(ಶ್ರೀ ಆರ್ ಜಿ ಸನ್ನಿ ಗುರುಗಳು ನಾವು ಕಂಡಂತೆ )
ಮೂರು ಕಣ್ಣೀಶ್ವರನ ತೋರಿ ಕೊಡಬಲ್ಲ ಗುರು
ಬೇರರಿವುದೊಂದು ತೆರನಿಲ್ಲ ಗುರುಕರುಣ
ತೋರುವದು ಹರನ ಸರ್ವಜ್ಞ ||
ಮೂರು ಕಣ್ಣಿನ ಈಶ್ವರನನ್ನು ತೋರಿಸಿಕೊಡುವುದೇ ಗುರು. ಗುರುವನ್ನು ಅರಿಯುವುದನ್ನು ಬಿಟ್ಟು ಬೇರೆ ಏನೂ ತಿಳಿಯಲೇ ಬೇಕಾಗಿಲ್ಲ. ಗುರುವಿನ ಕರುಣೆ ನಮಗೆ ಹರನನ್ನು ತೋರಿಸುವುದು.
ನಮ್ಮ ಕಣ್ಣಿಗೆ ಕಾಣುವ ಈ ಲೌಕಿಕ ಪ್ರಪಂಚ ಎರಡೇ ಕಣ್ಣುಗಳ ಆಟ. ಆದರೆ, ಅಂತರಂಗದಲ್ಲಿ ಬೆಳಗುವ ಆ ಮೂರು ಕಣ್ಣಿನ ಈಶ್ವರನನ್ನು ಕಾಣಲು ನಮಗೆ ಜ್ಞಾನ ಬೇಕು. ಆ ಜ್ಞಾನದ ಕಣ್ಣನ್ನು ತೆರೆಯುವ ಶಕ್ತಿ ಇರುವುದು ಕೇವಲ ಗುರುವಿಗೆ ಮಾತ್ರ. ನಮ್ಮ ಒಳಗಿನ ಅಹಂಕಾರದ ಕತ್ತಲೆಯನ್ನು ಸರಿಸಿ, ವಿಭೂತಿ ಪುರುಷನಾದ ಹರನನ್ನು ನಮಗೆ ಪರಿಚಯಿಸುವುದೇ ಗುರುವಿನ ಪರಮ ಕರ್ತವ್ಯ. ಜೀವನದಲ್ಲಿ ನಾವು ಏನೇನನ್ನೋ ತಿಳಿಯಲು ಹಂಬಲಿಸುತ್ತೇವೆ. ಆದರೆ, ಜ್ಞಾನದ ಮೂಲವಾದ ಗುರುವನ್ನೇ ಅರಿತುಕೊಂಡರೆ, ಬೇರೆ ಏನನ್ನೂ ತಿಳಿಯುವ ಅಗತ್ಯವಿರುವುದಿಲ್ಲ. ಗುರುವಿನ ಚರಣಗಳಲ್ಲಿ ಶರಣಾಗುವುದು ಎಂದರೆ ಸಾಕ್ಷಾತ್ ಈಶ್ವರನಿಗೆ ಶರಣಾದಂತೆ. ಗುರುವಿನ ಕೃಪೆಯೊಂದಿದ್ದರೆ, ಕೈಲಾಸ ನಮ್ಮ ಹೃದಯದಲ್ಲೇ ಕಾಣಸಿಗುತ್ತದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿ ಎಂಬ ಪುಟ್ಟ ಗ್ರಾಮದಲ್ಲಿ 1966 ಜೂನ್ 20 ರಂದು ಒಂದು ಜ್ಞಾನದ ದೀಪ ಬೆಳಗಿತು. ಶ್ರೀಮತಿ ಗೌರವ್ವ ಹಾಗೂ ಶ್ರೀ ಗದಿಗೆಪ್ಪ ದಂಪತಿಗಳ ಜೇಷ್ಠ ಪುತ್ರನಾಗಿ ಜನಿಸಿದ ಆರ್. ಜಿ. ಸನ್ನಿ ಅವರು ಇಂದು ಸಮಾಜಕ್ಕೆ ಕೇವಲ ಒಬ್ಬ ವ್ಯಕ್ತಿಯಾಗಿ ಉಳಿಯದೆ, ಸಾವಿರಾರು ಮನಸ್ಸುಗಳಿಗೆ ದಾರಿದೀಪವಾಗಿದ್ದಾರೆ. ಜಾನಮಟ್ಟಿಯಂತಹ ಗ್ರಾಮದಿಂದ ಬಂದು ಇಂದು ಸಾವಿರಾರು ಜನರ ಪ್ರೀತಿ-ಗೌರವಕ್ಕೆ ಪಾತ್ರರಾಗಿರುವ ಆರ್. ಜಿ. ಸನ್ನಿ ಗುರುಗಳ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಅವರ ಜನ್ಮದಿನವು ಕೇವಲ ಒಂದು ದಿನಾಂಕವಲ್ಲ, ಅದು ಸಮಾಜಕ್ಕೆ ಒಬ್ಬ ನಿಸ್ವಾರ್ಥ ಸೇವಕನ ಕೊಡುಗೆಯ ನೆನಪು. ಅವರ ಈ ಜನಸೇವೆಯ ಕಾರ್ಯವು ನಿರಂತರವಾಗಿ ಸಾಗಲಿ ಎಂಬುದು ನಮ್ಮೆಲ್ಲರ ಆಶಯ.
ಮನಸ್ಸು ಶುದ್ದಿ ಇಲ್ಲದೇ ಮಂತ್ರಾಲಯಕ್ಕೆ, ಧರ್ಮದ ನಡೆ ಇಲ್ಲದೆ ಧರ್ಮಸ್ಥಳಕ್ಕೆ, ಶಾಂತಿ ಭಗ್ನ ಮಾಡಿ ಶಬರಿಮಲೆಗೆ, ತಿರುಚಿ ಮಾತನಾಡಿ ತಿರುಪತಿಗೆ ಹೋದರೆ ದೇವರು ಮೆಚ್ಚುವನೇ…ನಮ್ಮ ಬದುಕಿನ ಪುಟಗಳಲ್ಲಿ ಅಕ್ಷರ ಜ್ಞಾನದ ಮೊದಲ ದೀಪವನ್ನು ಹಚ್ಚಿದವರು ನಮ್ಮ ಗುರುಗಳು. ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ, ತಮ್ಮ ಇಡೀ ಜೀವನವನ್ನು ಜ್ಞಾನದಾನಕ್ಕಾಗಿ ಮೀಸಲಿಟ್ಟ ಗುರುವಿನ ಬಗ್ಗೆ ನಾವು ನಾಲ್ಕು ಕೃತಜ್ಞತೆಯ ಮಾತುಗಳನ್ನು ಬರೆಯದಿದ್ದರೆ, ನಮ್ಮ ಓದು ಮತ್ತು ಬರಹಕ್ಕೆ ಪೂರ್ಣ ಅರ್ಥ ಸಿಗುವುದಿಲ್ಲ. ಯಾರು ತನ್ನ ಗುರುವಿನ ಶ್ರಮವನ್ನು ಗುರುತಿಸಿ ಗೌರವಿಸುತ್ತಾರೋ, ಅವರ ಬರವಣಿಗೆಗೆ ಒಂದು ದೈವಿಕ ಕಳೆ ಇರುತ್ತದೆ. ದೇವರನ್ನು ಕಾಣದ ನಮಗೆ, ಕಣ್ಣ ಮುಂದೆ ಕಾಣುವ ದೇವರೇ ಗುರುಗಳು. ಅಂತಹ ಗುರುವಿನ ಬಗ್ಗೆ ಗೌರವದ ಮಾತುಗಳನ್ನು ಬರೆದಾಗ ಮಾತ್ರ ನಮ್ಮ ಲೇಖನವೂ ಸಾರ್ಥಕ, ನಮ್ಮ ಬದುಕೂ ಸಾರ್ಥಕ.
