ತಾಯಿಯಾಗಿ ಮಗುವಿಗೆ ಮೊದಲು ಜೋಲಾಲಿ ಹಾಡುವಳು, ಲಾಲಿ ಹಾಡಿನಲ್ಲಿ ಜೀವನದ ಕಠೋರ ಪಾಠಗಳನ್ನು ಹೇಳಿ ಕೊಡುವ ಮೊದಲ ಗುರು ಇವಳು
ಮನೆಯ ನಾಲ್ಕು ಗೋಡೆಗಳ ನಡುವಿನ ಮೌನವನ್ನು ಮನಸಾರೆ ಬರೆದು ಎಲ್ಲರ ಮನಮುಟ್ಟಿಸುವ ಕವಯಿತ್ರಿ ಇವಳು
ಮನದೊಳಗೆ ಕಟ್ಟಿ ಹಾಕಿದ ಕನಸುಗಳಿಗೆ ಬಣ್ಣ ಹಚ್ಚಿ ಪರದೆ ಮೇಲೆ ನಟಿಸಿ ನಗಿಸುವ ಮಹಾನಟಿ ಇವಳು
ಕೈಯಲ್ಲಿ ಶಾಹಿ ಹಿಡಿದರೆ ಖಾಲಿ ಕಾಗದಕ್ಕೂ ಜೀವ ತುಂಬಿ ಬತ್ತಿ ಹೋದ ಭಾವಕ್ಕೆ ನೀರೆರೆದು ಪುನರ್ಜನ್ಮ ನೀಡುವ ಸಾಹಿತಿ ಇವಳು
ಅನ್ಯಾಯದ ವಿರುದ್ಧ ಮಹಾ ಜ್ವಾಲೆಯಾಗಿ ಉರಿದು ಧರ್ಮ ಉಳಿಸುವ ನ್ಯಾಯ ದೇವತೆ ಇವಳು
ಜನನಿಯಾಗಿ ತಾಯಿ ಜನ್ಮ ನೀಡಿದರೆ ಆ ಜೀವಕೆ ಮರು ಜನ್ಮ ನೀಡುವ ವೈದ್ಯೆ ಇವಳು
ಮಹಿಳೆ ಬರಿ ಮೌನದ ಕಥೆಯಾದವಳಲ್ಲ ಸಾವಿರ ಮಹಿಳೆಯರ ಮೌನಕ್ಕೆ ಮರುಧ್ವನಿಯಾದ ಹೋರಾಟಗಾರ್ತಿ ಇವಳು
ಮುಗ್ದತೆಯ ಮಗಳಾಗಿ ತವರು ಮನೆ ತೊರೆದು ಗಂಡಿನ ಬಾಳ ಬೆಳಗಿಸಲು ಬಂದ ಬಾಳಸಂಗಾತಿ ಇವಳು
ಮಮತೆಯ ತಾಯಿಯಾಗಿ ಅಕ್ಕರೆ ತೋರುವ ಅಜ್ಜಿಯಾಗಿ
ಮೆಚ್ಚುಗೆಯ ಮಗಳಾಗಿ ಪ್ರೀತಿಯ ತೋರುವ ಸತಿಯಾದವಳು
ಸಕ್ಕರೆಯಂತ ಸ್ನೇಹಿತೆಯಾಗಿ ತುಂಟಾಟ ಮಾಡುವ ತಂಗಿಯಾಗಿ
ನೆಚ್ಚಿನ ನಾದಿನಿಯಾಗಿ ಅಮ್ಮನಂತೆ ಪ್ರೀತಿಸುವ ಅತ್ತಿಗೆಯಾದವಳು
ಸೊಗಸಾದ ಸೊಸೆಯಾಗಿ ಗಡುಸಾಗಿ ಗದರಿ ಪ್ರೀತಿ ತೋರುವ ಅತ್ತೆಯಾಗಿ
ಹೆಣ್ಣಿನ ಎಲ್ಲಾ ಪಾತ್ರವ ಪೋಷಿಸಿದವಳು
ಇವಳು ಹೆಣ್ಣಿನ ಎಲ್ಲಾ ಪಾತ್ರವ ಪೋಷಿಸಿದವಳು..
ಇವಳು ಪರಮೇಶ್ವರನಲ್ಲಿ ಅರ್ಧಾಂಗಿಯಾಗಿ ದೈವವೇ ಆಗಿಹಳು
ಆ ಸೃಷ್ಟಿಕರ್ತನಿಗೂ ಜನ್ಮ ನೀಡಿ ಮಹಾತಾಯಿ ಆದವಳು..
ಈ ದೇವತೆಯ ವರ್ಣಿಸಲು ಪದಗಳೇ ಆದವು ಪುಷ್ಪ ಮಾಲಿಕೆ , ಇವಳನ್ನು ಸ್ತ್ರೀ ಎಂದರೆ ಅಷ್ಟೇ ಸಾಕೆ…
ಇವಳನ್ನು ಸ್ತ್ರೀ ಎಂದರೆ ಅಷ್ಟೇ ಸಾಕೇ…..
- ಪ್ರೀತಿಯಿಂದ ❤️
ಕವಿತ ವಿಜಯಕುಮಾರ್
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ.




















