ಮಾನವ ಕುಲ ಒಂದೇ ಎಂದವನು,
ಜಾತಿಯ ಗೋಡೆ ಒಡೆದವನು,
ಕಾಯಕವೇ ಕೈಲಾಸ ಎಂದವನು,
ಅವನೇ ನಮ್ಮ ಬಸವಣ್ಣ.
ಕಲ್ಲಲ್ಲಿ ದೇವರಿಲ್ಲ ಎಂದವನು,
ಮನದೊಳಗೆ ಲಿಂಗವಿಟ್ಟವನು,
ಇಷ್ಟಲಿಂಗ ಕೈಯಲ್ಲಿ ಕೊಟ್ಟವನು,
ಆಂತರ್ಯವೇ ದೇಗುಲ ಮಾಡಿದವನು.
ಅನುಭವ ಮಂಟಪ ಕಟ್ಟಿದವನು,
ಪ್ರಪಂಚದ ಮೊದಲ ಸಂಸತ್ತು ಮಾಡಿದವನು,
ಅಕ್ಕನಿಂದ ಹರಳಯ್ಯನವರೆಗೆ,
ಎಲ್ಲರಿಗೂ ಒಂದೇ ಆಸನ ಕೊಟ್ಟವನು.
ಹೆಣ್ಣು ಗಂಡು ಸಮಾನ ಎಂದವನು,
ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿದವನು,
ಅಕ್ಕಮಹಾದೇವಿಗೆ ವಚನದ ಹಕ್ಕು ಕೊಟ್ಟವನು,
ಸ್ತ್ರೀಗೆ ಗೌರವದ ಕಿರೀಟ ತೊಡಿಸಿದವನು.
ದುಡಿದು ತಿನ್ನು ಎಂದವನು,
ದುಡಿದುದರಲ್ಲಿ ದಾಸೋಹ ಮಾಡು ಎಂದವನು,
ಕೊಡುವ ಕೈ ಮೇಲಾಗಲಿ ಎಂದವನು,
ಸ್ವಾವಲಂಬನೆಯ ಪಾಠ ಕಲಿಸಿದವನು.
ಸಂಸ್ಕೃತದ ಕೋಟೆ ಒಡೆದವನು,
ಕನ್ನಡದಲ್ಲಿ ವಚನ ಹಾಡಿದವನು,
ಅರಿವೇ ಗುರು ಎಂದವನು,
ಬಡವರ ಬಾಯಲ್ಲಿ ಬಸವನಾಮ ತುಂಬಿದವನು.
ಮೂಢನಂಬಿಕೆ ಪ್ರಶ್ನಿಸಿದವನು,
ತರ್ಕಕ್ಕೆ ನಿಲ್ಲದ್ದನ್ನು ತಿರಸ್ಕರಿಸಿದವನು,
ವೈಜ್ಞಾನಿಕ ಆಧ್ಯಾತ್ಮ ಕೊಟ್ಟವನು,
ಬುದ್ಧಿಗೆ ಬೆಳಕಾದವನು.
ಮಡಿವಾಳನ ಕೈ ಹಿಡಿದವನು,
ಮೋಳಿಗೆ ಮಾರನ ಜೊತೆ ಕುಳಿತವನು,
ಜಾತಿಯ ಕಂದಕ ತುಂಬಿದವನು,
ಮಾನವೀಯತೆಯ ಸೇತುವೆ ಕಟ್ಟಿದವನು.
ಇಂದು ನಮಗೆ ಬೇಕು ಅವನ ತತ್ವ,
ದ್ವೇಷದ ನಡುವೆ ಪ್ರೀತಿಯ ಬೀಜ,
ಕೋಮಿನ ಕಿಚ್ಚಿನ ನಡುವೆ ಶಾಂತಿಯ ನೀರು,
ಸ್ವಾರ್ಥದ ನಡುವೆ ದಾಸೋಹದ ಬೆವರು.
ಪ್ಲಾಸ್ಟಿಕ್ ಯುಗದಲ್ಲಿ ಸರಳತೆ ಬೇಕು,
ಮಾಲಿನ್ಯದ ನಡುವೆ ಪರಿಸರ ಪ್ರೇಮ ಬೇಕು,
ರಾಜಕೀಯದ ನಡುವೆ ಪ್ರಜಾಪ್ರಭುತ್ವ ಬೇಕು,
ಬಸವ ತತ್ವದ ಬದುಕು ಬೇಕು.
“ಎದ್ದೇಳು ಮನುಷ್ಯನಾಗು” ಎಂದವನು,
“ನಡೆ ಮುಡಿ ಸತ್ಯವೇ ನುಡಿ” ಎಂದವನು,
ಅವನ ಮಾತು ಇಂದಿಗೂ ಜೀವಂತ,
ಅವನ ದಾರಿ ಇಂದಿಗೂ ಸ್ಪಷ್ಟ.
ಲಿಂಗಾಯತ ಧರ್ಮ ಬೇಕು ಎಂದರೆ,
ಅದು ಕೇವಲ ಒಂದು ಹೆಸರಿಗಲ್ಲ,
ಅದು ಬದುಕುವ ಪದ್ಧತಿಗಾಗಿ,
ಅದು ಮನುಷ್ಯನಾಗುವ ಶಾಲೆಗಾಗಿ.
ಜೈನ ಬೌದ್ಧರಂತೆ ಸ್ವತಂತ್ರ ಮಾರ್ಗ,
ವಚನವೇ ವೇದ, ಶರಣರೇ ಗುರು,
ಇಷ್ಟಲಿಂಗವೇ ಚಿಹ್ನೆ, ಕಾಯಕವೇ ಪೂಜೆ,
ಇದೇ ನಮ್ಮ ಗುರುತು, ಇದೇ ನಮ್ಮ ಬದುಕು.
ಬನ್ನಿ ಕೈಜೋಡಿಸೋಣ,
ಬಸವಣ್ಣನ ಕನಸು ನನಸು ಮಾಡೋಣ,
ಅನುಭವ ಮಂಟಪ ಮತ್ತೆ ತೆರೆಯೋಣ,
ವಿಶ್ವವೇ ಒಂದು ಕುಟುಂಬ ಎನ್ನುವ
ಬಸವ ತತ್ವದ ಬೆಳಕು ಹರಡೋಣ.
ರಚನೆ : ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು,
ಬೀದರ್ ಜಿಲ್ಲೆ, ಕರ್ನಾಟಕ ರಾಜ್ಯ.




















