ಬೆಳಗಾವಿ: ಅಥಣಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದರ ಪಾಟೀಲ್ ರಾಜ್ಯ ಮಟ್ಟದಲ್ಲಿ ಅಸಾಧಾರಣ ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ.
ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಾರ್ಥನಾ, ಒಟ್ಟು 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯದಲ್ಲೇ ಅಗ್ರ ಸ್ಥಾನ ಗಳಿಸಿದ್ದಾಳೆ. ಪ್ರತಿ ವಿಷಯದಲ್ಲೂ ಶೇ.100 ಅಂಕಗಳನ್ನು ಪಡೆದು ತನ್ನ ಮೆದುಳಿನ ಚಾತುರ್ಯವನ್ನು ಸಾಬೀತುಪಡಿಸಿದ್ದಾಳೆ.
ಗ್ರಾಮೀಣ ಪ್ರದೇಶದಲ್ಲಿ ಓದುತ್ತಿದ್ದರೂ, ಸೀಮಿತ ಸೌಲಭ್ಯಗಳ ನಡುವೆಯೇ ಇಂತಹ ಮಹತ್ತರ ಸಾಧನೆ ಮಾಡಿರುವುದು ವಿಶೇಷ. ಕುಟುಂಬದ ಬೆಂಬಲ, ಶಿಕ್ಷಕರ ಮಾರ್ಗದರ್ಶನ ಮತ್ತು ತನ್ನ ಅಕ್ಷರಶಃ ಶ್ರಮದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ಪ್ರಾರ್ಥನಾ ತಿಳಿಸಿದ್ದಾಳೆ.
ಅವಳ ಸಾಧನೆ ಕೇವಲ ಕುಟುಂಬಕ್ಕೆ ಮಾತ್ರವಲ್ಲದೆ, ಕಟಗೇರಿ ಗ್ರಾಮ ಹಾಗೂ ಸಂಪೂರ್ಣ ಅಥಣಿ ತಾಲೂಕಿಗೆ ಹೆಮ್ಮೆ ತಂದಿದೆ.
ಇದೀಗ ಪ್ರಾರ್ಥನಾ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಸೇವೆ ಸಲ್ಲಿಸುವ ಕನಸನ್ನು ಹೊಂದಿದ್ದಾಳೆ. ಅವಳ ಈ ಸಾಧನೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಪರಿಶ್ರಮ ಮತ್ತು ನಿಶ್ಚಯ ಇದ್ದರೆ ಯಾವುದೇ ಗುರಿ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.
ವರದಿ ವಿಠ್ಠಲ ಖೋಕಾಟೆ




















