ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಸ ನಮ್ಮದು… ಜವಾಬ್ದಾರಿ ಯಾರದು?ನಾನೇಕೆ ಸ್ವಚ್ಛಗೊಳಿಸಬೇಕು? – ಗ್ರಾಮೀಣ ಭಾರತದ ದೊಡ್ಡ ಪ್ರಶ್ನೆ

ಇಂದಿನ ಡಿಜಿಟಲ್ ಯುಗದಲ್ಲಿ ಒಂದು ಹೇಳಿಕೆ, ಒಂದು ವಿಡಿಯೋ ಅಥವಾ ಒಂದು ಸಾಮಾಜಿಕ ಜಾಲತಾಣದ ಅಭಿಯಾನ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪುತ್ತಿದೆ. ಸಮಾಜದ ವಿವಿಧ ವಿಚಾರಗಳು ಕ್ಷಣಾರ್ಧದಲ್ಲಿ ಜನರ ಗಮನ ಸೆಳೆಯುತ್ತವೆ. ಆದರೆ ಪರಿಸರ ಸಂರಕ್ಷಣೆ, ಗ್ರಾಮ ಸ್ವಚ್ಛತೆ ಹಾಗೂ ಘನ ತ್ಯಾಜ್ಯ ನಿರ್ವಹಣೆಯಂತಹ ವಿಷಯಗಳು ಇನ್ನೂ ಜನಚಳವಳಿಯ ರೂಪದಲ್ಲಿ ನಿರಂತರವಾಗಿ ಉಳಿಯಲು ಸಾಧ್ಯವಾಗುತ್ತಿಲ್ಲ. ಇದೇ ಪ್ರಶ್ನೆಯು ಈ ಅಧ್ಯಯನದ ಕೇಂದ್ರಬಿಂದುವಾಗಿದೆ.
ಒಂದು ಕಾಲದಲ್ಲಿ “ಸ್ವಚ್ಛ ಭಾರತ ಅಭಿಯಾನ” ದೇಶದಾದ್ಯಂತ ಹೊಸ ಚೈತನ್ಯ ಮೂಡಿಸಿತ್ತು. ಶಾಲೆಗಳು, ಕಾಲೇಜುಗಳು, ಗ್ರಾಮ ಪಂಚಾಯಿತಿಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಂದೇ ಗುರಿಯೊಂದಿಗೆ ಕೈಜೋಡಿಸಿದ್ದರು. ಆದರೆ ಆರಂಭದ ವೇಗ ಮತ್ತು ಉತ್ಸಾಹವು ಕಾಲಕ್ರಮೇಣ ಹಲವೆಡೆ ಕಡಿಮೆಯಾಗಿರುವುದು ಕಂಡುಬರುತ್ತಿದೆ. ಸುಸ್ಥಿರವಾಗಿ ಸಾಗಬೇಕಾಗಿದ್ದ ಈ ಚಳವಳಿ ಏಕೆ ತನ್ನ ಪ್ರಭಾವವನ್ನು ಕಳೆದುಕೊಂಡಿತು ಎಂಬ ಪ್ರಶ್ನೆ ಈ ಸಂಶೋಧನೆಗೆ ಪ್ರಮುಖ ಪ್ರೇರಣೆಯಾಯಿತು.
ಈ ಅಧ್ಯಯನದ ಅಂಗವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕ್ಷೇತ್ರ ಅಧ್ಯಯನ ನಡೆಸಲಾಯಿತು. ಒಟ್ಟು 45 ಜನರೊಂದಿಗೆ ಸಂದರ್ಶನ ನಡೆಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಸ್ವಚ್ಛತಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.
