ಕುರುಗೋಡು: ಕುರುಗೋಡಿನಿಂದ ಕಂಪ್ಲಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸೋಮಲಾಪುರ ಕ್ರಾಸ್ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆಯ ಸೇತುವೆಯು ತೀರಾ ಇಕ್ಕಟ್ಟಾಗಿದ್ದು, ವಾಹನ ಸವಾರರು ನಿತ್ಯವೂ ಜೀವಭಯದಲ್ಲಿ ಸಂಚರಿಸುವಂತಾಗಿದೆ.
ತಾಲೂಕು ಕೇಂದ್ರಗಳಿಗೆ ತೆರಳಲು ನೂರಾರು ವಾಹನಗಳು ಪ್ರತಿದಿನ ಇದೇ ಮಾರ್ಗವನ್ನು ಅವಲಂಬಿಸಿವೆ. ಆದರೆ, ಕಾಲುವೆಗೆ ನಿರ್ಮಿಸಲಾಗಿರುವ ಈ ಸೇತುವೆಯು ಅತ್ಯಂತ ಕಿರಿದಾಗಿದ್ದು, ಏಕಕಾಲದಲ್ಲಿ ಎರಡು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸೇತುವೆ ದಾಟುವಾಗ ಎದುರಿನಿಂದ ಮತ್ತೊಂದು ವಾಹನ ಬಂದರೆ, ಒಂದು ವಾಹನವನ್ನು ನಿಲ್ಲಿಸಿ ದಾರಿ ಬಿಟ್ಟುಕೊಟ್ಟ ನಂತರವೇ ಮುಂದೆ ಸಾಗಬೇಕಾದ ಅನಿವಾರ್ಯತೆ ಇದೆ.
ಸೇತುವೆಯ ಪಕ್ಕದಲ್ಲೇ ತುಂಗಭದ್ರಾ ಕಾಲುವೆ ಹರಿಯುತ್ತಿರುವುದರಿಂದ, ಸ್ವಲ್ಪ ಆಯತಪ್ಪಿದರೂ ಭಾರಿ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಹೀಗಾಗಿ, ನಿತ್ಯವೂ ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾಗಿದೆ ಎಂದು ಸವಾರರು ಹಾಗೂ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸೇತುವೆ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















