
(ಪುಸ್ತಕ ಅವಲೋಕನ )
ಪುಸ್ತಕ : ನೂರೊಂದು ಶಾಯಿರಿಗಳು
ಲೇಖಕರು : ಶಿವಪ್ರಸಾದ್ ಹಾದಿಮನಿ.
ಪ್ರಕಾಶಕರು : ಶಿವಶಕ್ತಿ ಪ್ರಕಾಶನ, ಕೊಪ್ಪಳ
ಹಕ್ಕುಗಳು : ಲೇಖಕರದ್ದು
ಪುಟ : 65
ಪ್ರಥಮ ಮುದ್ರಣ : 2025
ಬೆಲೆ :85 ರೂ.
ಮೊಬೈಲ್: 7996790189

ಕವಿ ಎಂದರೆ ಕೇವಲ ಕಾಲ್ಪನಿಕವಾಗಿ ಆಲೋಚನೆ ಮಾಡಿ ಬರೆಯುವುದಲ್ಲ. ವಾಸ್ತವ ಮತ್ತು ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಬರೆಯಬೇಕು.
ಎದೆಯ ಅಂತರಂಗದಲ್ಲಡಗಿದ ಹೃದಯದ ಭಾವನೆಗಳನ್ನು ಹೊರಹಾಕಲು ಮಾಧ್ಯಮವು ಮನುಷ್ಯನಿಗೆ ಸಹಕರಿಸುತ್ತದೆ ಎಂಬ ಅದ್ಭುತ ಮುನ್ನುಡಿ ಬರೆದಿರುವ ಕೊಪ್ಪಳದ ಬೈರಾಪುರದ ಸಾಹಿತಿ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ಮನದಾಳದ ಮಾತುಗಳಿಂದ ಪ್ರಾರಂಭವಾಗುವ ಮತ್ತು ಪ್ರತಿ ಕ್ಷಣವು ಜೀವನವನ್ನು ಪ್ರೀತಿಸುತ್ತಾ ಬದುಕುತ್ತಿರುವ ಶಿವಪ್ರಸಾದ್ ಹಾದಿಮನಿ ಅವರ ಪುಸ್ತಕದೊಳಗಿನ ಶಾಯಿರಿಗಳು ವೈವಿಧ್ಯತೆ ಮತ್ತು ಬಹುತ್ವಗಳ ನೆಲೆಯಲ್ಲಿ ಅರಳಿ ನಿಂತಿವೆ ಎಂಬ ಬೆನ್ನುಡಿ ಬರೆದಿರುವ ಚಿತ್ರದುರ್ಗದ ಪರಮೇಶ್ವರಪ್ಪ ಕುದರಿಯವರ ಅಂತರಂಗದ ಮಾತುಗಳಿಂದ ಮುಕ್ತಾಯವಾಗುತ್ತದೆ ಈ ನೂರೊಂದು ಶಾಯಿರಿಗಳ ಪುಸ್ತಕ.
ಮನುಷ್ಯರು ತಮ್ಮಲ್ಲಿರುವ ಜ್ಞಾನ ಸಮಾಜಕ್ಕೆ ಉಪಯೋಗವಾಗಲೆಂದು, ತಮ್ಮಲ್ಲಿರುವ ಅಂತರಂಗದ ಭಾವನೆಗಳನ್ನು ಪ್ರಪಂಚಕ್ಕೆ ಮುಟ್ಟಿಸಲು ಸಾಹಿತ್ಯದ ಪ್ರಕಾರಗಳಾದ ಕಥೆ, ಕವನ, ಹನಿಗವನ, ಹಾಯ್ಕ್, ಚುಟುಕು, ಲೇಖನಗಳು ಮತ್ತು ಶಾಯಿರಿಗಳ ಮೊರೆ ಹೋಗುತ್ತಾನೆ. ಶಾಯಿರಿಗಳು ಸಮಾಜ ಬದಲಾವಣೆಗೆ ಮತ್ತು ಸಮಾಜದ ಜಾಗೃತಿಗೆ ದಿವ್ಯಾಸ್ತ್ರವಾಗಿವೆ. ಶಾಯಿರಿಗಳು ಕಡಿಮೆ ಪದಗಳಲ್ಲಿ ಆಳವಾದ ಅರ್ಥವನ್ನು ಕೊಡುತ್ತವೆ.
