ಗುಂಡ್ಲುಪೇಟೆ:ಬಂಡೀಪುರ ಹುಲಿ ಸಂರಕ್ಷಣಾ ವ್ಯಾಪ್ತಿಯ ಕುಂದಕೆರೆ ವಲಯದ ಆಡಿನ ಕಣಿವೆಯಲ್ಲಿ ಹುಲಿ ದಾಳಿಗೆ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಆಡಿನ ಕಣಿವೆಯ ಸುಮಾರು 54 ವರ್ಷದ ಬಸವ ಎಂಬುವರು ಹುಲಿದಾಳಿಗೆ ಒಳಗಾಗಿ ಮರಣಹೊಂದಿರುವ ದುರ್ದೈವಿಯಾಗಿದ್ದಾನೆ.
ಆದಿವಾಸಿ ಸಮುದಾಯದ ಬಸವ ಕಳೆದ ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಬಂಡೀಪುರದ ಅರಣ್ಯದಲ್ಲಿ ಹುಡುಕಾಟ ನಡೆಸಿದಾಗ ಆಡಿನ ಕಣಿವೆಯ ಸುಮಾರು 250-300 ಮೀಟರ್ ದೂರದಲ್ಲಿ ಹುಲಿ ಶೇಕಡಾ 90% ಭಾಗವನ್ನು ತಿಂದು ಹಾಕಿರುವ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮೃತ ದೇಹವನ್ನು ನೋಡಿದ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಹೆಚ್ಚುತ್ತಿರುವ ವನ್ಯಜೀವಿ ದಾಳಿ:ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವನ ಮೇಲೆ ವನ್ಯಜೀವಿ ದಾಳಿ ಮಾಡಿ ಪ್ರಾಣಹಾನಿ ಉಂಟುಮಾಡುತ್ತಿರುವ ಪ್ರಕರಣಗಳು ಜಾಸ್ತಿಯಾಗುತಿದ್ದು ಕಳೆದ ತಿಂಗಳು ಯಡಿಯಾಲ ವ್ಯಾಪ್ತಿಯ ಬಳ್ಳೂರುಹುಂಡಿ ಗ್ರಾಮದಲ್ಲಿ ಹುಲಿದಾಳಿಗೆ ತುತ್ತಾಗಿರುವ ಘಟನೆ ಮಾಸುವ ಮುನ್ನವೇ ಹುಲಿದಾಳಿಗೆ ಮತ್ತೊಬ್ಬರು ಬಲಿಯಾಗಿರುವ ಘಟನೆ ಕಾಡಂಚಿನ ಗ್ರಾಮಗಳ ಜನರು ಜೀವಭಯದಿಂದ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ.
ವರದಿ-ಕುಮಾರ್ ಗುಂಡ್ಲುಪೇಟೆ




















