“ಕ್ರಿಯಾಶೀಲ ಅಧಿಕಾರಿ ರಮೇಶ್ ಅವರಿಗೆ ನನ್ನ ನುಡಿನಮನ ”.
“ಹುಟ್ಟು ಉಚಿತ, ಸಾವು ಖಚಿತ; ಆದರೆ ಹುಟ್ಟು–ಸಾವಿನ ನಡುವೆ ಸಮಾಜಕ್ಕೆ ಮಾಡಿದ ಸೇವೆಯೇ ಮನುಷ್ಯನನ್ನು ಅಮರನನ್ನಾಗಿಸುತ್ತದೆ” ಎಂಬ ನುಡಿಯಂತೆ ಬದುಕಿದ ಅಪರೂಪದ ವ್ಯಕ್ತಿತ್ವ ಮಾಜಿ ಡಿವೈಎಸ್ಪಿ ಕೆ.ಎನ್. ರಮೇಶ್ ರವರು ಇಂದು ನಮ್ಮನ್ನೆಲ್ಲ ಅಗಲಿ ಅನಂತಯಾತ್ರೆಗೆ ತೆರಳಿರುವುದು ಪೊಲೀಸ್ ಇಲಾಖೆಗೆ, ಚನ್ನಪಟ್ಟಣ ತಾಲ್ಲೂಕಿಗೆ ಹಾಗೂ ಸಮಾಜ ಸೇವಾ ವಲಯಕ್ಕೆ ತುಂಬಲಾರದ ನಷ್ಟವಾಗಿದೆ.
ಕೆಲವರಿಗೆ ಉದ್ಯೋಗ ಹೊತ್ತು ಕಳೆಯಲಿಕ್ಕೆ, ಹೆಚ್ಚಿನವರಿಗೆ ಉದ್ಯೋಗ ಹೊಟ್ಟೆ ಹೊರೆಯಲಿಕ್ಕೆ, ಹಲವರಿಗೆ ಉದ್ಯೋಗ ಕರ್ಮವೆಸಗಲಿಕ್ಕೆ, ಆದರೆ ಬೆರಳೆಣಿಕೆ ಮಂದಿಗೆ ಮಾತ್ರ ಉದ್ಯೋಗ ಸೇವೆ ಸರ್ವಸಾಧನಕ್ಕೆ ಎಂಬ ನುಡಿಮುತ್ತಿನಂತೆ ತಮ್ಮ ಪೊಲೀಸ್ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಅಲ್ಲದೆ ಜನಸೇವೆಯ ಯಜ್ಞವಾಗಿ ಕಂಡ ಅಪರೂಪದ ಅಧಿಕಾರಿ ರಮೇಶ್ ರವರು.
ಈ ಹಿಂದೆ ಚನ್ನಪಟ್ಟಣ ಉಪ ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಕೇವಲ ಪೊಲೀಸ್ ಅಧಿಕಾರಿಯಾಗಿರಲಿಲ್ಲ; ಸಮಾಜದ ನೋವುಗಳಿಗೆ ಸ್ಪಂದಿಸುವ ಮಾನವೀಯ ಹೃದಯದ ವ್ಯಕ್ತಿಯಾಗಿದ್ದರು. ಖಾಕಿ ಉಡುಪಿನೊಳಗೆ ಸೇವಾ ಮನೋಭಾವ, ಸರಳತೆ, ಸೌಜನ್ಯ, ಪ್ರೀತಿ, ಗೌರವ ಮತ್ತು ಮಾನವೀಯತೆಯನ್ನು ತುಂಬಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ಅವರದು. ಕಾನೂನು ಪಾಲನೆಯ ಜೊತೆ ಜನರ ಮನ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದರು.