ಯಾರು ತಮಗೆ ಜ್ಞಾನ ನೀಡಿದ ಗುರುಗಳನ್ನು ಮತ್ತು ಅವರು ಕಲಿಸಿದ ಅಕ್ಷರ ಜ್ಞಾನವನ್ನು ಮರೆಯುತ್ತಾರೋ, ಅವರ ಬದುಕು ನೀರಿಲ್ಲದ ಕೆರೆಯಂತೆ ನಿರರ್ಥಕ. ನಾವು ಇಂದು ಸಮಾಜದಲ್ಲಿ ಗೌರವದಿಂದ ತಲೆ ಎತ್ತಿ ನಿಂತಿದ್ದೇವೆ ಎಂದರೆ, ಅದಕ್ಕೆ ಅಂದು ಗುರುಗಳು ತಿದ್ದಿದ ಅಕ್ಷರಗಳೇ ಕಾರಣ. ನಮ್ಮ ಜೀವನದ ಉನ್ನತಿಗೆ ಕಾರಣರಾದ ಗುರುಗಳನ್ನು ಸ್ಮರಿಸುವುದು ನಮ್ಮ ಧರ್ಮ. ಅಕ್ಷರ ಕಲಿಸಿದ ಗುರುವನ್ನು ಮರೆಯುವುದು ಎಂದರೆ ನಮ್ಮ ಅಸ್ತಿತ್ವವನ್ನೇ ಮರೆತಂತೆ. ಬನ್ನಿ ನಮಗೆ ಜ್ಞಾನದ ಬೆಳಕು ನೀಡಿದ ಪ್ರತಿಯೊಬ್ಬ ಗುರುವಿಗೂ ಮನದಾಳದ ನಮನಗಳನ್ನು ಸಲ್ಲಿಸೋಣ.ಅಂತಹ ಗುರುಗಳಲ್ಲಿ ಒಬ್ಬರಾದ ಶ್ರೀ ಆರ್ ಜಿ ಸನ್ನಿ ಗುರುಗಳು ಕೂಡಾ ಒಬ್ಬರು.
ನಮ್ಮನ್ನು ನಾವು ಸರಿಪಡಿಸಿಕೊಂಡರೆ ಇಡೀ ಜಗತ್ತನ್ನು ಸರಿಪಡಿಸಿದಂತೆ, ನಮ್ಮಲ್ಲಿ ನಾವು ಪರಿವರ್ತನೆ ತಂದುಕೊಂಡರೆ ಜಗತ್ತಿಗೆ ಬೆಳಕು ನೀಡಿದಂತೆ ಎಂಬ ಶ್ರೀ ರಮಣ ಮಹರ್ಷಿಗಳ ವಾಕ್ಯವು ಕೇವಲ ಮಾತುಗಳಲ್ಲ, ಅದು ಜೀವನ ವಿಧಾನ. ಈ ಮಹಾನ್ ತತ್ತ್ವವನ್ನು ಅಕ್ಷರಶಃ ಪಾಲಿಸುತ್ತಾ, ತಮ್ಮ ಅಂತರಂಗದ ಶೋಧದ ಮೂಲಕ ಸಮಾಜಕ್ಕೆ ದಾರಿದೀಪವಾದವರು ಶ್ರೀ ಆರ್ ಜಿ ಸನ್ನಿ ಗುರುಗಳು. ಮಹಾನ್ ತತ್ವಜ್ಞಾನಿಗಳಂತೆ ಇವರ ಬದುಕು ಕೂಡ ಅತ್ಯಂತ ಸರಳವಾಗಿತ್ತು. ಆಡಂಬರವಿಲ್ಲದ ಜೀವನದ ಮೂಲಕವೇ ಅವರು ಜನಸಾಮಾನ್ಯರಿಗೆ ಹತ್ತಿರವಾದರು. ಇವರು ನಮಗೆ ಕಲಿಸುವ ಪಾಠ ಒಂದೇ ಅದುವೇ ಜಗತ್ತು ಬದಲಾಗಬೇಕೆಂದು ಬಯಸುವವರು ಮೊದಲು ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂಬುದು . ಅದೇ ನಿಜವಾದ ಆಧ್ಯಾತ್ಮಿಕ ಪಯಣ.
