ಒಂದೇ ಬಳ್ಳಿಯ ಹೂಗಳು ಇವರು
ನಗು ನಗುತಾ ಒಟ್ಟಾಗಿ ಬೆಳೆದವರು
ಮಮತೆ ವಾತ್ಸಲ್ಯ ಹಂಚಿ ನಡೆದವರು
ನೋವಿನಲ್ಲೂ ನಗುವನ್ನು ಕಂಡವರು.
ಕಷ್ಟದಿ ಮಿಡಿಯುವ ಕರುಳ ನಂಟು
ಬಿಡಿಸಲು ಆಗದ ಗಟ್ಟಿಯ ಗಂಟು
ತಲ ತಲಾಂತರ ಬಂಧವು ಉಂಟು
ಹಂಚಿ ಉಣ್ಣುವ ಭಾವನೆ ಉಂಟು.
ಸೋದರನೆಂದರೆ ಪಿತೃವಿನ ಸಮಾನ
ಸೋದರಿಯೊಬ್ಬಳು ಮಾತೃ ಸಮಾನ
ಪದಗಳೇ ಇಲ್ಲ ಮಾಡಲು ಗುಣಗಾನ
ಇದುವೇ ನೂಲು ಬೆಸೆಯುವ ಬಂಧನ.
ಏಳೇಳು ಜನುಮದ ಸುಂದರ ಕಾವ್ಯ
ಸುವಾಸನೆ ಅಳಿಯದ ಸುಗಂಧ ದ್ರವ್ಯ
ಕಾಲ ಉರುಳಿದರೂ ಸದಾಕಾಲ ನವ್ಯ
ಇದೇ ಅಣ್ಣ ತಂಗಿಯ ಗಟ್ಟಿ ಬಾಂಧವ್ಯ.
ಶ್ರಾವಣ ಮಾಸದ ಹುಣ್ಣಿಮೆಯ ದಿನ
ಕಟ್ಟುವಳು ಸೋದರಿ ರಕ್ಷಾ ಬಂಧನ
ಬಾಂಧವ್ಯ ವೃದ್ಧಿಯಾಗಲು ಅನುದಿನ
ಇದುವೇ ಶುದ್ಧ ಪಾವಿತ್ರ್ಯತೆಗೆ ಸಾಧನ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.




















