ಬೀದರ್ ಜಿಲ್ಲೆ ಬಸವಕಲ್ಯಾಣ : ಗುರುಪೂರ್ಣಿಮೆ (ವ್ಯಾಸಪೂರ್ಣಿಮೆ) ಜೀವನದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಸಂಕಷ್ಟದ ಸಮಯದಲ್ಲಿ ಶಿಷ್ಯನಿಗೆ ನಿರಪೇಕ್ಷ ಪ್ರೀತಿಯಿಂದ ಆಶೀರ್ವದಿಸಿ, ಧೈರ್ಯ ತುಂಬಿ, ಜೀವನದ ಸಂಕಟಗಳಿಂದ ಪಾರು ಮಾಡುವವರು ಗುರುಗಳು. ಅಂತಹ ಸದ್ಗುರುಗಳ ಚರಣದಲ್ಲಿ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆಯ ವಿಶೇಷತೆಯಾಗಿದೆ ಎಂದು ಬಸವಕಲ್ಯಾಣದ ಗವಿಮಠದ ಪೂಜ್ಯ ಶ್ರೀ ಷ.ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ನಗರದ ಗವಿಮಠದಲ್ಲಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಗುರುಪೂರ್ಣಿಮೆ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಗುರುತತ್ತ್ವದ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಕವಿ ವೀರಶೆಟ್ಟಿ ಎಂ. ಪಾಟೀಲ ರಚಿಸಿರುವ ಗುರುತತ್ತ್ವಕ್ಕೆ ಕಾವ್ಯನಮನ ಸಲ್ಲಿಸುವ “ಹೆಜ್ಜೆಗಳೇ ವಚನವಾದಾಗ” ಎಂಬ ಭಾವಪೂರ್ಣ ಕವನವನ್ನು ವಾಚಿಸಿ ಭಕ್ತರನ್ನು ಭಾವವಿಭೋರಗೊಳಿಸಿದರು.
ಕಲ್ಯಾಣನಾಡು ಜನಪದ ಕಲಾ ಬಳಗದ ದಿಲೀಪ್ ಕುಮಾರ್ ದೇಸಾಯಿ, ಸುರೇಖಾಂತ್ ಬಿರಾದಾರ್ ಹಾಗೂ ಸಂಗಡಿಗರು ಭಕ್ತಿಗೀತೆಗಳ ಗಾಯನವನ್ನು ನಡೆಸಿಕೊಟ್ಟರು.
ಶ್ರೀ ಶ್ರೀಶೈಲ ವಾತಡೆ ದಂಪತಿ ಗುರುಪಾದಪೂಜೆಯನ್ನು ನೆರವೇರಿಸಿದರು.
ವೇ. ಸಿದ್ದಯ್ಯ ಸ್ವಾಮಿ ಧನ್ನೂರು (ಕೆ) ಅವರು ಪಾದಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ವೀರಶೆಟ್ಟಿ ಮಲಶೆಟ್ಟಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಂತ ವಿಜಯ ಪಾಟೀಲ, ಬಲವಂತ ಚಾಕುರೆ, ಬಸವರಾಜ ಶಾಸ್ತ್ರಿ, ರಾಜಪ್ಪ ಹಲಂಗಿ, ಬಸವರಾಜ ಬಡೂರೆ, ಶ್ಯಾಮಸುಂದರ ಮೂಡಬಿ, ಬಸವಂತಪ್ಪ ಲವಾರೆ, ವೀರಣ್ಣ ಶೀಲವಂತ, ಶರಣಬಸಪ್ಪ ಅಲಗೂಡೆ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ವರದಿ :ಶ್ರೀನಿವಾಸ ಬಿರಾದಾರ




