ಸನ್ನಿ ಗುರುಗಳ ಜೀವನ ಪ್ರತಿಯೊಬ್ಬರಿಗೂ ಒಂದು ಸ್ಪೂರ್ತಿಯ ಸೆಲೆ. ಅವರು ಕೇವಲ ಉಪದೇಶಗಳನ್ನಷ್ಟೇ ನೀಡದೆ, ಸದಾ ಆತ್ಮಾವಲೋಕನ ಮತ್ತು ಮೌನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅಂತರಂಗದ ಪ್ರಕಾಶವನ್ನು ಕಂಡುಕೊಂಡವರು. ನಮ್ಮಲ್ಲಿ ನಾವು ಪರಿವರ್ತನೆ ತಂದುಕೊಂಡರೆ ಮಾತ್ರ ಸಮಾಜಕ್ಕೆ ಅಥವಾ ಜಗತ್ತಿಗೆ ಬೆಳಕು ನೀಡಲು ಸಾಧ್ಯ ಎಂಬ ಮಹರ್ಷಿಗಳ ಮಾತಿಗೆ ಇವರು ಜೀವಂತ ಉದಾಹರಣೆ. ಅವರ ಪ್ರಶಾಂತ ಸ್ವಭಾವ ಮತ್ತು ಸ್ಥಿತಪ್ರಜ್ಞತೆ ಅನೇಕರನ್ನು ಸೆಳೆದಿದೆ.
ಶ್ರೀ ಆರ್.ಜಿ. ಸನ್ನಿ ಗುರುಗಳು ತಮ್ಮ ವೃತ್ತಿಜೀವನದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಪರ್ಯಾಯ ಹೆಸರಾದವರು. ವೃತ್ತಿಯನ್ನು ಕೇವಲ ಜೀವನೋಪಾಯದ ಮಾರ್ಗವನ್ನಾಗಿ ನೋಡದೆ, ಅದನ್ನೊಂದು ಪವಿತ್ರ ಕಾಯಕ ಎಂದು ಭಾವಿಸಿದವರು ಸನ್ನಿ ಗುರುಗಳು. ಶಿಸ್ತು ಮತ್ತು ಸಮಯಪ್ರಜ್ಞೆ ಇವರ ದಿನಚರಿಯ ಭಾಗವಾಗಿತ್ತು. ಕೆಲಸದ ಮೇಲಿನ ಇವರ ಅಪಾರ ಶ್ರದ್ಧೆಯು ಕಿರಿಯರಿಗೆ ಸದಾ ಪ್ರೇರಣಾದಾಯಕ. ಎಂತಹ ಕಠಿಣ ಸಂದರ್ಭಗಳಲ್ಲೂ ತಮ್ಮ ಪ್ರಾಮಾಣಿಕತೆಯನ್ನು ಬಿಟ್ಟುಕೊಡದ ಇವರು, ವೃತ್ತಿಯೇ ಧರ್ಮ ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ.
ಅವರ ಸರಳತೆ ಮತ್ತು ಕರ್ತವ್ಯನಿಷ್ಠೆ ಎಲ್ಲರ ಗೌರವಕ್ಕೆ ಪಾತ್ರವಾಗಿದೆ. ಶಿಕ್ಷಣ,ಸಮಾಜ ಸೇವೆಯ ಯಾವುದೇ ಕ್ಷೇತ್ರವಿರಲಿ, ಅಲ್ಲಿ ಅವರು ಹಾಕಿಕೊಟ್ಟ ಅಡಿಪಾಯ ಭದ್ರವಾದುದು. ಸ್ವಾರ್ಥವಿಲ್ಲದ ಪರಿಶ್ರಮ ಮತ್ತು ಸಮಾಜದ ಹಿತವನ್ನು ಬಯಸುವ ಅವರ ಗುಣಗಳು ಇಂದಿನ ಯುವ ಪೀಳಿಗೆಗೆ ಮಾದರಿ. ಶ್ರೀ ಆರ್.ಜಿ. ಸನ್ನಿ ಗುರುಗಳ ಜೀವನ ಪಯಣವು, ಪ್ರಾಮಾಣಿಕ ಹಾದಿಯಲ್ಲಿ ಸಾಗುವ ವ್ಯಕ್ತಿಗೆ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂಬ ಸತ್ಯವನ್ನು ಸಾರುತ್ತದೆ. ಅವರ ಈ ಆದರ್ಶಮಯ ಬದುಕು ನಮಗೆಲ್ಲರಿಗೂ ಸದಾ ಸ್ಫೂರ್ತಿಯ ಸೆಲೆ.
