
ಬಳ್ಳಾರಿ / ಕಂಪ್ಲಿ: ‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮತ್ತು ಶಿವಶರಣರು ಜಾತಿ, ವರ್ಣ ಹಾಗೂ ಲಿಂಗಬೇಧವಿಲ್ಲದೆ ಎಲ್ಲರಿಗೂ ಸಮಾನತೆಯನ್ನು ದಯಪಾಲಿಸಿದರು. ಅನುಭವ ಮಂಟಪದಲ್ಲಿ ಪುರುಷರಂತೆ ಮಹಿಳೆಯರಿಗೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಚರ್ಚೆಗಳಲ್ಲಿ ಸಮಾನ ಅವಕಾಶ ನೀಡಲಾಯಿತು. ಶರಣರ ಚಿಂತನೆಗಳು, ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ವೇದಿಕೆ, ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಸಾರವನ್ನು ತಿಳಿಸಿ ಮಹಿಳೆಯರಿಗೂ ಧಾರ್ಮಿಕ ಹಕ್ಕುಗಳನ್ನು ಅನುಗ್ರಹಿಸಿದ್ದರು’ ಎಂದು ಇಲ್ಲಿನ 4ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜ್ಯೋತಿ ಇಟಗಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 192ನೇ ಮಹಾಮನೆ ಕಾರ್ಯಕ್ರಮದಲ್ಲಿ ‘ಶರಣರ ಸಮಾನತೆ’ ಕುರಿತು ಉಪನ್ಯಾಸ ನೀಡಿ, ಶಿವಶರಣರ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದರು.
ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಸಹ ಕಾರ್ಯದರ್ಶಿ ಬಿ.ಎಂ. ಪುಷ್ಪಾ ರುದ್ರಯ್ಯ, ಶಿಕ್ಷಕಿ ಗುರುಬಸಮ್ಮ ಸೊಪ್ಪಿನ ಮಠ, ಮಡಿವಾಳ ಸಮುದಾಯದ ತಾಲ್ಲೂಕು ಅಧ್ಯಕ್ಷ ಮಡಿವಾಳ ಹುಲುಗಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ. ಬಸವರಾಜ, ಎಚ್. ನಾಗರಾಜ, ಅಶೋಕ ಕುಕನೂರು, ಎಲಿಗಾರ ವೆಂಕಟರೆಡ್ಡಿ, ಕೆ. ಚಂದ್ರಶೇಖರ್, ಶಂಕ್ರಪ್ಪ, ಡಿ. ಬಸವರಾಜ, ಯು.ಎಂ. ವಿದ್ಯಾಶಂಕರ, ವಿರುಪಾಕ್ಷಿ, ಹನುಮಂತ್, ಚಂದ್ರಯ್ಯ ಸೊಪ್ಪಿನ ಮಠ, ಬುಸಾರೆ ನಾರಾಯಣಪ್ಪ, ರಾಜೇಶ್, ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















