ಸಿರುಗುಪ್ಪ – ನಗರದ ಚಾಗಿ ನರಸಮ್ಮ ನರಸಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಸಿ ನಾಟಿ ಮಾಡಿ ಮಾತನಾಡಿದ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಎಸ್. ವಸಂತ ಅವರು ಸಸಿನೆಟ್ಟು ಪೋಷಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಶಾಲೆಯ ಕಟ್ಟಡ ಎಷ್ಟೇ ದೊಡ್ಡದು ಕಟ್ಟಿಸಿದರು ಕೂಡ ಅದರ ಸೌಂದರ್ಯ ಹೆಚ್ಚಿಸುವುದು ಗಿಡಮರಗಳನ್ನು ಬೆಳೆಸುವುದರಿಂದ ಆದ್ದರಿಂದ ವಿದ್ಯಾರ್ಥಿ ಜೀವನದಿಂದಲೇ ಪರಿಸರದ ಬಗೆಗಿನ ಕಾಳಜಿಯನ್ನು ವಹಿಸಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡುತ್ತಾ ಬಂದಿದೆ ಅದರಲ್ಲೂ ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಡೆಸ್ಕ್ ಬೆಂಚ್ ಹೋದಗಣೆ, ಜ್ಞಾನದೀಪ ಶಿಕ್ಷಕರನ್ನು ನೀಡುವುದು, ಶಾಲಾ ಮಕ್ಕಳಿಗೆ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣಕ್ಕೆ ಸುಜ್ಞಾನ ನಿಧಿ ಶಿಷ್ಯವೇತನ ನೀಡುವುದು ಹಾಗೂ ಶಾಲಾ ಕಾಂಪೌಂಡ್ ಮತ್ತು ಕಟ್ಟಡಗಳಿಗೆ ಅನುದಾನಗಳನ್ನು ನೀಡುತ್ತಾ ಸರ್ಕಾರಿ ಶಾಲೆಯ ಉಳಿವಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಐ.ವೆಂಕಟಲಕ್ಷ್ಮೀಯವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಈ ದಿನ ನಮ್ಮ ಶಾಲೆಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ನಮ್ಮ ಶಾಲೆಯ ಮಕ್ಕಳಿಗೆ ಪರಿಸರದ ಬಗೆಗಿನ ಜಾಗೃತಿಯನ್ನು ಮೂಡಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕರಾದ ಎಮ್. ಆಂಜನೇಯ, ಕೃಷಿ ಮೇಲ್ವಿಚಾರಕ ಎಸ್. ವೀರೇಶ , ಸೇವಾಪ್ರತಿನಿಧಿ ಅಂಬಿಕಾ, ಶಿಕ್ಷಕ ವೃಂದದವರು, ವಿದ್ಯಾರ್ಥಿ-ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