ಯಶಸ್ಸಿನ ಹಾದಿಯಲ್ಲಿ ಶಿಸ್ತು ಎಂಬುದು ಕೇವಲ ಒಂದು ಗುಣವಲ್ಲ, ಅದು ಜೀವನದ ಅಡಿಪಾಯ. ಇದನ್ನು ಅಕ್ಷರಶಃ ಪಾಲಿಸುತ್ತಾ ಬಂದವರು ಆರ್ ಜಿ ಸನ್ನಿ ಗುರುಗಳು. ಇವರನ್ನು “ಶಿಸ್ತಿನ ಸಿಪಾಯಿ” ಎಂದು ಕರೆಯುವುದು ಕೇವಲ ಅವರ ಸಮಯ ಪ್ರಜ್ಞೆಗಾಗಿ ಮಾತ್ರವಲ್ಲ, ಬದಲಾಗಿ ಅವರ ಬದುಕಿನ ಪ್ರತಿ ಹೆಜ್ಜೆಯಲ್ಲೂ ಕಾಣುವ ಬದ್ಧತೆಗಾಗಿ. ಗುರುಗಳ ಪ್ರಕಾರ, ಸಮಯವನ್ನು ಗೌರವಿಸುವುದು ಎಂದರೆ ನಮ್ಮನ್ನು ನಾವೇ ಗೌರವಿಸಿಕೊಂಡಂತೆ. ಯಾವುದೇ ಕೆಲಸವಿರಲಿ, ನಿಗದಿತ ಸಮಯಕ್ಕಿಂತ ಮೊದಲೇ ಸಿದ್ಧರಿರುವುದು ಅವರ ವೈಶಿಷ್ಟ್ಯ. ಇಂದಿನ ವೇಗದ ಜಗತ್ತಿನಲ್ಲಿ ನಾಳೆ ಮಾಡೋಣ ಎಂಬ ಸೋಮಾರಿತನಕ್ಕೆ ಅವರ ಜೀವನದಲ್ಲಿ ಜಾಗವಿಲ್ಲ. ಪ್ರತಿ ಕ್ಷಣವನ್ನೂ ಮೌಲ್ಯಯುತವಾಗಿ ಬಳಸಿಕೊಳ್ಳುವ ಅವರ ಗುಣವು ಯುವ ಪೀಳಿಗೆಗೆ ದೊಡ್ಡ ಪಾಠವಾಗಿದೆ. ಒಬ್ಬ ಉತ್ತಮ ಗುರು ಕೇವಲ ದಾರಿ ತೋರಿಸುವುದಿಲ್ಲ, ಆ ದಾರಿಯಲ್ಲಿ ಹೇಗೆ ನಡೆಯಬೇಕು ಎಂಬುದನ್ನು ತಾನೇ ನಡೆದು ತೋರಿಸುತ್ತಾನೆ. ಆರ್ ಜಿ ಸನ್ನಿ ಅವರು ಅಕ್ಷರಶಃ ಅದನ್ನು ಪಾಲಿಸುತ್ತಿದ್ದಾರೆ. ಅವರ ಮಾತುಗಳಿಗಿಂತ ಅವರ ನಡೆ ನುಡಿಗಳೇ ಸಾವಿರಾರು ಜನರಿಗೆ ಸ್ಫೂರ್ತಿ ನೀಡುತ್ತಿವೆ.
