
ಬಳ್ಳಾರಿ / ಕಂಪ್ಲಿ : ದರೋಜಿ ಗ್ರಾಪಂಯ ಹಳೇ ಮಾದಾಪುರ ಗ್ರಾಮದಲ್ಲಿರುವ ಸಮಸ್ತ ಜನರ ಆರಾಧ್ಯ ದೇವತೆ ಶ್ರೀ ದ್ಯಾವಮ್ಮ ದೇವಿಯ ನೂತನ ದೇವಸ್ಥಾನ ನಿರ್ಮಾಣಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ಸುಮಾರು 15 ಲಕ್ಷ ಅನುದಾನ ಮೊದಲ ಹಂತದಲ್ಲಿ ಮಂಜೂರಾಗಿದ್ದು, ಎರಡನೇ ಹಂತದಲ್ಲಿ ಇನ್ನಷ್ಟು ಅನುದಾನ ಬಿಡುಗಡೆಗೊಳ್ಳುವ ಭರವಸೆ ಇದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಮಾದಾಪುರ ಮಾರೆಪ್ಪ ಆಗ್ರಹಿಸಿದರು.
ಅವರು ಶುಕ್ರವಾರ ಸಮೀಪದ ಹಳೇ ಮಾದಾಪುರ ಗ್ರಾಮದ ದ್ಯಾವಮ್ಮ ದೇವಸ್ಥಾನದಲ್ಲಿ ಅಮಾವಾಸ್ಯೆ ದಿನದಂದು ವಿಶೇಷ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಇಲ್ಲಿನ ದ್ಯಾವಮ್ಮ ದೇವಸ್ಥಾನವನ್ನು ನೂತನ ಕಟ್ಟಡ ಮತ್ತು ಗೋಪುರದೊಂದಿಗೆ ನಿರ್ಮಿಸಲು ಅಂದಾಜು 1 ಕೋಟಿಯ ಕ್ರಿಯಾಯೋಜನೆ ಹೊಂದಲಾಗಿದೆ. ಪ್ರತಿ ವರ್ಷ ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ ಸಾಮೂಹಿಕ ವಿವಾಹಗಳನ್ನು ಉಚಿತವಾಗಿ ಮಾಡಿಕೊಂಡು ಬರಲಾಗಿದೆ. ಆದ್ದರಿಂದ ಗ್ರಾಮಸ್ಥರ ಐಕ್ಯತೆ ಮತ್ತು ಒಗ್ಗಟ್ಟಿನಿಂದ ದೇವಸ್ಥಾನದ ನೂತನ ಕಟ್ಟಡ ಹಾಗೂ ಸಮುದಾಯ ಭವನ ನಿರ್ಮಿಸುವ ಅವಶ್ಯಕತೆ ಇದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸದಡಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಸುಮಾರು 50 ಲಕ್ಷಕ್ಕೂ ಹೆಚ್ಚು ಅನುದಾನ ಮಂಜೂರು ಮಾಡಬೇಕು. ಮತ್ತು ದೇವಸ್ಥಾನ ಕಟ್ಟಡದ ಜೊತೆಗೆ ಗೋಪುರ ನಿರ್ಮಾಣಕ್ಕೆ ಸಂಸದರು, ಶಾಸಕರು, ಅಧಿಕಾರಿಗಳು ಅನುದಾನ ಕಲ್ಪಿಸಬೇಕೆಂದು ಒತ್ತಾಯಿಸಿದರು.
ನಂತರ ಧಾರ್ಮಿಕ ದತ್ತಿ ಇಲಾಖೆಯ ಬಳ್ಳಾರಿ ಎಸಿ ಸವಿತಾ ಇವರು ಗ್ರಾಮದ ದ್ಯಾವಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದ ನಂತರ ಗ್ರಾಮಸ್ಥರೊಂದಿಗೆ ಮಾತನಾಡಿ, ಈಗ ಧಾರ್ಮಿಕ ದತ್ತಿ ಇಲಾಖೆಯಿಂದ 15 ಲಕ್ಷ ಅನುದಾನ ಮಂಜೂರು ಮಾಡಿದ್ದು, ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ಮುಂದಿನ ದಿನದಲ್ಲಿ ಇನ್ನಷ್ಟು ಅನುದಾನ ಮಂಜೂರಾತಿಗೆ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗುವುದು ಎಂದರು. ದತನಂತರ ಎಸಿಗೆ ಸವಿತಾಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿ ಮಾಜಿ ಅಧ್ಯಕ್ಷ ಕೆ.ಅಂಬಣ್ಣ, ಮುಖಂಡರಾದ ವೆಂಕಟೇಶ, ರಾಮಾಂಜಿನಿ, ಸೋಮಶೇಖರ, ವಿರುಪಣ್ಣ, ಮಾವಿನಹಳ್ಳಿ ತಿಮ್ಮಪ್ಪ, ಗವಿಸಿದ್ದಪ್ಪ, ಪ್ರಕಾಶಗೌಡ, ಮಲ್ಲಿಕಾರ್ಜುನ ಸೇರಿದಂತೆ ಗ್ರಾಮಸ್ಥರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