ಶಾಯಿರಿ ಮೂಲತಃ ಪರ್ಷಿಯದು. ಇದು ಮೂಲ ಉರ್ದು ಭಾಷೆ. ಇದು ನಮ್ಮ ದೇಶದ ಸಾಹಿತ್ಯ ಅಲ್ಲ. ಇದು ನೂರಾರು ವರ್ಷಗಳ ಹಿಂದೆ ಇಸ್ಲಾಂ ಜೊತೆಗೆ ನಮ್ಮ ದೇಶಕ್ಕೆ ಬಂದಿದೆ.
ಶಾಯಿರಿ ಪ್ರಕಾರಗಳಾದ ಗಜಲ್, ನಜಮ, ರುಭಾಯಿ, ಕಸಿದಾ, ಮರ್ಸಿಯಾ ಮತ್ತು ಟಂಕದಂತಹ ಸಾಹಿತ್ಯದ ಪ್ರಾಕರಗಳು ಭಾರತ ಸೇರಿದಂತೆ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಹರಡಿದೆ.
ನೂರೊಂದು ಶಾಯಿರಿಗಳ ಪುಸ್ತಕದಲ್ಲಿ ಲೇಖಕರು ಪ್ರಣಯ, ವೇದನೆ, ಸೌಂದರ್ಯ, ಶೃಂಗಾರ, ಪ್ರೀತಿ, ವಾತ್ಸಲ್ಯ, ಪ್ರೇಮ, ಅಸೆ, ಆಕಾಂಕ್ಷೆ, ಸಹನೆ, ಮಮಕಾರ, ನೋವು, ನಲಿವು, ವಿರಹ, ನಿರೀಕ್ಷೆ, ಹಾಸ್ಯ, ದೋಷ, ಸುಖ-ದುಃಖ, ಕೋಪ-ತಾಪ, ಕನವರಿಕೆ, ಬೇಡಿಕೆ, ಹಪಾಹಪಿತನ ಮತ್ತು ಸಾಮಾಜಿಕ ಕಳಕಳಿಗಳನ್ನು ಶಾಯಿರಿಗಳ ಮೂಲಕ ಹೊರ ಹಾಕಿದ್ದಾರೆ.
ಒಟ್ಟು ಈ ಪುಸ್ತಕದಲ್ಲಿ ನೂರಾ ಒಂದು (101) ಶಾಯಿರಿಗಳು ಇವೆ. ಅವುಗಳಲ್ಲಿ ಸಾಮಾಜಿಕ ಕಳಕಳಿ ಇರುವ ಕೆಲವು ಶಾಯಿರಿಗಳನ್ನು ನಾನು ಇಲ್ಲಿ ವಿಶ್ಲೇಷಣೆ ಮಾಡುತ್ತಿದ್ದೇನೆ.
ನಾನು ನೀನೂ ಕೂಡಿದ್ರ ಮಿಲನ,
ಒಬ್ರು ದೂರಾದ್ರೂ
ವಿಚ್ಛೆದನ.
ಈ ಶಾಯಿರಿ ಗಂಡ ಹೆಂಡತಿ ದೂರ ದೂರ ಇದ್ದರೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ ಎಂಬ ಅರ್ಥವನ್ನು ಕೊಡುತ್ತವೆ.
ಹೇ ಹುಡುಗ, ನಿನಗೇಕೆ ನನ ಮ್ಯಾಲೆ ಕೋಪ,
ಮರೆತು ಬಿಡು ನಾನು
ಮಾಡಿದ ತಪ್ಪ,
ಮತ್ತೊಮ್ಮೆ ಬರದಿರಲಿ
ನನ್ನ ನಿನ್ನ ನಡುವೆ,
ಮನಸ್ತಾಪ!
ನಾವು ತಪ್ಪುಗಳು ಮಾಡುವುದು ಸಹಜ, ಅವುಗಳನ್ನು ಕ್ಷಮಿಸುವ ಗುಣವನ್ನು ಬೆಳಸಿಕೊಂಡು ಮತ್ತೊಮ್ಮೆ ಅಂತಹ ತಪ್ಪಗಳನ್ನು ಮಾಡಬಾರದು ಎಂಬ ಸಂದೇಶವನ್ನು ಕೊಡುತ್ತದೆ.