ಆರ್ ಜಿ ಸನ್ನಿ ಗುರುಗಳು ಒಬ್ಬ ಮಾದರಿ ಶಿಕ್ಷಕರಾಗಿದ್ದು, ಬೋಧನೆಯನ್ನು ಕೇವಲ ಒಂದು ವೃತ್ತಿಯನ್ನಾಗಿ ನೋಡದೆ, ಅದನ್ನು ಸಮಾಜದ ಉನ್ನತಿಗೆ ಇರುವ ಒಂದು ಸೇವೆ ಎಂದು ಪರಿಗಣಿಸಿದವರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೋಧನೆಯು ಕೇವಲ ಒಂದು ಆದಾಯದ ಮೂಲವಾಗಿ ಬದಲಾಗುತ್ತಿರುವಾಗ,ಇವರು ತಮ್ಮ ಸಂಪೂರ್ಣ ಜೀವನವನ್ನು ವಿದ್ಯಾರ್ಥಿಗಳ ಏಳಿಗೆಗಾಗಿ ಮುಡಿಪಾಗಿಟ್ಟರು. ಹೆಚ್ಚಿನವರು ಶಿಕ್ಷಕ ವೃತ್ತಿಯನ್ನು ಎಂಟು ಗಂಟೆಯ ಕೆಲಸವೆಂದು ಭಾವಿಸುತ್ತಾರೆ. ಆದರೆ ಇವರ ಪಾಲಿಗೆ ಶಾಲೆ ಅಥವಾ ಕಾಲೇಜು ಕೇವಲ ಕಟ್ಟಡವಾಗಿರಲಿಲ್ಲ, ಅದು ಭವಿಷ್ಯದ ಪ್ರಜೆಗಳನ್ನು ರೂಪಿಸುವ ದೇಗುಲವಾಗಿತ್ತು. ಒಬ್ಬ ಸಾಮಾನ್ಯ ಶಿಕ್ಷಕ ಪಾಠ ಮಾಡುತ್ತಾನೆ, ಆದರೆ ಒಬ್ಬ ಶ್ರೇಷ್ಠ ಶಿಕ್ಷಕ ವಿದ್ಯಾರ್ಥಿಯ ಬದುಕನ್ನೇ ಬದಲಿಸುತ್ತಾನೆ ಎಂಬ ಮಾತಿಗೆ ಸನ್ನಿ ಗುರುಗಳು ಸಾಕ್ಷಿ. ತಮ್ಮ ಸರಳ ಜೀವನ ಮತ್ತು ಉನ್ನತ ಚಿಂತನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಇಂದಿಗೂ ದಾರಿದೀಪವಾಗಿದ್ದಾರೆ. ಆರ್ ಜಿ ಸನ್ನಿ ಗುರುಗಳಂತಹ ಮಹಾನ್ ಚೇತನಗಳು ನಮ್ಮ ಸಮಾಜಕ್ಕೆ ಅವಶ್ಯಕ. ಅವರ ಕಾರ್ಯವೈಖರಿ ಇಂದಿನ ಯುವ ಶಿಕ್ಷಕರಿಗೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಹೃದಯದಲ್ಲಿ ನೆಲೆಸಿರುವ ಇಂತಹ ಗುರುಗಳು ಎಂದಿಗೂ ಅಮರ.
