ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಿಳಾ ಮೀಸಲಾತಿ- ಮಾನವೀಯತೆಯ ಸೋಲು – ಕವಿತಾ ಹೆಗಡೆ

ಶಿರಸಿ : ಮಹಿಳೆಗೆ ಅವಕಾಶ ಬೇಕು; ಪೀಠ ಬೇಡ; ಸ್ಥಾನ ಬೇಕು. ಸಂಸಾರದಲ್ಲಿ 50 ಪ್ರತಿಶತ ಸಹಯೋಗ ನೀಡುವ ಹೆಣ್ಣಿಗೆ ರಾಜಕೀಯದಲ್ಲೂ 33 ಅಲ್ಲ, ಪ್ರತಿಶತ 50 ಅಧಿಕಾರ ಸಿಗಬೇಕು. ಇನ್ನೂ ಮಹಿಳಾ ಮೀಸಲಾತಿ ನೀಡಬೇಕು ಎನ್ನುವ ಮಾತೇ ನಾವು ಹೆಣ್ಣಿಗೆ ಸುರಕ್ಷಿತ ಸಮಾಜವನ್ನು ನಿರ್ಮಿಸಿಲ್ಲ ಎಂದರ್ಥ. ಇದು ಮಾನವೀಯತೆಯ ಸೋಲು. ಇನ್ನಾದರೂ ಮಹಿಳೆಗೆ ಸಮಾನ ಅವಕಾಶಗಳು ದೊರೆತು ಅವಳು ಪೋಷಕ ಪಾತ್ರವಾಗದೆ ಸ್ವತಂತ್ರ ಅಸ್ತಿತ್ವವುಳ್ಳ ವ್ಯಕ್ತಿಯಾಗಿ ಬಾಳಬೇಕು ಎಂದು ಬರಹಗಾರ್ತಿ, ಶಿಕ್ಷಕಿ ಕವಿತಾ ಹೆಗಡೆ ಅಭಯಂ ಹೇಳಿದರು.
ಅವರು ಶಿರಸಿಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜಸ್ಟಿಸ್ ಜಿ ಎನ್ ಸಭಾಹಿತ , ಜಸ್ಟಿಸ್ ವಿಷ್ಣು ಸಭಾಹಿತ ಸ್ಮರಣೆ ಉಪನ್ಯಾಸ, ಕಾನೂನು ಸಲಹೆ ಕಾರ್ಯಕ್ರಮದಲ್ಲಿ ಮಹಾಭಾರತದಿಂದ ಮೆಟ್ರೋವರೆಗೆ ಅವಳು ಪೋಷಕ ಪಾತ್ರವೇ ಏಕೆ? ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದರು. ಮುಂದುವರಿದು, ಗಂಡು ಮತ್ತು ಹೆಣ್ಣು ಮಕ್ಕಳು ಹುಟ್ಟಿದಾಗಿನಿಂದಲೇ ಲಿಂಗ ತಾರತಮ್ಯವನ್ನು ಅನುಸರಿಸುವ ಜನರು, ಹೆಣ್ಣು ‘ಎರಡನೇ ಆಯ್ಕೆ’ ಆಗಲು ಅವಳನ್ನು ಮಾನಸಿಕವಾಗಿ ಸಿದ್ಧಗೊಳಿಸಿಬಿಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ತ್ರೀಯನ್ನು ದೇವಿಯನ್ನಾಗಿ ಪೂಜಿಸುವುದು ಸುಲಭ ಆದರೆ ಮಾನವಳಾಗಿ ಸಮಾನತೆ ನೀಡುವುದು ಕಷ್ಟ ಎಂದು ಅಭಿಪ್ರಾಯಪಟ್ಟರು. ಮಹಾಭಾರತದಲ್ಲಿ ದ್ರೌಪದಿ, ಗಾಂಧಾರಿಯರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅವಕಾಶವೇ ಸಿಗಲಿಲ್ಲ. ಧರ್ಮ-ಪಗಡೆಯ ಹೆಸರಿನಲ್ಲಿ ಹೆಣ್ಣು ವಸ್ತುವಾದಳು. ಕಥಾನಾಯಕಿಯೇ ಆದರೂ ಅವಳ ಅಭಿಪ್ರಾಯಕ್ಕೆ ಮೊದಲ ಪ್ರಾಶಸ್ತ್ಯ ಸಿಗಲಿಲ್ಲ ಎಂದು ವಿವರಿಸಿದರು. ಮಧ್ಯಯುಗದಲ್ಲಿ ಸತಿ, ಪರದಾ ಪದ್ಧತಿಗಳು ಹೆಣ್ಣನ್ನು ಡಬ್ಬದಲ್ಲಿ ಮುಚ್ಚಿಟ್ಟ ವಸ್ತುವನ್ನಾಗಿ ಮಾಡಿ ಅವಳನ್ನು