ನೀವ್ ಏನ ಹೇಳ್ರಿ,
ಈಗಿನ ಹುಡುಗ, ಹುಡುಗ್ಯಾರಿಗೆ, ಪ್ರೀತಿ ಮಾಡಾಕ ಬರೂದಿಲ್ಲ,
ಯಾಕೆಂದ್ರ ಅವರಿಗೆ ಪ್ರೀತಿಯ ಅರ್ಥಾನಾ ಗೊತ್ತಿಲ್ಲ!
ಈಗಿನ ಯುವಕ ಯುವಕರಿಗೆ ನಿಜವಾಗಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವುದಿಲ್ಲ. ಬರೀ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಈ ಆಕರ್ಷಣೆಯನ್ನೇ ಪ್ರೀತಿ, ಪ್ರೇಮ ಅಂತ ತಿಳಿದುಕೊಂಡಿದ್ದಾರೆ.
ಪ್ರೇಮಕ್ಕೆ ಕಣ್ಣಿಲ್ಲ,
ಪ್ರೇಮಿಗಳಿಗೆ ಜಾತಿ ಇಲ್ಲ,
ಅಂತಾ ಎಲ್ರೂ ಹೇಳ್ತಾರ,
ಅದ್ರ, ನಮ್ಮ ಈ ಪ್ರೀತಿನ ಎಷ್ಟು ಜನ ಒಪ್ತಾರ?!
ನೀವು ಹೇಳ್ರೆಲ್ಲ!
ಹೌದು ನಿಜ, ಇಂದು ಸಮಾಜದಲ್ಲಿ ಜಾತಿಯ ಭೇದ ಭಾವ, ಮೇಲು- ಕೀಳು, ತಾರತಮ್ಯ ಇನ್ನೂ ಗಟ್ಟಿಯಾಗಿ ಇದೆ. ಇತ್ತೀಚಿಗೆ ಕೆಳ ಹುಡುಗನನ್ನು ಪ್ರೀತಿಸಿ ಮದುವೆ ಆಗಿದ್ದಕ್ಕೆ ತನ್ನ ಸ್ವಂತ ಮಗಳನ್ನೇ ಕೊಲೆ ಮಾಡುತ್ತಿದ್ದಾರೆ. ಇಂದು ಇಂತಹ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ.
ಹೇ ಹುಡುಗೀ, ಹಿರಿಯರು ಹೇಳಿದಂಗೆ ಕೇಳಿದ್ರ ನಮ್
ಸಂಸಾರ, ಹಿಂಗ ಇರುತ್ತಿದ್ದಿಲ್ಲ, ಅವರು ಹೇಳಿದಂಗ ನಾವ್ ಕೇಳಿಲ್ಲ, ಅದಕ ಈಗ ಎಲ್ಲಾರು ಅನ್ನುವಂಗ ಆಗೈತಲ್ಲ….
ಅವಿಭಕ್ತ ಕುಟುಂಬ ಪದ್ಧತಿ ಇದ್ದಾಗ ಮನೆಯಲ್ಲಿ ಎಲ್ಲಾರು ಯಜಮಾನ್ರು ಮಾತು ಕೇಳುತ್ತಿದ್ದರು. ಆದರೆ ಇಂದು ಬಹಳಷ್ಟು ಜನರು ಮದುವೆ ಆದ ಕೂಡಲೇ ಬೇರೆ ಮನೆ ಮಾಡುತ್ತಾರೆ. ಹಿರಿಯರ ಮಾತಿಗೆ ಗೌರವ ಕೊಡುವುದಿಲ್ಲ. ಹಿರಿಯರು ಏನಾದರೂ ಹೇಳಿದರೆ ಹಳೆಯ ಕಾಲದ ಮನುಷ್ಯರು ಏನೇನೋ ಹೇಳುತ್ತಾರೆ ಬಿಡಿ ಅಂತ ಕಿವಿಗೆ ಹಾಕಿಕೊಳ್ಳುವುದಿಲ್ಲ.