ಶೃಂಗೇರಿ ತಾಲೂಕಿನ ಕಿಗ್ಗ ಗ್ರಾಮದಲ್ಲಿ ಜನಿಸಿದ ರಮೇಶ್ ರವರು ಶಿಕ್ಷಕರ ಕುಟುಂಬದಲ್ಲಿ ಬೆಳೆದು ಬಂದವರು. ತಂದೆ ಶಿಕ್ಷಕರು, ಅಣ್ಣ ಶಿಕ್ಷಕರು, ತಮ್ಮ ಶಿಕ್ಷಕರು ಒಟ್ಟಿನಲ್ಲಿ ಸಮಾಜ ತಿದ್ದುವ ಶಿಕ್ಷಕ ವೃತ್ತಿಯ ಸಂಸ್ಕಾರವೇ ಅವರ ಕುಟುಂಬದ ನೆಲೆಗಟ್ಟಾಗಿತ್ತು. ಬಾಲ್ಯದಿಂದಲೇ ಶಿಸ್ತು, ಸಂಸ್ಕಾರ, ಪ್ರೌಢಿಮೆ ಮತ್ತು ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡಿದ್ದ ಅವರು ಸ್ನಾತಕೋತ್ತರ ಪದವಿವರೆಗೆ ವಿದ್ಯಾಭ್ಯಾಸ ಮಾಡಿ ಮೂರು ವರ್ಷಗಳ ಕಾಲ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ನಂತರ ಪೊಲೀಸ್ ಸೇವೆಯತ್ತ ಆಕರ್ಷಿತರಾಗಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗೆ ಆಯ್ಕೆಯಾಗಿ ಕೋಲಾರ ಜಿಲ್ಲೆ, ಬೆಂಗಳೂರು ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿ ನಂತರ ಚನ್ನಪಟ್ಟಣ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದರು. ತಮ್ಮ ಸುಮಾರು 31 ವರ್ಷಗಳ ಸೇವಾ ಜೀವನದಲ್ಲಿ ಹಲವಾರು ವರ್ಗಾವಣೆಗಳನ್ನು ಕಂಡರೂ ಕರ್ತವ್ಯನಿಷ್ಠೆಯನ್ನು ಎಂದಿಗೂ ಬಿಟ್ಟಿರಲಿಲ್ಲ.
ಚನ್ನಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಪೊಲೀಸ್ ಠಾಣೆಯ ವಾತಾವರಣವನ್ನೇ ಬದಲಿಸಿದ ಅವರು “ಅಪ್ಪಣೆಯಿಲ್ಲದೆ ಸಾರ್ವಜನಿಕರು ಒಳಗೆ ಪ್ರವೇಶಿಸಬಹುದು” ಎಂಬ ಫಲಕವನ್ನು ಹಾಕಿಸಿ ಜನಪರ ಪೊಲೀಸ್ ವ್ಯವಸ್ಥೆಗೆ ಹೊಸ ಅರ್ಥ ನೀಡಿದರು. “ಪೋಲಿಸ್ ಠಾಣೆಯೂ ದೇವಾಲಯದಂತೆಯೇ ಜನರ ಭರವಸೆಯ ಸ್ಥಳವಾಗಬೇಕು” ಎಂಬ ಅವರ ಮಾತುಗಳು ಇಂದಿಗೂ ಅನೇಕರ ಮನದಲ್ಲಿ ಪ್ರತಿಧ್ವನಿಸುತ್ತಿವೆ. ತಮ್ಮ ಕಚೇರಿಯಲ್ಲಿ ಭಾರತಾಂಬೆ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಗಳನ್ನು ಅಳವಡಿಸಿ ದೇಶಭಕ್ತಿ ಮತ್ತು ಪ್ರೇರಣೆಯ ವಾತಾವರಣ ನಿರ್ಮಿಸಿದ್ದರು.