ಸಾರ್ವಜನಿಕ ಬದುಕಿನಿಂದಲೇ ದೂರ ಮಾಡಿದವು. ಇಂದಿನ ಮೆಟ್ರೋ ಯುಗದಲ್ಲಿ ಹೆಣ್ಣು ಇಂಜಿನಿಯರ್, ಪೈಲಟ್ ಆದರೂ ಮನೆಯಲ್ಲಿ ಮೊದಲ ಶಿಫ್ಟ್, ಕಚೇರಿಯಲ್ಲಿ ‘ಸೆಕೆಂಡ್ ಶಿಫ್ಟ್’ ಮುಗಿಸಿ ಮರಳಿ ಮನೆಯಲ್ಲಿ ಮೂರನೇ ಶಿಫ್ಟಿನಲ್ಲಿ ದಣಿಯುತ್ತಲೇ ಇರುತ್ತಾಳೆ. ರಾಜಕೀಯದಲ್ಲಿ, ಉದ್ಯೋಗದಲ್ಲಿ, ವಾರಸುದಾರಿಕೆಯಲ್ಲಿ, ಪ್ರೀತಿಯಲ್ಲಿ ಎಲ್ಲೆಡೆ ಅವಳು ಅರ್ಹತೆಯಿದ್ದರೂ ವಂಚಿತಳಾಗುತ್ತಿದ್ದಾಳೆ. ಸ್ತ್ರೀ ಈಗ ಬದಲಾವಣೆಗೆ ಸಿದ್ಧವಾಗಬೇಕು, ತಮ್ಮ ಹಕ್ಕಿಗಾಗಿ ದನಿ ಎತ್ತಲು ಹೆಣ್ಣು ಮಕ್ಕಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು. ಇನ್ನಾದರೂ ಮಹಿಳೆಗೆ ಸಮಾನ ಅವಕಾಶಗಳು ದೊರೆತು ಅವಳು ಪೋಷಕ ಪಾತ್ರವಾಗದೆ ಸ್ವತಂತ್ರ ಅಸ್ತಿತ್ವವುಳ್ಳ ವ್ಯಕ್ತಿಯಾಗಿ ಬಾಳುವಂತಾಗಬೇಕು ಎಂದು ಸ್ತ್ರೀ ಜಾಗೃತಿ ಕುರಿತು ಯೋಚನಾ ಪೂರ್ಣ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶುಭಾ ಸಭಾಹಿತರವರು ಸ್ತ್ರೀ ಸಂವೇದಿ ಸ್ವರಚಿತ ಕವನಗಳನ್ನು ವಾಚಿಸಿದರು.
ಧಾರವಾಡ ಉಚ್ಚ ನ್ಯಾಯಾಲಯದ ಖ್ಯಾತ ನ್ಯಾಯವಾದಿ ಶ್ರೀ ಎಸ್ ಕೆ ಹೆಗಡೆಯವರು ಕಾನೂನು ಸಾಕ್ಷರತೆಯ ಬಗ್ಗೆ ಮಾತನಾಡಿ ಜನಸಾಮಾನ್ಯರಿಗೆ ದಿನನಿತ್ಯ ಅಗತ್ಯವಾದ ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು. ಸಂವಿಧಾನದ ಮೂಲಭೂತ ಆಶಯವೆಂದರೆ “ಬದುಕು ಬದುಕಲು ಬಿಡು” ಎಂಬುದೇ ಆಗಿದ್ದು, ಎಲ್ಲ ಕಾನೂನುಗಳೂ ಇದರ ಸುತ್ತಲೇ ಸುತ್ತುತ್ತವೆ. ಜನತಾ ನ್ಯಾಯಾಲಯ, ಗ್ರಾಹಕ ನ್ಯಾಯಾಲಯ, ಉಚಿತ ಕಾನೂನು ನೆರವಿನ ವ್ಯವಸ್ಥೆಯಂತಹ ಹಲವು ಯೋಜನೆಗಳಿಂದ ಸರ್ಕಾರ ಜನಸಾಮಾನ್ಯರಿಗೆ ನೆರವು ನೀಡುತ್ತಿದ್ದು, ಆರ್ಥಿಕ ತೊಂದರೆಯುಳ್ಳವರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಾರ್ವಜನಿಕರಿಗೆ ಮಾಹಿತಿ ಹಕ್ಕು, ವೈವಾಹಿಕ ಕಾನೂನು ಮತ್ತು ಮಹಿಳೆಯ ಹಕ್ಕು, ಕೌಟುಂಬಿಕ ಕಲಹ ಮತ್ತು ಪರಿಹಾರ, ಗ್ರಾಹಕರ ಹಿತ ರಕ್ಷಣೆ, ಕಾನೂನಿನ ಸಾಮಾನ್ಯ ಜ್ಞಾನದ ಅಗತ್ಯಗಳನ್ನು ವಿಸ್ತಾರವಾಗಿ ವಿವರಿಸಿದರು. ಡೈವೋರ್ಸ್ ಗಂಡು, ಹೆಣ್ಣು ಇಬ್ಬರದೂ ಹಕ್ಕಾಗಿದ್ದು ದೌರ್ಜನ್ಯದ ವಿರುದ್ಧ ಇರುವ ಪ್ರಬಲ ಸಹಾಯವಾಗಿದ್ದು ,ಇದನ್ನು ದುರುಪಯೋಗ ಪಡಿಸಿಕೊಳ್ಳಲು ಬಳಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಸಭಿಕರ ಅನೇಕ ಸಂದೇಹಗಳಿಗೆ ಪರಿಹಾರ ಸೂಚಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಇಂದಿರಾ ಬೈಲಕೇರಿ ಅವರ ನೇತೃತ್ವದಲ್ಲಿ ಮಾರಿಕಾಂಬಾ ಮಾತೃ ಮಂಡಳಿಯ ಲಕ್ಷ್ಮಿ ಹೆಗಡೆ, ತ್ರಿವೇಣಿ ಹೆಗಡೆ, ಸುಮನಾ ಭಟ್, ಕೌಸಲ್ಯಾ, ಹೇಮಾ ಹಳಕಾರ್, ಸ್ಮಿತಾ ಗುಡಿಗಾರ, ಅರುಣಾ ಕಾಮತ, ರೂಪಾ ಶೇಟ್, ಸ್ನೇಹಾ, ಕೃಪಾ ಶಾನಭಾಗ, ಅನನ್ಯಾ ಶೇಟ್, ಅನಿತಾ ಶೇಟ್, ಶಾಂತೇರಿ ಕಿಣಿ, ಸಾವಿತ್ರಿ ಕಿಣಿ, ಅಕ್ಷತಾ ಮರಾಠೆ, ಶಾರದಾ ಪೂಜಾರ್ ಅವರಿಂದ ಅಧಿಕ ಮಾಸ ಪ್ರಯುಕ್ತ ವಿಶೇಷ ಭಗವದ್ಗೀತಾ ಪಠಣ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕುಮಟಾ ಟೆಕ್ಸರ್ ಸಂಸ್ಥೆಯ ವ್ಯವಸ್ಥಾಪಕ ವಿಷ್ಣು ಸಭಾಹಿತರವರು ನಮ್ಮ ಕುಟುಂಬದ, ಜಿಲ್ಲೆಯ, ಅಷ್ಟೇ ಅಲ್ಲದೆ ರಾಜ್ಯಕ್ಕೇ ಮಾದರಿಯಾದ ಜಸ್ಟಿಸ್ ಜಿ ಎನ್ ಸಭಾಹಿತ, ಜಸ್ಟಿಸ್ ವಿಷ್ಣು ಸಭಾಹಿತ ಅವರ ಸ್ಮರಣೆ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ವಿಷಯವೆಂದು ತಿಳಿಸಿ, ಈ ಕಾರ್ಯಕ್ರಮವನ್ನು ಕಳೆದೆರಡು ವರ್ಷಗಳಿಂದ ನಿಸ್ಪ್ರಹತೆಯಿಂದ, ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಆಯೋಜಿಸುತ್ತಿರುವ ಶ್ರೀ ಎಂ ಎಸ್ ಹೆಗಡೆ ಅವರಿಗೆ ಕೃತಜ್ಞತೆ, ಗೌರವ ಸಲ್ಲಿಸಿ, ಎಲ್ಲರನ್ನೂ ವಂದಿಸಿದರು. ಕೀರ್ತನಕಾರಳಾದ, ಕಾನೂನು ವಿದ್ಯಾರ್ಥಿನಿ ಪ್ರಿಯಾಂಕಾ ಪರಮಾನಂದ ಹೆಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಡಿ ಎಸ್ ಹೆಗಡೆ, ಡಿ ಜಿ ಹೆಗಡೆ, ಎಸ್ ಎಸ್ ಹೆಗಡೆ, ಆರ್ ಎಸ್ ಬೈಲಕೇರಿ, ಹೆಚ್ ದೇವೇಂದ್ರ, ಪಾರ್ವತಿ ಹೆಗಡೆ, ಆಶಾ ಸಭಾಹಿತ, ನಾರಾಯಣ ಪುರಾಣಿಕ , ಆರ್ ಎಸ್ ಹೆಗಡೆ , ಎಸ್ ವಿ ಹೆಗಡೆ, ಕಾಶಿನಾಥ ಹೆಗಡೆ, ಲಕ್ಷ್ಮಣ ಶಾನಭಾಗ, ಪಿ ಎನ್ ಭಟ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!