ತಮ್ಮ ಕಂಚಿನ ಕಂಠ ಮತ್ತು ಜ್ಞಾನದ ಬಲದಿಂದ ಇವರು ರಾಜ್ಯದ ಮೂಲೆ ಮೂಲೆಗಳಲ್ಲಿ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಉಪನ್ಯಾಸ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಇವರು, ಪಾಂಡಿತ್ಯದ ಜೊತೆಗೆ ವಿನಯವನ್ನೂ ಉಳಿಸಿಕೊಂಡಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಅನೇಕ ವೇದಿಕೆಗಳಲ್ಲಿ ಇವರು ನೀಡಿದ ಉಪನ್ಯಾಸಗಳು ಕೇವಲ ಚಪ್ಪಾಳೆ ಗಿಟ್ಟಿಸದೆ, ಜನರ ಜೀವನದ ದೃಷ್ಟಿಕೋನವನ್ನೇ ಬದಲಿಸಿವೆ. ಶ್ರೀಯುತರು ಕೇವಲ ಒಬ್ಬ ಭಾಷಣಕಾರರಲ್ಲ, ಬದಲಾಗಿ ಬದಲಾವಣೆಯ ಹರಿಕಾರರು. ಅವರ ಮಾತುಗಳು ಬತ್ತದ ಸ್ಪೂರ್ತಿಯ ಸೆಲೆಯಾಗಿ, ಲಕ್ಷಾಂತರ ಜನರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಿದವರು.
ಗುರುವಿನ ಸೇವೆಗೆ ಸಂದ ಗೌರವವಾಗಿ ಇವರಿಗೆ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಹಾಗೂ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗಳು ಲಭಿಸಿವೆ. ಈ ಪ್ರಶಸ್ತಿಗಳು ಅವರ ವೈಯಕ್ತಿಕ ಸಾಧನೆಗೆ ಸಾಕ್ಷಿಯಾಗುವುದರ ಜೊತೆಗೆ, ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಸಮಾಜದಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಉದಾಹರಣೆಯಾಗಿವೆ. ಕೇವಲ ಸರ್ಕಾರಿ ಪ್ರಶಸ್ತಿಗಳಷ್ಟೇ ಅಲ್ಲದೆ, ಅವರ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿವೆ. ಪ್ರಶಸ್ತಿಗಳು ಸಾಧಕನನ್ನು ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಆರ್. ಜಿ. ಸನ್ನಿ ಅವರೇ ಪ್ರತ್ಯಕ್ಷ ಸಾಕ್ಷಿ. ತಮ್ಮ ವೃತ್ತಿಯನ್ನು ಪವಿತ್ರ ಸೇವೆ ಎಂದು ಭಾವಿಸಿದ ಇವರ ನಿಸ್ವಾರ್ಥ ಬದುಕು ಎಲ್ಲರಿಗೂ ಮಾದರಿ. ಶಿಕ್ಷಣ ಕ್ಷೇತ್ರದಲ್ಲಿ ಇವರ ಸೇವೆ ಇನ್ನೂ ಸುದೀರ್ಘವಾಗಿ ಮುಂದುವರಿಯಲಿ, ಇನ್ನಷ್ಟು ಉನ್ನತ ಗೌರವಗಳು ಇವರನ್ನು ಹರಸಿ ಬರಲಿ ಎಂಬುದು ನಮ್ಮೆಲ್ಲರ ಆಶಯ.
ಆರ್.ಜಿ. ಸನ್ನಿ ಅವರ ವ್ಯಕ್ತಿತ್ವವು ಕೇವಲ ಒಂದು ಹೆಸರಲ್ಲ, ಅದು ಸ್ನೇಹ ಮತ್ತು ಮಾನವೀಯತೆಯ ಅಪೂರ್ವ ಸಂಗಮ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು, ಎಲ್ಲರನ್ನೂ ಸಮಾನವಾಗಿ ಕಾಣುವ ಅವರ ಗುಣವೇ ಅವರನ್ನು ಒಬ್ಬ ಶ್ರೇಷ್ಠ ಸ್ನೇಹಜೀವಿಯನ್ನಾಗಿ ಮಾಡಿದೆ. ಅವರ ಜೀವನ ನಮಗೆ ಕಲಿಸುವ ಪಾಠವೆಂದರೆ ನಾವು ಗಳಿಸುವ ಆಸ್ತಿ-ಅಂತಸ್ತಿಗಿಂತ ನಾವು ಗಳಿಸುವ ಒಳ್ಳೆಯ ಜನರ ಪ್ರೀತಿ ಶಾಶ್ವತವಾದುದು ಎಂಬುದು . ಎಲ್ಲರೊಂದಿಗೆ ಬೆರೆತು, ನೋವಿಗೆ ಸ್ಪಂದಿಸಿ, ನಗುವನ್ನು ಹಂಚುವ ಅವರ ಈ ಸ್ನೇಹಮಯ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆಯಾಗಿದೆ.
ಸಹಸ್ರಾರು ವಿದ್ಯಾರ್ಥಿಗಳ ಬಳಗವನ್ನು ಹೊಂದಿರುವ ಇವರು ತಮ್ಮ ಅನೇಕ ವಿದ್ಯಾರ್ಥಿಗಳು ಸರಕಾರಿ ನೌಕರಿಗೆ ಸೇರಲು ಹಾಗೂ ವೈಯಕ್ತಿಕವಾಗಿ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾರ್ಥಿಗಳ ಬೆನ್ನೆಲುಬಾಗಿ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.ಸ್ವಂತ ಮಕ್ಕಳು ಜೇಬನ್ನು ಖಾಲಿ ಮಾಡುತ್ತಾರೆ ಆದರೆ ಶಾಲಾ ಮಕ್ಕಳು ಜೇಬನ್ನು ತುಂಬಿಸುತ್ತಾರೆ ಎಂಬ ಮಾತಿನ ಮೇಲೆ ತಮ್ಮ ಕರ್ತವ್ಯವನ್ನು ಮಾಡಿದವರು ಇವರು.ಬೆಲ್ ಮತ್ತು ಬಿಲ್ ಶಿಕ್ಷಕರಾಗದೆ ವಿದ್ಯಾರ್ಥಿಗಳ ದಿಲ್ ಗೆಲ್ಲುವ ಶಿಕ್ಷಕರು ಆದವರಿವರು. ನೇರ ದಿಟ್ಟ ವ್ಯಕ್ತಿತ್ವ ಇವರದು,ಪ್ರಾಮಾಣಿಕತೆಗೆ ಮತ್ತೊಂದು ಹೆಸರಿವರು, ಸಂಗಮೇಶ್ವರ ವಿದ್ಯಾ ಸಂಸ್ಥೆಯಲ್ಲಿ ತಮ್ಮದೇ ಆದ ಒಂದು ಚಾಪನ್ನ ಮೂಡಿಸಿ ತಮ್ಮ ಹೆಸರನ್ನು ಅಜರಾಮರವಾಗಿ ಉಳಿಸಿದ ಕೀರ್ತಿ ಇವರದು.
ವಾಲ್ಮೀಕಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಿ ಯಾರಿಗೆ ಏನೇ ಸಮಸ್ಯೆಯಾದರೂ ಕೂಡ ಅದು ತಮ್ಮ ಸಮಸ್ಯೆಯಂತೆ ತಿಳಿದುಕೊಂಡು ಅದನ್ನು ಬಗೆಹರಿಸಿ ಕೊಡುವ ಗುಣ ಇವರದ್ದಾಗಿದೆ.ತಾವು ಮಾಡುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ಅಚ್ಚುಕಟ್ಟಾಗಿ ಮಾಡಿ ಸಮಾಜಕ್ಕಾಗಿ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವಂತಹ ಗುಣ ಇವರದು. ತಾವು ಬೆಳೆದು ಮತ್ತೊಬ್ಬರನ್ನು ಬೆಳೆಸುವಂತಹ ಗುಣ ಇರುವ ಅಪರೂಪದ ಬೆಲೆ ಕಟ್ಟಲಾಗದ ಮುತ್ತು ಶ್ರೀ ಆರ್ ಜಿ ಸನ್ನಿ ಗುರುಗಳು.
- ಶ್ರೀ ಮುತ್ತು ಯ. ವಡ್ಡರ, ಶಿಕ್ಷಕರು, ಹಿರೇಮಾಗಿ
ತಾಲೂಕು -ಹುನಗುಂದ
ಜಿಲ್ಲೆ -ಬಾಗಲಕೋಟೆ
ಮೊಬೈಲ್ -9845568484




