ಹೇ ಹುಡುಗಾ, ನಮ್ಮಿಬ್ರ ಮನಸೂ ಕೂಡಿದ್ರ
ನಾವಿಬ್ಬರೂ ಜೋಡಿ ಆಗೀವಿ, ಒಬ್ರ ಮನಸು ಚೂರಾದ್ರ
ನಾವಿಬ್ಬರೂ ದೂರ ಆಗ್ತಿವಿ
ಹುಡುಗ ಮತ್ತು ಹುಡುಗಿಯರು ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿ ಹತ್ತಿರ ಇದ್ದರೆ ಸಂಬಂಧಗಳ ಬಹಳ ಗಟ್ಟಿಯಾಗಿ ಇರುತ್ತವೆ ಎಂಬ ಅರ್ಥವನ್ನು ಕೊಡುತ್ತದೆ.
ಈ ನೂರೊಂದು ಶಾಯಿರಿಗಳ ಪುಸ್ತಕದ ಮುಖ ಪುಟ ವಿನ್ಯಾಸ ಮತ್ತು ಫೋಟೋ ಬಹಳ ಆಕರ್ಷಣೀಯವಾಗಿದೆ.
ಈ ಪುಸ್ತಕ ಬಹಳ ಸುಂದರವಾಗಿ, ಚೊಕ್ಕವಾಗಿ ಮತ್ತು ಅರ್ಥ ಪೂರ್ಣವಾಗಿದೆ.
ಪುಸ್ತಕದಲ್ಲಿನ ಶಾಯಿರಿಗಳು ಸರಳವಾದ ಪದಗಳ ಜೊತೆಗೆ ಸರಳವಾದ ಗ್ರಾಮೀಣ ಭಾಷೆಯಿಂದ ಕೂಡಿರುವುದರಿಂದ ಓದುಗರಿಗೆ ಬಹಳ ಆಸಕ್ತಿಯಿಂದ ಈ ಪುಸ್ತಕ ಎಂದೇ ಏಟಿಗೆ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಒಮ್ಮೆ ಓದುವುದಕ್ಕೆ ಪ್ರಾರಂಭ ಮಾಡಿದರೆ ಅದು ಮುಗಿಯುವ ತನಕ ನಿಲ್ಲಿಸುವುದಕ್ಕೆ ಆಗುವುದಿಲ್ಲ. ಅಷ್ಟು ಆಸಕ್ತಿದಾಯಕವಾದ ಶಾಯಿರಿಗಳ ಪುಸ್ತಕವಾಗಿದೆ ಇದು.
ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಪ್ರಸಾದ ಹಾದಿಮನಿಯವರು ಬಹಳ ಸರಳವಾದ ಜೀವನ ನಡೆಸುತ್ತಿರುವ ಮತ್ತು ನೇರ ನಡೆಯ ವ್ಯಕ್ತಿ. ಇವರು ಈಗಾಗಲೇ ಸುಮಾರು ಆರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿದ್ದಾರೆ.
ಇನ್ನೂ ಮುಂದೆ ಕೂಡ ಬಹಳ ಪುಸ್ತಕಗಳು ಪ್ರಕಟಣೆ ಆಗಲಿ. ಸಮಾಜ ಬದಲಾವಣೆಗೆ ಪೂರಕವಾದ ರೀತಿಯಲ್ಲಿ ಸಾಹಿತ್ಯ ರಚನೆಯಲ್ಲಿ ಲೇಖಕರು ಮುಂದಾಗಲಿ ಮತ್ತು ಇವರ ಶಾಯಿರಿಗಳು ಸಮಾಜ ಬದಲಾವಣೆಗೆ ದಿವ್ಯಾಸ್ತ್ರವಾಗಲಿ ಎಂದು ಆಶಿಸುತ್ತೇನೆ.
- ಡಾ. ನರಸಿಂಹ ಗುಂಜಹಳ್ಳಿ
ಸಹಾಯಕ ಪ್ರಾಧ್ಯಾಪಕರು.
ಪತ್ರಿಕೋದ್ಯಮ ವಿಭಾಗ
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ.
ಮೊಬೈಲ್ : 9902927945.




