ಅಧ್ಯಯನದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆಗಳು ಹಾಗೂ ಮಾರ್ಗಸೂಚಿಗಳ ಅನ್ವಯ ಅನೇಕ ಗ್ರಾಮ ಪಂಚಾಯಿತಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂತು. ವಿಶೇಷವಾಗಿ ಉಡುಪಿ ಜಿಲ್ಲೆಯ ಕರ್ಕಳ ಭಾಗದ ಗ್ರಾಮ ಪಂಚಾಯಿತಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯಿತಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿಯ ಕಾರ್ಯವನ್ನು ನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ. ಇಲ್ಲಿ ಮಹಿಳಾ ಸ್ವಸಹಾಯ ಸಂಘಗಳು, ಸ್ಥಳೀಯ ಸಮುದಾಯ ಮತ್ತು ಗ್ರಾಮ ಪಂಚಾಯಿತಿಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಯಶಸ್ಸಿನ ಪ್ರಮುಖ ಕಾರಣವಾಗಿದೆ.
ಆದಾಗ್ಯೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಅನೇಕ ಸವಾಲುಗಳು ಕಂಡು ಬಂದವು. ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು, ಚರಂಡಿಗಳಲ್ಲಿ ಕಸ ಕಟ್ಟಿಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ರಾಶಿ ಮಾಡುವುದು ಸಾಮಾನ್ಯ ದೃಶ್ಯಗಳಾಗಿವೆ. “ನಾನೇಕೆ ಸ್ವಚ್ಛಗೊಳಿಸಬೇಕು?”, “ಅದು ನನ್ನ ಕೆಲಸವಲ್ಲ” ಎಂಬ ಮನೋಭಾವ ಕೆಲವೆಡೆ ಕಂಡುಬಂತು. ಕಸದ ದುಷ್ಪರಿಣಾಮಗಳ ಬಗ್ಗೆ ಹಾಗೂ ಪರಿಸರ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮಗಳ ಬಗ್ಗೆ ಸಮರ್ಪಕ ಅರಿವು ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸಿತು.
ಘನ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ ಅದು ಕೇವಲ ಸ್ವಚ್ಛತೆಯ ಸಮಸ್ಯೆಯಾಗಿರುವುದಿಲ್ಲ. ಚರಂಡಿಗಳಲ್ಲಿ ಕಸ ಕಟ್ಟಿಕೊಳ್ಳುವುದು, ನೀರು ನಿಲ್ಲುವುದು ಹಾಗೂ ತ್ಯಾಜ್ಯ ರಾಶಿಗಳು ಮಲೇರಿಯಾ, ಡೆಂಗ್ಯೂ, ಕಾಲರಾ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಬಹುದು. ಆದ್ದರಿಂದ ಘನ ತ್ಯಾಜ್ಯ ನಿರ್ವಹಣೆಯನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ ವಿಷಯವಾಗಿ ಪರಿಗಣಿಸಬೇಕಾಗಿದೆ.
ಈ ಸಂಶೋಧನೆಯ ಪ್ರಮುಖ ಶೋಧನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯು ಜನರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನೆಲೆ, ಜಾಗೃತಿ ಮಟ್ಟ, ಸಮುದಾಯದ ಭಾಗವಹಿಸುವಿಕೆ ಮತ್ತು ಗ್ರಾಮ ಪಂಚಾಯಿತಿಗಳ ಆಡಳಿತ ಸಾಮರ್ಥ್ಯದಿಂದ ಪ್ರಭಾವಿತವಾಗಿರುವುದನ್ನು ತೋರಿಸಿವೆ. ಗ್ರಾಮ ಪಂಚಾಯಿತಿಗಳಿಂದ ಕಸ ಸಂಗ್ರಹಣೆ ಮತ್ತು ವಿಂಗಡಣೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದ್ದರೂ, ಮೂಲಸೌಕರ್ಯ ಕೊರತೆ, ಸ್ಥಳದ ಅಭಾವ, ಆರ್ಥಿಕ ಸಮಸ್ಯೆಗಳು ಹಾಗೂ ಕೆಲವೆಡೆ ಜಾಗೃತಿಯ ಕೊರತೆ ಪರಿಣಾಮಕಾರಿ ನಿರ್ವಹಣೆಗೆ ಅಡ್ಡಿಯಾಗುತ್ತಿವೆ.
