ಬೆಂಗಳೂರು : ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಲು ಬಳ್ಳಾರಿ ಮತ್ತು ಹಾಸನ ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರನ್ನು ಸಿ.ಎಂ ಸಿದ್ದರಾಮಯ್ಯ ನೇಮಿಸಿದ್ದಾರೆ.
ಪೌರಾಡಳಿತ ಸಚಿವರಾದ ರಹೀಮ್ ಖಾನ್ ಅವರನ್ನು ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಉಸ್ತುವಾರಿ ಸ್ಥಾನವು ಹೋಗಿತ್ತು. ಬಳಿಕ ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಿ. ಎಂ. ನೇಮಿಸಿದ್ದರು.
ಈಗ ರಹೀಮ್ ಖಾನ್ ಅವರಿಗೆ ಈ ಸ್ಥಾನ ಒಲಿದಿದೆ.
ಹಾಸನ ಜಿಲ್ಲೆಯ ಉಸ್ತುವಾರಿಯಾಗಿದ್ದ ಕೆ. ಎನ್. ರಾಜಣ್ಣ ಅವರು ಜಿಲ್ಲೆಯನ್ನೇ ಮರೆತಿದ್ದಾರೆ ಎನ್ನುವ ಆರೋಪಗಳು ಜನಪ್ರತಿನಿಧಿಗಳಿಂದ ವ್ಯಕ್ತವಾಗಿದ್ದವು. ಈಗ ರಾಜಣ್ಣ ಬದಲು ಕೃಷ್ಣ ಭೈರೇಗೌಡ ಹಾಸನದ ಜಿಲ್ಲಾ ಉಸ್ತುವಾರಿಯಾಗಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















