
ಗಡಿಸೋಮನಾಳ ಗ್ರಾಮಸ್ಥರಿಂದ ಅಭೂತಪೂರ್ವ ಬೆಂಬಲ – ಸಚಿವರ ಮೌನಕ್ಕೆ ಜನರ ಆಕ್ರೋಶ
ತಾಳಿಕೋಟೆ : ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ವಿರುದ್ಧ ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿಯೇ ಕಟ್ಟಡ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಮಂಗಳವಾರ 42ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಈ ಸತ್ಯಾಗ್ರಹಕ್ಕೆ ಮಂಗಳವಾರ ಹೊಸ ಚೈತನ್ಯ ಸಿಕ್ಕಿದ್ದು, ಗಡಿಸೋಮನಾಳ ಗ್ರಾಮದ ನೂರಾರು ಗ್ರಾಮಸ್ಥರು – ಹಿರಿಯರು, ಯುವಕರು ಹಾಗೂ ರೈತರು – ತಂಡೋಪತಂಡವಾಗಿ ಆಗಮಿಸಿ ಹೋರಾಟಕ್ಕೆ ಬಲ ತುಂಬಿದರು. ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.
“ನಿರ್ಜನ ಪ್ರದೇಶದಲ್ಲಿ ಪ್ರಜಾಸೌಧ ಬೇಡ” – ಗ್ರಾಮಸ್ಥರ ಖಡಕ್ ನಿಲುವು
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡರಾದ ನಿಂಗನಗೌಡ ಬಿರಾದಾರ ಮತ್ತು ಚಂದ್ರಶೇಖರ ದುಳೆಕಾರ,
“ಪ್ರಜಾಸೌಧವು ಜನಸೇವೆಗಾಗಿ ನಿರ್ಮಾಣವಾಗಬೇಕೇ ಹೊರತು ಜನರಿಂದ ದೂರವಿರುವ ನಿರ್ಜನ ಪ್ರದೇಶದಲ್ಲಿ ಅಲ್ಲ. ಪ್ರಸ್ತುತ ಆಯ್ಕೆ ಮಾಡಿದ ಜಾಗವು ಪಟ್ಟಣದಿಂದ ದೂರವಿದ್ದು, ಸುರಕ್ಷತೆ ಮತ್ತು ಪ್ರವೇಶದ ಸಮಸ್ಯೆ ಉಂಟಾಗಲಿದೆ,”
ಎಂದು ಆತಂಕ ವ್ಯಕ್ತಪಡಿಸಿದರು.
“ವೃದ್ಧರು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಇದು ಅಪಾಯಕಾರಿಯಾಗಬಹುದು. ಸರ್ಕಾರ ತಕ್ಷಣವೇ ತನ್ನ ನಿರ್ಧಾರವನ್ನು ಪರಿಷ್ಕರಿಸಿ ಪಟ್ಟಣದೊಳಗಿನ ಸರ್ಕಾರಿ ಜಾಗದಲ್ಲಿಯೇ ಕಟ್ಟಡ ನಿರ್ಮಿಸಬೇಕು ” ಎಂದು ಒತ್ತಾಯಿಸಿದರು.
ಸಚಿವರ ಮೌನಕ್ಕೆ ತೀವ್ರ ಆಕ್ರೋಶ
ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೋರಾಟಗಾರರು,
“ಸಚಿವರು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ; ಇಡೀ ಜಿಲ್ಲೆಯ ಹೊಣೆಗಾರರು. 42 ದಿನಗಳಿಂದ ಜನರು ಬಿಸಿಲು-ಮಳೆ ಎನ್ನದೆ ರಸ್ತೆ ಮೇಲೆ ಕುಳಿತಿದ್ದರೂ ಅವರ ಮೌನ ಅಸಹ್ಯಕರ,”
ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇನ್ನೂ ನಿರ್ಲಕ್ಷ್ಯ ಮುಂದುವರಿದರೆ ಹೋರಾಟವನ್ನು ಇನ್ನಷ್ಟು ಉಗ್ರಗೊಳಿಸಲಾಗುವುದು,”
ಎಂದು ಎಚ್ಚರಿಕೆ ನೀಡಿದರು.
ಹೋರಾಟದ ಪ್ರಮುಖ ಬೇಡಿಕೆಗಳು
ಮೈಲೆಶ್ವರ ಸಮೀಪದ ಗುರುತಿಸಲಾದ ನಿರ್ಜನ ಜಾಗವನ್ನು ತಕ್ಷಣ ರದ್ದುಪಡಿಸಬೇಕು
ತಾಳಿಕೋಟೆ ಪಟ್ಟಣದ ವ್ಯಾಪ್ತಿಯಲ್ಲಿಯೇ ಸುಲಭ ಪ್ರವೇಶ ಇರುವ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಬೇಕು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಸಮಸ್ಯೆ ಬಗೆಹರಿಸಬೇಕು.
ಈ ಸಂದರ್ಭದಲ್ಲಿ ಭೀಮನಗೌಡ ತಂಗಡಗಿ ಪರಶುರಾಮ ನಾಯಕ, ಚಂದು ಹಾರಿವಾಳ, ಆನಂದ ನಾಯಕ, ಬಸವರಾಜ ನಾಯಕ, ಸಿದ್ದನಗೌಡ ಬಿರಾದಾರ, ಲಕ್ಷ್ಮಣ ನಾಯಕ ಕಾಶಿಪತಿ ವಡವಡಗಿ ಚಂದ್ರಶೇಖರ ದುಳೆಕಾರ, ರಾಮನಗೌಡ ಕಾಚಾಪುರ, ಶಾಂತಗೌಡ ತಂಗಡಗಿ, ಮಲ್ಲಿಕಾರ್ಜುನ ಕಚನೂರ,ಜಗದೀಶ ಹುಲಗಬಾಳ, ಬಸವರಾಜ ವಡವಡಗಿ
ಯಮನಪ್ಪ ಹರಿಜನ , ಸಂಗು ಹಾರಿವಾಳ
ಮುದಕಪ್ಪದೇಸಾಯಿ, ಸಿದ್ದನಗೌಡ ಪಾಟೀಲ, ಮುತ್ತು ದುಳೆಕಾರ, ಹಾಗೂ ಅನೇಕರು ಹಾಜರಿದ್ದರು.
ಹೋರಾಟ ಸಮಿತಿಯ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚಬಾಳ) ಮುತ್ತಪ್ಪ ಚಮಲಾಪುರ, , ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ ಮುದಕಪ್ಪ ಬಡಿಗೇರ, ಸಿರಸಕುಮಾರ ಹಜೇರಿ, ಮಲ್ಲು ಮೇಟಿ, ಸೇರಿದಂತೆ ಅನೇಕರು ಮತ್ತು ಪಟ್ಟಣದ ಗಣ್ಯರು ಭಾಗವಹಿಸಿದ್ದರು.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