ಮಹಿಳೆಯರು ಮನೆಮಟ್ಟದ ಕಸ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಅಧ್ಯಯನದ ಪ್ರಮುಖ ಅಂಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜೈವಿಕ ತ್ಯಾಜ್ಯದ ಪ್ರಮಾಣ ಹೆಚ್ಚಿರುವುದರಿಂದ ಕಾಂಪೋಸ್ಟಿಂಗ್ ಮತ್ತು ಸಾವಯವ ಗೊಬ್ಬರ ತಯಾರಿಕೆಗೆ ಹೆಚ್ಚಿನ ಅವಕಾಶಗಳಿವೆ. ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಇರುವ ಗ್ರಾಮಗಳಲ್ಲಿ ತ್ಯಾಜ್ಯ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತಿರುವುದು ಕಂಡುಬಂದಿದೆ.
ಸಮಾಜಕಾರ್ಯದ ದೃಷ್ಟಿಕೋನದಲ್ಲಿ ಘನ ತ್ಯಾಜ್ಯ ನಿರ್ವಹಣೆ ಕೇವಲ ಕಸ ವಿಲೇವಾರಿಯ ಕಾರ್ಯಕ್ರಮವಲ್ಲ. ಅದು ಸಮುದಾಯದ ಒಗ್ಗಟ್ಟು, ಸಾಮಾಜಿಕ ಜವಾಬ್ದಾರಿ ಮತ್ತು ಜನಸಹಭಾಗಿತ್ವದ ಪ್ರತಿಬಿಂಬವಾಗಿದೆ. ಯಾವುದೇ ಗ್ರಾಮದಲ್ಲಿ ತ್ಯಾಜ್ಯ ನಿರ್ವಹಣೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರು, ಮಹಿಳಾ ಸಂಘಗಳು, ಯುವಕ ಸಂಘಗಳು, ಶಾಲೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ.
ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಬೆಳೆಸುವುದು ಅತ್ಯಂತ ಮುಖ್ಯವಾಗಿದೆ. ಶಾಲಾ ಹಂತದಲ್ಲಿಯೇ ತ್ಯಾಜ್ಯ ವಿಂಗಡಣೆ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಮೌಲ್ಯಗಳನ್ನು ಕಲಿಸಬೇಕಾಗಿದೆ. ಮಕ್ಕಳು ಕುಟುಂಬಗಳಲ್ಲಿ ಜಾಗೃತಿ ಮೂಡಿಸುವ ಬದಲಾವಣೆಯ ಪ್ರತಿನಿಧಿಗಳಾಗಬಹುದು.
ಗ್ರಾಮ ಪಂಚಾಯಿತಿ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಪಾತ್ರವೂ ಇಲ್ಲಿ ಮಹತ್ವದ್ದಾಗಿದೆ. ಮೇಲ್ಮಟ್ಟದಲ್ಲಿ ಉತ್ತಮ ಉದ್ದೇಶದಿಂದ ರೂಪುಗೊಳ್ಳುವ ಯೋಜನೆಗಳು ಸ್ಥಳೀಯ ಹಂತಕ್ಕೆ ಬಂದಾಗ ಕೆಲವೊಮ್ಮೆ ತಮ್ಮ ಮೂಲ ಉದ್ದೇಶವನ್ನು ಕಳೆದುಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಯೋಜನೆಗಳು ಕೇವಲ ಪೋಸ್ಟರ್, ಬ್ಯಾನರ್ ಅಥವಾ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗುತ್ತವೆ. ಆದ್ದರಿಂದ ಯೋಜನೆಗಳ ಯಶಸ್ಸನ್ನು ನಿರಂತರವಾಗಿ ಪರಿಶೀಲಿಸುವ ವ್ಯವಸ್ಥೆ ಅಗತ್ಯವಾಗಿದೆ. ಗುರಿ ತಲುಪುವವರೆಗೆ ಜಾಗೃತಿ, ಅನುಸರಣೆ ಮತ್ತು ಮೌಲ್ಯಮಾಪನ ನಿರಂತರವಾಗಿರಬೇಕು.
