ಬಳ್ಳಾರಿ / ಕಂಪ್ಲಿ : ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರದ ಅಯ್ಯಪ್ಪ ಸ್ವಾಮಿ ಮತ್ತು ಗದ್ದಿ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಹನುಮಜಯಂತಿಯ ಪ್ರಯುಕ್ತವಾಗಿ ಹನುಮ ಮಾಲಾಧಾರಿಗಳು ಇರುಮುಡಿ ಧಾರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.
ಇಂದು ಬೆಳಿಗ್ಗೆ ಅಯ್ಯಪ್ಪಸ್ವಾಮಿಗೆ ಮತ್ತು ಗದ್ದಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶೇಷ ವೇದಿಕೆಯನ್ನು ನಿರ್ಮಿಸಿ ಆಂಜಿನೇಯನ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಹನುಮ ಮಾಲಾಧಾರಿಗಳಿಗೆ ಗುರುಸ್ವಾಮಿಗಳು ಇರುಮುಡಿಯನ್ನು ಪೂಜಿಸಿ ಹನುಮ ಮಾಲಾಧಾರಿಗಳ ತಲೆಯ ಮೇಲೆ ಇರಿಸಿ ಪೂಜೆಯನ್ನು ಸಲ್ಲಿಸಿದರು. ನಂತರ ಇರುಮುಡಿ ಧರಿಸಿದ ಹನುಮ ಮಾಲಾಧಾರಿಗಳಿಗೆ ಕುಟುಂಬದ ಸದಸ್ಯರು ಮಾಲಾರ್ಪಾಣೆ ಮಾಡಿ ಶುಭ ಹಾರೈಸಿದರು.
ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 45ಕ್ಕೂ ಅಧಿಕ ಹನುಮನ ಭಕ್ತರು ಹನುಮ ಮಾಲೆಗಳನ್ನು ಧರಿಸಿದ್ದರು. ಇರುಮುಡಿ ಧಾರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಎನ್.ಗಣೇಶ್ ಭಾಗವಹಿಸಿ ಆಂಜನೇಯನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಇರುಮುಡಿ ಧರಿಸಿದ ಹನುಮ ಮಾಲಾಧಾರಿಗಳಿಗೆ ಶುಭಕೋರಿದರಲ್ಲದೆ, ನಾಡಿನಲ್ಲಿ ಮಳೆ, ಬೆಳೆ ಉತ್ತಮವಾಗಿ ಆಗಲಿ, ಅನ್ನದಾತರಿಗೆ ಉತ್ತಮ ಮೌಲ್ಯ ದೊರೆಯಲಿ ಎಂದು ಹಾರೈಸಿದರು.
ನಂತರ ಅನ್ನಸಂತರ್ಪಣೆ ಜರುಗಿತು. ಸಂಜೆ ಹನುಮ ಮಾಲಾಧಾರಿಗಳು ಮೆರವಣಿಗೆಯ ಮೂಲಕ ಅಂಜನಾದ್ರಿಯ ಆಂಜಿನೇಯ ಸ್ವಾಮಿಯ ಪುಣ್ಯಕ್ಷೇತ್ರಕ್ಕೆ ಪಾದಾಯತ್ರೆ ಬೆಳೆಸಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದ ಹನುಮ ಮಾಲಾಧಾರಿಗಳ ಪಾದಯಾತ್ರೆಗೆ ಸಾರ್ವಜನಿರು ಶುಭ ಹಾರೈಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















