ಸಿರುಗುಪ್ಪ – ನಗರದ 2ನೇ ವಾರ್ಡ್ನ ಕೊಪ್ಪಳ ಮಸೀದಿ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಕ್ಷೇತ್ರ ಯೋಜನಾಧಿಕಾರಿ ಎಸ್. ವಸಂತ್ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜ್ವಲಂತ ಕಾರ್ಯಕ್ರಮಗಳು, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಅರಿವು ಕಾರ್ಯಕ್ರಮ, ಮಹಿಳೆಯರ ಹಕ್ಕು ಮತ್ತು ಕಾನೂನು, ಸರಕಾರಿ ಯೋಜನೆಗಳು, ನಾನು ಓದಿದ ಪುಸ್ತಕ ವಿಮರ್ಶೆ, ಹೀಗೆ ಮಹಿಳೆಯರಿಗೆ ಅನೇಕ ಮಾಹಿತಿಯ ಕಣಜವನ್ನ ಒದಗಿಸುವಂತಹ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಾಡುತ್ತಾ ಬರುತ್ತಿದೆ ಅದರೊಟ್ಟಿಗೆ ವಿಶೇಷವಾಗಿ ಸಾರ್ವಜನಿಕರಿಗೆ ಶೌಚಾಲಯ ರಚನೆ ಮತ್ತು ಬಳಕೆ, ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳುವಂಥದ್ದು, ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್, ದೇವಸ್ಥಾನ, ಶಾಲಾ ಆವರಣಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳುವುದು, ನೀರಾವರಿ ವ್ಯವಸ್ಥೆಗಳಲ್ಲಿ ನೀರಿನ ಮಿತ ಬಳಕೆ ಮತ್ತು ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಈ ಕುರಿತು ಪ್ರಹಸನದ ಮೂಲಕ ಜನರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ತಾಲೂಕಿಗೆ ಎರಡು ಕಾರ್ಯಕ್ರಮದಂತೆ ಇಡೀ ರಾಜ್ಯಾದ್ಯಂತ 500 ಕಾರ್ಯಕ್ರಮಗಳ ಆಯೋಜನೆಗೆ 25 ಲಕ್ಷ ರೂಪಾಯಿ ಅನುದಾನವನ್ನು ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುತ್ತಾರೆ ಎಂದರು.
ನಂತರ ಮಾತನಾಡಿದ ಧರ್ಮಗುರುಗಳಾದ ಸಮದ್ ಮೌಲಾನ ರವರು ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಸಾಲ ನೀಡುವ ಸಂಸ್ಥೆಯಾಗಿರದೆ ಮಹಿಳೆಯರನ್ನು ಒಟ್ಟುಗೂಡಿಸಿ ನಿಮ್ಮ ಮನೆಗಳಲ್ಲಿ ಆರೋಗ್ಯದಿಂದ ಇರಲು ನಿಮಗೋಸ್ಕರ ಬೀದಿ ನಾಟಕದ ಮೂಲಕ ಪರಿಸರದ ಜಾಗೃತಿ, ಚರಂಡಿ ಸ್ವಚ್ಚತೆ, ಹಸಿಕಸ-ಒಣಕಸ ಬೇರ್ಪಡಿಸುವುದು, ಬಾಲ್ಯ ವಿವಾಹದಿಂದ ಆಗುವ ಸಮಸ್ಯೆಗಳ ಬಗ್ಗೆ ಮನ ಮುಟ್ಟುವ ರೀತಿಯಲ್ಲಿ ಬೀದಿ ನಾಟಕಗಳನ್ನು ಆಯೋಜನೆ ಮಾಡಿ ಸಮಾಜ ಪರಿವರ್ತನಗೆ ಶ್ರಮವಹಿಸುತ್ತಿದ್ದಾರೆ, ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಜನರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜನರಂಗ ಕಲಾ ತಂಡದ ಮುಖ್ಯಸ್ಥರಾದ ಅಶೋಕ ಬಡಿಗೇರ್, ಒಕ್ಕೂಟದ ಅಧ್ಯಕ್ಷರಾದ ಫರ್ಜನ ಬೇಗಂ, ಸಂಪನ್ಮೂಲ ವ್ಯಕ್ತಿ ನರಸಿಂಹ ಮೂರ್ತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರೀಯಾ, ವಲಯದ ಮೇಲ್ವಿಚಾರಕಿ ಚಂದ್ರಕಲಾ, ಸೇವಾಪ್ರತಿನಿಧಿ ಶಾಕೀರ, ಲಕ್ಷ್ಮಿ ಹಾಗೂ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.
ವರದಿ : ಮಸೀದಿ, ಅಬ್ದುಲ್ ಗೌಸ್, ಸಿರುಗುಪ್ಪ




















