಆಡಳಿತಾತ್ಮಕ ವಿವಾದದ ಚೌಕಟ್ಟಿನಲ್ಲಿ ನೋಡುವುದು ತೀರಾ ಅನ್ಯಾಯ.

ಇತ್ತೀಚೆಗೆ 2011ರ ಕೆಎಎಸ್‌ ಅಧಿಕಾರಿಗಳ ನೇಮಕಾತಿ ವಿಚಾರ ಹಾಗೂ ಕಾಯ್ದೆ ರಚನೆ ಕುರಿತು ಶ್ರೀಗಳ ಮೇಲೆ ಅನಗತ್ಯ ಟೀಕೆ-ಟಿಪ್ಪಣಿಗಳು ಕೇಳಿಬರುತ್ತಿವೆ. ಆದರೆ, ವಾಸ್ತವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು, ಯುವಕರು ಅಥವಾ ನೌಕರರು ತಮ್ಮ ಬದುಕು ಅತಂತ್ರವಾದಾಗ ಧಾರ್ಮಿಕ ಮಾರ್ಗದರ್ಶಕರ ಬಳಿ ಧಾವಿಸಿ ಸಾಂತ್ವನ ಬಯಸುವುದು ಭಾರತೀಯ ಸಂಸ್ಕೃತಿಯ ಸಹಜ ನಡೆ. ನೂರಾರು ಅಭ್ಯರ್ಥಿಗಳ ಕುಟುಂಬಗಳ ಭವಿಷ್ಯ ಬೀದಿಗೆ ಬೀಳುವ ಆತಂಕ ಎದುರಾದಾಗ, ಸಮಾಜದ ಹಿರಿಯರಾಗಿ ಶ್ರೀಗಳು ಅಂದಿನ ಸಚಿವರೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಸಾಧ್ಯವೇ ಎಂದು ಸುದೀರ್ಘ ಚರ್ಚೆ ನಡೆಸಿದ್ದರೇ ಹೊರತು ಯಾವುದೇ ಸ್ವಾರ್ಥಕ್ಕಾಗಿಯಲ್ಲ.

ಯಾವುದೇ ಸಂಕಷ್ಟದ ಸಂದರ್ಭದಲ್ಲಿ ನೂರಾರು ಯುವಜನತೆ ಅಥವಾ ನೌಕರರು ತಮ್ಮ ಬದುಕಿನ ಭವಿಷ್ಯ ಅತಂತ್ರವಾದಾಗ ಧಾರ್ಮಿಕ ಮುಖಂಡರ ಬಳಿ ಧಾವಿಸಿ ಸಾಂತ್ವನ ಹಾಗೂ ಪರಿಹಾರ ಬಯಸುವುದು ಸಹಜ. ಅಂತಹ ಸಂದರ್ಭದಲ್ಲಿ ಸಮಾಜದ ಮಾರ್ಗದರ್ಶಕರಾಗಿ ಜನಪ್ರತಿನಿಧಿಗಳು ಅಥವಾ ಸಚಿವರ ಜೊತೆ ಸಮಾಲೋಚನೆ ನಡೆಸುವುದು ಜನಹಿತದ ಕಾಳಜಿಯೇ ಹೊರತು ಕಾನೂನುಬಾಹಿರ ಹಸ್ತಕ್ಷೇಪವಲ್ಲ. ಶ್ರೀಗಳು ಸಂವಿಧಾನ ಮತ್ತು ಕಾನೂನಿನ ಚೌಕಟ್ಟನ್ನು ಎಂದಿಗೂ ಗೌರವಿಸುವವರು. ಸಂಕಷ್ಟಕ್ಕೆ ಸಿಲುಕಿದ ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಶಾಸನಬದ್ಧವಾಗಿ ಪರಿಹಾರ ಕಂಡುಕೊಳ್ಳಲು ಚರ್ಚಿಸುವುದು ಅಥವಾ ಸಲಹೆ ನೀಡುವುದು ಸಮಾಜದ ಹಿತಚಿಂತಕರ ನೈತಿಕ ಹೊಣೆಗಾರಿಕೆಯ ಭಾಗವಾಗಿರುತ್ತದೆ.

ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ನೊಂದವರಿಗೆ ನೆರವಾಗಲು ದಾರಿ ಹುಡುಕುವುದು ಸಮಾಜಮುಖಿ ಕಳಕಳಿಯೇ ಹೊರತು ನ್ಯಾಯಾಂಗಕ್ಕೆ ಮಾಡಿದ ಅವಮಾನವಲ್ಲ. ಶ್ರೀಗಳು ಸದಾ ಸಂವಿಧಾನ ಮತ್ತು ದೇಶದ ಕಾನೂನುಗಳನ್ನು ಗೌರವಿಸುತ್ತಾ ಬಂದವರು. ತಾವು ನಡೆಸಿದ ಚರ್ಚೆಯನ್ನು ಸ್ವತಃ ಶ್ರೀಗಳೇ ಸಾರ್ವಜನಿಕವಾಗಿ, ಪಾರದರ್ಶಕವಾಗಿ ಹಂಚಿಕೊಂಡಿರುವುದೇ ಅವರ ನಿರ್ಮಲ ಉದ್ದೇಶಕ್ಕೆ ಸಾಕ್ಷಿಯಾಗಿದೆ. ತೆರೆಮರೆಯಲ್ಲಿ ಯಾವುದೇ ದುರುದ್ದೇಶದ ಒಳಸಂಚು ಇಲ್ಲದಿದ್ದಾಗ ಮಾತ್ರ ಇಂತಹ ಪ್ರಾಮಾಣಿಕ ಮುಕ್ತ ಮಾತುಗಳು ಸಾಧ್ಯ.

ರೈತರ ಏಳಿಗೆಗಾಗಿ ಕೆರೆಗಳಿಗೆ ನೀರು ತಂದ, ಗ್ರಾಮೀಣ ಭಾಗದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ ಹಾಗೂ ಸಮಾಜದ ಎಲ್ಲ ವರ್ಗಗಳ ಕಷ್ಟಕ್ಕೆ ಸ್ಪಂದಿಸಿದ ಮಹಾನ್ ಚೇತನವೊಂದನ್ನು ರಾಜಕೀಯ ಪ್ರೇರಿತ ದ್ವೇಷದ ಕನ್ನಡಕದಿಂದ ಅಳೆಯುವುದು ಸಮಂಜಸವಲ್ಲ. ನ್ಯಾಯಾಲಯಗಳ ತಾಂತ್ರಿಕ ತೀರ್ಪುಗಳ ಆಧಾರದ ಮೇಲೆ ಶ್ರೀಗಳ ಇಡೀ ಸಮಾಜಮುಖಿ ಬದ್ಧತೆಯನ್ನು ಶಂಕಿಸುವುದು ಅಪ್ರಬುದ್ಧತೆ. ಶ್ರೀಗಳ ಹೃದಯದಲ್ಲಿ ಯಾವಾಗಲೂ ಬಡವರು, ರೈತರು ಮತ್ತು ಸಂಕಷ್ಟಕ್ಕೆ ಒಳಗಾದ ಸಾಮಾನ್ಯ ಜನರ ಹಿತವೇ ಮುಂಚೂಣಿಯಲ್ಲಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ.

ನ್ಯಾಯಾಲಯಗಳು ಕಾನೂನಿನ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ತೀರ್ಪು ನೀಡುತ್ತವೆ. ನ್ಯಾಯಾಂಗದ ಆದೇಶಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಆದರೆ, ನ್ಯಾಯಾಲಯದ ತೀರ್ಪುಗಳು ವ್ಯತಿರಿಕ್ತವಾಗಿ ಬಂದ ತಕ್ಷಣವೇ, ಆ ಕಾಯ್ದೆ ಅಥವಾ ಪ್ರಯತ್ನದ ಪರವಾಗಿ ಮಾತನಾಡಿದವರನ್ನು ತಪ್ಪಿತಸ್ಥರೆಂದು ಬಿಂಬಿಸುವುದು ಅಪ್ರಬುದ್ಧತೆಯಾಗುತ್ತದೆ. ಸಾರ್ವಜನಿಕ ವೇದಿಕೆಗಳಲ್ಲಿ ಶ್ರೀಗಳು ತಾವು ನಡೆಸಿದ ಚರ್ಚೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆಯೇ ಹೊರತು ಯಾವುದನ್ನೂ ಮುಚ್ಚಿಟ್ಟಿಲ್ಲ. ಅವರ ಈ ಪಾರದರ್ಶಕತೆಯೇ ಅವರ ಪ್ರಾಮಾಣಿಕತೆಗೆ ಸಾಕ್ಷಿ. ತೆರೆಮರೆಯ ಷಡ್ಯಂತ್ರಗಳು ಇರದ ಕಾರಣದಿಂದಲೇ ಅವರು ಬಹಿರಂಗವಾಗಿ ತಮ್ಮ ಪ್ರಯತ್ನಗಳನ್ನು ಹಂಚಿಕೊಂಡಿದ್ದಾರೆ.