ಕ್ಷೇತ್ರ ಅಧ್ಯಯನದ ಸಂದರ್ಭದಲ್ಲಿ ಮನಸ್ಸಿಗೆ ಹೆಚ್ಚು ನೋವುಂಟು ಮಾಡಿದ ಸಂಗತಿಗಳಲ್ಲಿ ಒಂದು ಎಂದರೆ ಗ್ರಾಮ ಸ್ವಚ್ಛತೆಗೆ ದುಡಿಯುವ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಸ್ವಚ್ಛತಾ ಸಿಬ್ಬಂದಿಯ ಪರಿಶ್ರಮಕ್ಕೆ ಸಮಾಜ ನೀಡುತ್ತಿರುವ ಮೌಲ್ಯ. ಜನರು ಒಂದು ಟೀ ಕುಡಿಯಲು ಐದು ರೂಪಾಯಿ ಖರ್ಚು ಮಾಡುತ್ತಾರೆ. ಭಿಕ್ಷೆ ಕೇಳುವವರಿಗೆ ಒಂದು ರೂಪಾಯಿ ನೀಡುತ್ತಾರೆ. ಆದರೆ ಪ್ರತಿದಿನ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸಿ ಗ್ರಾಮವನ್ನು ಸ್ವಚ್ಛವಾಗಿಡಲು ಶ್ರಮಿಸುವ ಸಿಬ್ಬಂದಿಗೆ ತಿಂಗಳಿಗೆ ಮೂವತ್ತು ರೂಪಾಯಿ ಶುಲ್ಕ ನೀಡಲು ಹಿಂಜರಿಯುತ್ತಾರೆ. “ನಾವು ಯಾಕೆ ಹಣ ಕೊಡಬೇಕು?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ವಾಸ್ತವವಾಗಿ ಆ ಸಣ್ಣ ಮೊತ್ತ ಕೇವಲ ಶುಲ್ಕವಲ್ಲ; ಅದು ಆರೋಗ್ಯಕರ ಪರಿಸರಕ್ಕೆ ನೀಡುವ ನಮ್ಮ ಸಹಭಾಗಿತ್ವವಾಗಿದೆ.
ಈ ಅಧ್ಯಯನದ ಆಧಾರದ ಮೇಲೆ ಕೆಲವು ಪ್ರಮುಖ ಶಿಫಾರಸುಗಳನ್ನು ನೀಡಬಹುದು. ಗ್ರಾಮೀಣ ಜನರಿಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಪರಿಸರ ಶಿಕ್ಷಣವನ್ನು ಬಲಪಡಿಸಬೇಕು. ಮಹಿಳಾ ಸ್ವಸಹಾಯ ಸಂಘಗಳನ್ನು ಇನ್ನಷ್ಟು ಸಕ್ರಿಯವಾಗಿ ತೊಡಗಿಸಬೇಕು, ಗ್ರಾಮ ಮಟ್ಟದಲ್ಲಿ ಕಾಂಪೋಸ್ಟ್ ಘಟಕಗಳು, ವರ್ಮಿ ಕಾಂಪೋಸ್ಟ್ ಘಟಕಗಳು ಮತ್ತು ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಬೇಕು. ಪಂಚಾಯಿತಿ ಸದಸ್ಯರು ಮತ್ತು ಸ್ವಚ್ಛತಾ ಸಿಬ್ಬಂದಿಗೆ ನಿಯಮಿತ ತರಬೇತಿ ನೀಡಬೇಕು. ಗ್ರಾಮ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣಾ ಸಮಿತಿಗಳನ್ನು ರಚಿಸಿ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕು. ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ನಡುವೆ ಸಮನ್ವಯವನ್ನು ಬಲಪಡಿಸಬೇಕು.