ತಾಲ್ಲೂಕಿನ ರಾಜಕೀಯ ಮುಖಂಡರು, ವಿವಿಧ ಧಾರ್ಮಿಕ ಸಮುದಾಯಗಳು, ಆಟೋ ಚಾಲಕರು, ವ್ಯಾಪಾರಿಗಳು, ಸರ್ಕಾರಿ ನೌಕರರು ಸೇರಿದಂತೆ ವಿವಿಧ ವರ್ಗದ ಜನರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದರು. ನ್ಯಾಯಾಲಯ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಮತ್ತು ನ್ಯಾಯದ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದರು.
ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು ಹಾಗೂ ದೇವಸ್ಥಾನಗಳ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಕೊಂಡು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದರು.
ಬೊಂಬೆನಾಡು ಚನ್ನಪಟ್ಟಣದಲ್ಲಿ “ಬೊಂಬೆನಾಡು ಸುರಭಿ ಗೋಶಾಲೆ” ಸ್ಥಾಪಿಸಿ ಗೋಸಾಕಾಣಿಕೆಗೆ ಉತ್ತೇಜನ ನೀಡಿದರು. ಮಲೆನಾಡು ಗಿಡ್ಡ ಸೇರಿದಂತೆ ಹಲವು ಜಾತಿಯ ಗೋವುಗಳನ್ನು ಸಾಕಿ ಭಾರತೀಯ ಸಂಸ್ಕೃತಿಯ ಭಾಗವಾದ ಗೋಸಂರಕ್ಷಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ವಿಶೇಷ ತರಗತಿಗಳನ್ನು ನಡೆಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಪರೀಕ್ಷಾ ಸಾಮಗ್ರಿಗಳನ್ನು ವಿತರಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ಕೆಲಸ ಮಾಡಿದರು. ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚಿಸುವುದು, ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೂ ಕೈಜೋಡಿಸಿದ್ದರು.
ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಮತ್ತು ಕ್ಷೇತ್ರಗಳ ಐತಿಹಾಸಿಕ ಮಹತ್ವದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ಚನ್ನಪಟ್ಟಣ ತಾಲ್ಲೂಕಿನ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ಆ ಕ್ಷೇತ್ರಗಳ ಹಿನ್ನೆಲೆಯನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಹುಣ್ಣಿಮೆ ಕಾರ್ಯಕ್ರಮಗಳು, ಭಜನೆಗಳು, ಉಪನ್ಯಾಸಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿದ್ದರು.
ತಾವೊಬ್ಬ ಶಿಕ್ಷಕರ ಮಗ ಹಾಗೂ ಶಿಕ್ಷಕರಾಗಿದ್ದ ಹಿನ್ನೆಲೆ ಗುರುಗಳ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಅವರು “ಗುರುನಮನ” ಕಾರ್ಯಕ್ರಮಗಳ ಮೂಲಕ ನಿವೃತ್ತ ಶಿಕ್ಷಕರು ಮತ್ತು ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದರು. ಚಕ್ಕೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೂರಾರು ಶಿಕ್ಷಕರಿಗೆ ಗೌರವ ಸಲ್ಲಿಸಿದ್ದರು.
ಚನ್ನಪಟ್ಟಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಟೂರಿಸಂ ಡೆವಲಪ್ಮೆಂಟ್ ಟೀಮ್ ರಚಿಸಿ ಗೊಂಬೆನಾಡಿನ ವೈಶಿಷ್ಟ್ಯ, ದೇವಾಲಯಗಳು, ಡ್ಯಾಂಗಳು ಹಾಗೂ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವ ಯೋಜನೆ ರೂಪಿಸಿದ್ದರು. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಕನಸನ್ನೂ ಹೊಂದಿದ್ದರು.