ತರಳಬಾಳು ಮಠ ಸರ್ವರಿಗೂ ಮುಕ್ತವಾಗಿದೆ ಯಾವುದೇ ಅನುಮಾನಗಳಿದ್ದರೆ ಮಠಕ್ಕೆ ಬೇಟಿ ನೀಡಿ ಉತ್ತರ ಪಡೆಯಬಹುದು. ಪಕ್ಷದ ಅಧ್ಯಕ್ಷರಾದ ರವಿಕೃಷ್ಣ ರೆಡ್ಡಿ ರವರು ಮಠಕ್ಕೆ ಯಾವ ಸಮಯದಲ್ಲಿ ಬೇಕಾದರೂ ಹೋಗಬಹುದು. ಸಂವಿಧಾನ ಎಂದರೆ ಸಾಮಾನ್ಯ ಜನರ ಪಾಲಿಗೆ, ನೊಂದವರ ಪರ ನಿಲ್ಲುವುದು ಅದು ಈ ಮಠದಲ್ಲಿ ಇಂದಿಗೂ ನೋಡಬಹುದು. ಇದು ಗೌರವಯುತವಾದ ಸಂದೇಶ ಮತ್ತು ನಮ್ಮ ಮಠದ ಘನತೆಯನ್ನ ಹಾಳಗಾಲು ನಾವು ಭಕ್ತರು ಎಂದಿಗೂ ಬಿಡುವುದಿಲ್ಲ.

ಯಾವುದೇ ಸಮಾಜಮುಖಿ ಧಾರ್ಮಿಕ ನೇತಾರರು ಸಮಾಜದ ಜ್ವಲಂತ ಸಮಸ್ಯೆಗಳಿಗೆ ಮುಖ ತಿರುಗಿಸಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅನ್ಯಾಯಕ್ಕೊಳಗಾದವರ ಪರ ಧ್ವನಿ ಎತ್ತುವುದು ಮಠಾಧೀಶರ ಸಾಮಾಜಿಕ ಹೊಣೆಗಾರಿಕೆಯ ಭಾಗ. ತರಳಬಾಳು ಶ್ರೀಗಳ ಉದ್ದೇಶ ಕೇವಲ ಸಂಕಷ್ಟದಲ್ಲಿದ್ದ ಯುವಜನರ ಬದುಕಿಗೆ ದಾರಿ ತೋರುವುದಾಗಿತ್ತು. ಆದ್ದರಿಂದ, ಈ ಘಟನೆಯನ್ನು ರಾಜಕೀಯ ಪ್ರೇರಿತ ದ್ವೇಷ ಅಥವಾ ವೈಯಕ್ತಿಕ ಟೀಕೆಯ ಕನ್ನಡಕದಿಂದ ನೋಡದೆ, ಜನರ ಕಷ್ಟಗಳಿಗೆ ಮಿಡಿದ ಕಳಕಳಿ ಎಂದು ಗುರುತಿಸುವುದೇ ಪ್ರಬುದ್ಧ ಸಮಾಜದ ಲಕ್ಷಣವಾಗಿದೆ. ಶ್ರೀಗಳ ವಿಶಾಲ ಸಾಮಾಜಿಕ ಬದ್ಧತೆಯನ್ನು ಶಂಕಿಸದೆ, ಅವರ ಸಮಾಜಮುಖಿ ಕಾರ್ಯಗಳನ್ನು ಗೌರವಿಸಬೇಕಿದೆ. ಇದು ನಮ್ಮ ಮಠ, ನೊಂದವರ ಪರ ನಿಲ್ಲುವ ಮಠ, ಶ್ರೇಷ್ಠ ಪರಂಪರೆಯ ಮಠ. ಸರ್ವ ಜನಾಂಗದವರನ್ನು ಒಳಗೊಂಡ ಮಠ. ಇವರ ಸಾಮಾಜಿಕ ಕಾರ್ಯಗಳಿಗೆ ಅನ್ನದಾತರೇ ಸಾಕ್ಷಿ.

  • ಬಿಂದು ಆರ್‌.‌ಡಿ.ರಾಂಪುರ,
    ಲೇಖಕರು, ಕಾರ್ಯದರ್ಶಿ,
    ಶರಣ ಸಾಹಿತ್ಯ ಪರಿಷತ್ತು
    ದಾವಣಗೆರೆ ತಾ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!