ಬೈಲಹೊಂಗಲ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ‘ಹವಾಮಾನ ಕ್ರಮಕ್ಕಾಗಿ ಜಾಗತಿಕ ಕರೆ ಎಂಬ ಒಂದು ವಾರದ (ಜೂನ್ 5 ರಿಂದ 12) ಕೇಂದ್ರೀಕೃತ ಅಭಿಯಾನದ ಭಾಗವಾಗಿ, ಸ್ವಚ್ಛ ಭಾರತ ಮಿಷನ್ 2.0 ಯೋಜನೆಯ ಸಾಮರ್ಥ್ಯಾಭಿವೃದ್ಧಿ ಘಟಕದಡಿ ಬೈಲಹೊಂಗಲ ನಗರಸಭೆ ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗವರ್ನಮೆಂಟ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಇಂದು ನಗರಸಭೆಯ ಅಧಿಕಾರಿ, ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಮತ್ತು ಒಳಚರಂಡಿ ಸ್ವಚ್ಛತಾ ಕಾರ್ಮಿಕರಿಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ಮತ್ತು ವೇಸ್ಟ್ ಟು ಆರ್ಟ ಸ್ಪರ್ದೇಯ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಶಾಸಕರಾದ ಸನ್ಮಾನ್ಯ ಶ್ರೀ ಮಹಾಂತೇಶ ಎಸ್. ಕೌಜಲಗಿ ರವರು ಸ್ವಚ್ಛ ಭಾರತ ಮಿಷನ್ 2.0 ಯೋಜನೆಯ ಐ.ಇ.ಸಿ. ಘಟಕದಡಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ ವೇಸ್ಟ್ ಟು ಆರ್ಟ್ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು “ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ‘ಹವಾಮಾನ ಕ್ರಮಕ್ಕಾಗಿ ಜಾಗತಿಕ ಕರೆ ‘ ಅಭಿಯಾನವು ಕೇವಲ ಘೋಷಣೆಯಾಗಬಾರದು, ಅದು ನಮ್ಮೆಲ್ಲರ ದೈನಂದಿನ ಅಭ್ಯಾಸವಾಗಬೇಕು,” ಎಂದು ತಿಳಿಸಿದರು. ಶ್ರೀಮತಿ ಭಾಗ್ಯಶ್ರೀ ಹುಗ್ಗಿ ಮಾತನಾಡಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ನೂತನ ನಿಯಮಾವಳಿಗಳನ್ನು ಬೈಲಹೊಂಗಲ ನಗರದಲ್ಲಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ನಮ್ಮ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ತರಬೇತಿಯ ಪಡೆದುಕೊಂಡು ಕೆಲಸದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.
ತರಬೇತುದಾರರು ಹೊಸ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026 ರ ರೀತ್ಯಾ ಸಾರ್ವಜನಿಕರು ಹಾಗೂ ಕಸ ಸಂಗ್ರಹಕರು ಕಡ್ಡಾಯವಾಗಿ 4 ವಿಧದ ತ್ಯಾಜ್ಯ ವಿಂಗಡಣೆಯನ್ನು ಮಾಡಬೇಕಾಗಿದ್ದು, ಇದರ ವೈಜ್ಞಾನಿಕ ಪ್ರಕ್ರಿಯೆ ಮತ್ತು ನಗರದಲ್ಲಿ ಇದರ ಪರಿಣಾಮಕಾರಿ ಅನುಷ್ಠಾನದ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು. ಕಸವನ್ನು ಮೂಲದಲ್ಲೇ ಪ್ರತ್ಯೇಕಿಸುವುದರಿಂದ ಹವಾಮಾನ ಬದಲಾವಣೆಯ ಮೇಲಾಗುವ ಧನಾತ್ಮಕ ಪರಿಣಾಮಗಳನ್ನು ವಿವರಿಸಲಾಯಿತು.
ದಿನನಿತ್ಯದ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರು ಮತ್ತು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಒಳಚರಂಡಿ ಸ್ವಚ್ಛತಾ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಕೆಲಸದ ಅವಧಿಯಲ್ಲಿ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸುವ ಕುರಿತು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.
ಕಛೇರಿ ವ್ಯವಸ್ಥಾಪಕ ಶ್ರೀ ಎಮ್. ಆಯ್. ಕುಟ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಕಮ್ಯುನಿಟಿ ಅಪೇರ್ಸ್ ಆಫೀಸರ್ ಶ್ರೀ ಆರ್. ಎಸ್. ಹಿಟ್ಟಣಗಿ, ಕಿರಿಯ ಅಭಿಯಂತರ ಶ್ರೀ ಜಿ. ಜಿ. ಮಹಾಳಂಕ, ಶ್ರೀ ಬಿ. ಆಯ್. ಗುಡಿಮನಿ, ಶ್ರೀ ಎಂ. ಎಂ. ಧಾರವಾಡಕರ, ಶ್ರೀ ಎ. ವಾಯ್. ಹೆಗಡೆ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗವರ್ನಮೆಂಟ್ ಸಂಸ್ಥೆಯ ಅಧಿಕಾರಿ ಸಿಬ್ಬಂದಿಗಳು, ಹಾಗೂ ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು ಉಪಸ್ಥಿತರಿದ್ದರು.
ವರದಿ ಮಂಜು ಎಂ.ಚಿಕ್ಕಣ್ಣವರ




