ಡಿವೈಎಸ್ಪಿ ರಮೇಶ್ ಅವರು ಕೇವಲ ಅಧಿಕಾರಿಯಾಗಿರದೆ ಉತ್ತಮ ವಾಗ್ಮಿ, ವಿಚಾರವಾದಿ ಮತ್ತು ಚಲಿಸುವ ವಿಶ್ವಕೋಶವಾಗಿದ್ದರು. ಬಸವಣ್ಣ, ಬುದ್ಧ, ಗಾಂಧೀಜಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದ್ದರು. ಸ್ವಾಮಿ ವಿವೇಕಾನಂದರ ಪರಮಭಕ್ತರಾಗಿದ್ದ ಅವರು ಶಾಲಾ–ಕಾಲೇಜುಗಳಿಗೆ ತೆರಳಿ ಯುವಜನರಲ್ಲಿ ಆತ್ಮವಿಶ್ವಾಸ ಮತ್ತು ದೇಶಭಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದರು.
“ರಮೇಶ್ ಚಾರಿಟಬಲ್ ಟ್ರಸ್ಟ್” ಸ್ಥಾಪಿಸಿ ಶಿಕ್ಷಕರು, ಸಮಾಜಸೇವಕರು, ಉದ್ಯಮಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರದ ವ್ಯಕ್ತಿಗಳನ್ನು ಒಗ್ಗೂಡಿಸಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದ್ದರು. ಈ ಕಾರ್ಯಗಳಲ್ಲಿ ಹಲವಾರು ಸಮಾಜಮುಖಿ ವ್ಯಕ್ತಿಗಳು ಕೈಜೋಡಿಸಿದ್ದರು.
ಚನ್ನಪಟ್ಟಣದಿಂದ ವರ್ಗಾವಣೆಯಾದ ನಂತರ ಕೋಲಾರ ಹಾಗೂ ನಂತರ ACP ಆಗಿ assistant commissioner of police ಆಗಿ ಪದೋನ್ನತಿ ಪಡೆದು ರಾಮನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರವೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸರಳ ಹಾಗೂ ಸಾರ್ಥಕ ಜೀವನ ಸಾಗಿಸುತ್ತಿದ್ದರು.
ಇಂದು ಅವರು ನಮ್ಮ ನಡುವೆ ಇಲ್ಲ ಎನ್ನುವ ಸುದ್ದಿ ಮನಸ್ಸಿಗೆ ಅತೀವ ದುಃಖ ತಂದಿದೆ. ಅನಾರೋಗ್ಯದ ಕಾರಣದಿಂದ ಅವರು ನಿಧನ ಹೊಂದಿರುವುದು ಸಮಾಜಕ್ಕೆ ದೊಡ್ಡ ನಷ್ಟ. ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಶೃಂಗೇರಿ ತಾಲೂಕಿನ ಕಿಗ್ಗ ಗ್ರಾಮಕ್ಕೆ ಕೊಂಡೊಯ್ಯಲಾಗಿದ್ದು, ಅಂತ್ಯಕ್ರಿಯೆ ಅಲ್ಲಿ ನಡೆಯಲಿರುವುದು ತಿಳಿದು ಬಂದಿದೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದವರಿಗೆ, ಬಂಧುಬಳಗಕ್ಕೆ, ಸ್ನೇಹಿತರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.
“ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ದಿವ್ಯವಾಣಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪೊಲೀಸ್ ವೃತ್ತಿಯ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಡಿವೈಎಸ್ಪಿ ಕೆ.ಎನ್. ರಮೇಶ್ ರವರ ಸೇವೆ, ಸಾಧನೆ, ಸರಳತೆ ಮತ್ತು ಮಾನವೀಯ ವ್ಯಕ್ತಿತ್ವ ಸದಾ ಚಿರಸ್ಮರಣೀಯವಾಗಿರುತ್ತದೆ.
ಭಾವಪೂರ್ಣ ಶ್ರದ್ಧಾಂಜಲಿಗಳು.
- ಯೋಗೇಶ್ ಚಕ್ಕೆರೆ
ಸಾಹಿತಿ ಹಾಗೂ ಕನ್ನಡ ಅಧ್ಯಾಪಕರು
ಚನ್ನಪಟ್ಟಣ.




















