ಬಳ್ಳಾರಿ / ಕಂಪ್ಲಿ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ರೈತರು ಸಂಕಷ್ಟದಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಉಂಟಾಗಿದ್ದು, ಕೂಡಲೇ ಹೊಸಪೇಟೆ ಜಿಲ್ಲೆ ಒಳಗೊಂಡಂತೆ ಅಖಂಡ ಬಳ್ಳಾರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಹಾರ ಕಲ್ಪಿಸಬೇಕೆಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಂಪ್ಲಿ ಮಂಡಲದ ಯುವ ಮೋರ್ಚ ಅಧ್ಯಕ್ಷ ಬಡಿಗೇರ್ ವಿರೇಶ ಒತ್ತಾಯಿಸಿದರು.
ಅವರು ಪಟ್ಟಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ಈ ಬಾರಿ ವಾಡಿಕೆಯಿಂದ ಮಳೆ ಸಂಪೂರ್ಣವಾಗಿ ಬಾರದೇ ಇರುವುದರಿಂದ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದರಿಂದ ಅನ್ನದಾತರ ಬದುಕು ಅತಂತ್ರದಲ್ಲಿ ಸಾಗುವಂತೆ ಮಾಡಿದೆ. ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರು ಸಂಗ್ರಹದ ಪ್ರಮಾಣ ಕೆಳಮಟ್ಟದಲ್ಲಿರುವುದರಿಂದ ಮುಂಗಾರು ಬೆಳೆಗೆ ನೀರಿಲ್ಲದಿರವುದು ರೈತರಲ್ಲಿ ಆತಂಕ ದೃಷ್ಠಿಸಿದೆ. ಕಂಪ್ಲಿ , ಕುರುಗೋಡು ತಾಲೂಕು ಸೇರಿದಂತೆ ಹೋಸಪೇಟೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಮಳೆ, ಬೆಳೆ ಇಲ್ಲದೇ ಅನ್ನದಾತರು ಕಂಗಾಲಾಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಈ ಎರಡು ಜಿಲ್ಲೆಗಳನ್ನು ಬರ ಪೀಡಿತ ಜಿಲ್ಲೆಗಳೆಂದು ಘೋಷಿಸಿ, ಬರ ಪರಿಹಾರ ನೀಡುವ ಮೂಲಕ ರೈತರ ಬದುಕಿಗೆ ಆಸರೆಯಾಗಬೇಕು ಎಂದರು.
ವರದಿ : ಜಿಲಾನಸಾಬ್ ಬಡಿಗೇರ್




















