ಬಳ್ಳಾರಿ / ಕಂಪ್ಲಿ : ಬಾಬೂಜಿ ಎಂದೇ ಹೆಸರಾಗಿದ್ದ ಬಾಬು ಜಗಜೀವನರಾಮ್ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದಾಗಿ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ’ ಎಂದು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಪಾಲಕ ಕೆ. ವಿರುಪಾಕ್ಷಪ್ಪ ಹೇಳಿದರು.
ಸ್ಥಳೀಯ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹನೀಯರ ವೈಚಾರಿಕತೆ, ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಸಲುವಾಗಿ ಜಯಂತಿ ಆಚರಣೆ ಮಾಡಬೇಕು. ರಾಜಕೀಯ ಮತ್ತು ಆರ್ಥಿಕ ಸಮಾನತೆಗೆ ಶಿಕ್ಷಣವು ಅಡಿಪಾಯ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹಚ್ಚು ಒತ್ತು ಕೊಡಬೇಕು’. ಬಾಬು ಜಗಜೀವನ್ ರಾಮ್ (ಬಾಬೂಜಿ) ಅವರು ಶೋಷಿತ ವರ್ಗಗಳ, ವಿಶೇಷವಾಗಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಸತಿ ಶಾಲೆಗಳು ಮತ್ತು ಹಾಸ್ಟೆಲ್ಗಳ ಸ್ಥಾಪನೆಗೆ ಅಡಿಪಾಯ ಹಾಕಿದ ಮಹಾನ್ ನಾಯಕ ಎಂದರು.
ವಸತಿ ನಿಲಯ ಪಾಲಕಿ ಎಂ.ಬಿ.ಶುಭಾ ಮಾತನಾಡಿ, ಜಗಜೀವನ್ ರಾಮ್ ಅವರು ಮೇಲು–ಕೀಳೆಂಬ ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದರು. ಸಾಮಾಜಿಕ ಬದಲಾವಣೆಗಾಗಿ ಹೋರಾಡಿದರು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು’ ಎಂದು ಹೇಳಿದರು.
ಇಲ್ಲಿ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಅರ್ಥಪೂರ್ಣವಾಗಿ ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖಾ ಅಧಿಕಾರಿಗಳಾದ ಟಿಎಂ ಬಸವರಾಜ, ಲಕ್ಷ್ಮಣ ನಾಯ್ಕ, ರಾಘವೇಂದ್ರ, ಮಾಲತೇಶ ದೇಶಪಾಂಡೆ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