ಈ ಸಂಶೋಧನಾ ವಿಷಯವನ್ನು ಆಯ್ಕೆ ಮಾಡಲು ಪ್ರಮುಖ ಪ್ರೇರಣೆಯಾದವರು ನನ್ನ ಸಂಶೋಧನಾ ಮಾರ್ಗದರ್ಶಕರು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡ ಸವಾಲುಗಳು ಮತ್ತು ಉತ್ತಮ ಮಾದರಿಗಳು ಒಂದು ಪ್ರಮುಖ ಪಾಠವನ್ನು ಕಲಿಸಿವೆ. ಘನ ತ್ಯಾಜ್ಯ ನಿರ್ವಹಣೆ ಕೇವಲ ತಾಂತ್ರಿಕ ಸಮಸ್ಯೆಯಲ್ಲ; ಅದು ಸಾಮಾಜಿಕ ಮನೋಭಾವದ ಪ್ರಶ್ನೆಯಾಗಿದೆ. ಜನರಲ್ಲಿ ಜವಾಬ್ದಾರಿಯುತ ಮನೋಭಾವ ಬೆಳೆದಾಗ, ಸಮುದಾಯಗಳು ಒಗ್ಗೂಡಿದಾಗ ಮತ್ತು ಆಡಳಿತ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಶಾಶ್ವತ ಬದಲಾವಣೆ ಸಾಧ್ಯ.
ಕೊನೆಗೆ, ಗ್ರಾಮೀಣ ಘನ ತ್ಯಾಜ್ಯ ನಿರ್ವಹಣೆ ಕೇವಲ ಕಸ ವಿಲೇವಾರಿಯ ಕಾರ್ಯಕ್ರಮವಲ್ಲ; ಅದು ಆರೋಗ್ಯ, ಪರಿಸರ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಸರ್ಕಾರ, ಗ್ರಾಮ ಪಂಚಾಯಿತಿಗಳು, ಸ್ವಯಂಸೇವಾ ಸಂಸ್ಥೆಗಳು, ಮಹಿಳಾ ಸಂಘಗಳು, ಯುವಕರು, ಮಕ್ಕಳು ಮತ್ತು ಸಾರ್ವಜನಿಕರು ಎಲ್ಲರೂ ಒಂದೇ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಸ್ವಚ್ಛ, ಆರೋಗ್ಯಕರ ಮತ್ತು ಸುಸ್ಥಿರ ಗ್ರಾಮೀಣ ಕರ್ನಾಟಕ ನಿರ್ಮಾಣ ಸಾಧ್ಯವಾಗುತ್ತದೆ.
ಪ್ರತಿ ಗ್ರಾಮದಲ್ಲಿ ಒಂದು ಸ್ವಚ್ಛತಾ ಸಮಿತಿ, ಪ್ರತಿ ಶಾಲೆಯಲ್ಲಿ ಒಂದು ಪರಿಸರ ಕ್ಲಬ್, ಪ್ರತಿ ಕುಟುಂಬದಲ್ಲಿ ತ್ಯಾಜ್ಯ ವಿಂಗಡಣೆಯ ಅಭ್ಯಾಸ ಮತ್ತು ಪ್ರತಿ ನಾಗರಿಕನಲ್ಲಿ ಜವಾಬ್ದಾರಿಯುತ ಮನೋಭಾವ ಬೆಳೆದಾಗ ಮಾತ್ರ “ಸ್ವಚ್ಛ ಗ್ರಾಮ – ಸುಸ್ಥಿರ ಸಮಾಜ” ಎಂಬ ಕನಸು ನನಸಾಗುತ್ತದೆ.

ಲೇಖಕರು : ಡಾ. ಅಂಜಿನಪ್ಪ ಡಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!