ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್. ಶೀರನಹಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯು ಗ್ರಾಮೀಣ ಪ್ರದೇಶದ ಬಡ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಜೊತೆಗೆ, ಪರಿಸರ ಸಂರಕ್ಷಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ. ನರೇಗಾ ಕೂಲಿ ಕೆಲಸದ ಸ್ಥಳಗಳಲ್ಲಿ ‘ವಿಶ್ವ ಪರಿಸರ ದಿನ’ವನ್ನು ಆಚರಿಸಿದರು, ಕಾರ್ಮಿಕರಲ್ಲಿ ಪರಿಸರದ ಬಗೆಗೆ ಜಾಗೃತಿ ಮೂಡಿಸಲು ಮತ್ತು ನಮ್ಮ ಸುತ್ತಲಿನ ಪ್ರಕೃತಿಯನ್ನು ರಕ್ಷಿಸಲು ಅತ್ಯುತ್ತಮ ಮಾರ್ಗವಾಗಿದೆ.
ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.
ನರೇಗಾ ಯೋಜನೆಯಡಿ ಕೈಗೊಳ್ಳಲಾಗುವ ಬಹುತೇಕ ಕಾಮಗಾರಿಗಳು ಪರಿಸರಕ್ಕೆ ಸಂಬಂಧಿಸಿರುತ್ತವೆ. ಮರಗಳನ್ನು ನೆಡುವುದು, ಕೆರೆ-ಕಟ್ಟೆಗಳನ್ನು ನಿರ್ಮಿಸಿ ನೀರು ಸಂರಕ್ಷಿಸುವುದು, ತಡೆಗೋಡೆ ನಿರ್ಮಾಣ ಮತ್ತು ಮಣ್ಣಿನ ಸವಕಳಿಯನ್ನು ತಡೆಯುವ ಕೆಲಸಗಳನ್ನು ಕೂಲಿಕಾರರು ಮಾಡುತ್ತಾರೆ. ಇದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದು ಮೇಟಿ ದಕ್ಷಿಣಮೂರ್ತಿ ಕಿತ್ತೂರು ತಿಳಿಸಿದರು.
ಪರಿಸರ ದಿನಾಚರಣೆಯ ಅಂಗವಾಗಿ ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ಮತ್ತು ಕೂಲಿಕಾರರು ಒಟ್ಟಾಗಿ ಸಸಿಗಳನ್ನು ನೆಟ್ಟರು. ಅಲ್ಲದೆ, ಪ್ಲಾಸ್ಟಿಕ್ ಬಳಕೆ ನಿಷೇಧ, ನೀರು ಮಿತಬಳಕೆ, ಮರಗಳನ್ನು ಕಡಿಯುವುದರಿಂದಾಗುವ ದುಷ್ಪರಿಣಾಮಗಳು ಮತ್ತು ಸ್ವಚ್ಛತೆಯ ಮಹತ್ವದ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡಲಾಗುತ್ತದೆ.
ನರೇಗಾ ಕೂಲಿ ಕಾರ್ಮಿಕರು ಕೇವಲ ತಮ್ಮ ಜೀವನ ನಿರ್ವಹಣೆಗಾಗಿ ದುಡಿಯುತ್ತಿಲ್ಲ, ಬದಲಿಗೆ ಪ್ರಕೃತಿಯ ಒಳಿತಿಗಾಗಿಯೂ ಶ್ರಮಿಸುತ್ತಿದ್ದಾರೆ. ಪರಿಸರ ದಿನಾಚರಣೆಯು ಇಂತಹ ಕಾರ್ಮಿಕರ ಶ್ರಮವನ್ನು ಗುರುತಿಸಲು ಮತ್ತು ಪ್ರಕೃತಿಯನ್ನು ರಕ್ಷಿಸುವ ನಮ್ಮೆಲ್ಲರ ಜವಾಬ್ದಾರಿಯನ್ನು ನೆನಪಿಸಲು ಒಂದು ಉತ್ತಮ ಅವಕಾಶವಾಗಿದೆ.
ಈ ಸಂಧರ್ಭದಲ್ಲಿ ಚೌಡಪ್ಪ, ಕರಿಯಪ್ಪ , ಮಂಜಪ್ಪ, ಕೆಂಚಪ್ಪ, ಓಬಪ್ಪ, ನಾಗಮ್ಮ, ರೇಣುಕಮ್ಮ ಇನ್ನೂ ಅನೇಕ ಕೂಲಿ ಕಾರ್ಮಿಕರು ಇದ್ದರು.
- ಕರುನಾಡ ಕಂದ ಸುದ್ದಿ




















