ಬಳ್ಳಾರಿ / ಕಂಪ್ಲಿ : ಉಪ್ಪಾರಹಳ್ಳಿ, ಮೆಟ್ರಿ, ಚಿನ್ನಾಪುರ, ಜವುಕು ಸೇರಿದಂತೆ ಸುಮಾರು 15 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಯೋಜನೆ ರೂಪಿಸುತ್ತಿದ್ದು, ಇದರಿಂದ ಈ ಭಾಗದ ರೈತರಿಗೆ ನೀರಿನ ಅನುಕೂಲದ ಜೊತೆಗೆ ಅಂಜರ್ತಲ ವೃದ್ಧಿ, ಜನ ಜಾನುವಾರುಗಳಿಗೆ ಅನುಕೂವಾಗಲಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ಮೆಟ್ರಿ ಗ್ರಾಮದಲ್ಲಿ 2025-26ನೇ ಸಾಲಿನ 4059 ಸಿಎಂಐಡಿಕ್ಯೂ ಯೋಜನೆಯ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಮೆಟ್ರಿ-ಜವುಕು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿ, ಕಣವಿತಿಮ್ಮಲಾಪುರದ ಹಿರೇಕೆರೆ ನೀರು ತುಂಬಿಸುವ ಯೋಜನೆ, ಶಂಕರ್‌ಸಿಂಗ್ ಕ್ಯಾಂಪ್ ಬಳಿಯಲ್ಲಿ ಏತನೀರಾವರಿ ಯೋಜನೆ, ಶ್ರೀಧರ್‌ಗಡ್ಡೆ, ಕೋರ್ಲಗುಂದಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಮಾಡಲಾಗುವುದು. ಉಪ್ಪಾರಹಳ್ಳಿಗೆ ನೆಟ್‌ವರ್ಕ್ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ರಸ್ತೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳೊಂದಿಗೆ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಹೊನ್ನಳ್ಳಿ ಗಂಗಾಧರ, ಹೊಸಕೋಟೆ ಜಗದೀಶ, ಮೆಟ್ರಿ ಶಿವಪುತ್ರಪ್ಪ, ಮೆಟ್ರಿ ಗಿರೀಶ ನೆಣಕಿ, ಉಪ್ಪಾರಹಳ್ಳಿ ಹನುಮನಗೌಡ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.
ತಾಲೂಕಿನ ಮೆಟ್ರಿ-ಉಪ್ಪಾರಹಳ್ಳಿ, ಬಳ್ಳಾಪುರ-ಹಳೇ ನೆಲ್ಲುಡಿ ರಸ್ತೆ, ಹೊಸ ನೆಲ್ಲುಡಿ ತಲಾ 3 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಗಣೇಶ ಅಡಿಗಲ್ಲು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















