ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ನಾವು ಹೆಮ್ಮೆಯಿಂದ ಕರೆಯುವ ಪತ್ರಿಕೋದ್ಯಮ ಇಂದು ಅತ್ಯಂತ ಗಂಭೀರವಾದ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟು ಹೊರಗಿನಿಂದ ಬಂದಿದ್ದಲ್ಲ, ನಮ್ಮೊಳಗಿನಿಂದಲೇ ಹುಟ್ಟಿಕೊಂಡಿದ್ದು. ಇಂದು ಒಂದು ಪ್ರಶ್ನೆ ಎಲ್ಲೆಡೆ ಗುಲ್ಲೆಬ್ಬಿಸಿದೆ.
ಪತ್ರಕರ್ತರೆಂದರೆ ಯಾರು? ಒಂದು ಸಂಘದ ಸದಸ್ಯತ್ವದ ಕಾರ್ಡ್ ಕುತ್ತಿಗೆಗೆ ನೇತು ಹಾಕಿಕೊಂಡವನು ಮಾತ್ರ ಪತ್ರಕರ್ತನಾ? ಇಲ್ಲವೇ ತನ್ನ ಊರಿನ ಸಮಸ್ಯೆಯನ್ನು, ರೈತನ ಕಣ್ಣೀರನ್ನು, ಭ್ರಷ್ಟಾಚಾರದ ಸತ್ಯವನ್ನು ಇದ್ದುದ್ದನ್ನು ಇದ್ದ ಹಾಗೆ, ಯಾವುದೇ ಭಯವಿಲ್ಲದೆ ಬರೆಯುವವನು ಪತ್ರಕರ್ತನಾ? ಈ ಪ್ರಶ್ನೆ ಇಂದು ಬೀದರ್ ನಿಂದ ಚಾಮರಾಜನಗರದವರೆಗೆ ಪ್ರತಿಯೊಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಕಾಡುತ್ತಿದೆ.
ಇತ್ತೀಚೆಗೆ ನಾವು ಒಂದು ವಿಕೃತ ಸಂಸ್ಕೃತಿಯನ್ನು ನೋಡುತ್ತಿದ್ದೇವೆ. ಕೆಲವು ರಾಜಕೀಯ ಮುಖಂಡರು ಮತ್ತು ಕೆಲವು ಸ್ವಘೋಷಿತ ಹಿರಿಯ ಪತ್ರಕರ್ತರು ಒಂದು ಅಲಿಖಿತ ನಿಯಮವನ್ನು ಜಾರಿಗೆ ತಂದಿದ್ದಾರೆ, ಯಾವುದೋ ಒಂದು ನಿರ್ದಿಷ್ಟ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಇದ್ದರೆ ಮಾತ್ರ ಅವನು ಪತ್ರಕರ್ತ, ಇಲ್ಲದಿದ್ದರೆ ಅವನು ಪತ್ರಕರ್ತನೇ ಅಲ್ಲ. ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಹಿಡಿದು, ಪತ್ರಿಕಾ ಗೋಷ್ಠಿಯ ಪ್ರವೇಶದವರೆಗೆ ಈ ಕಾರ್ಡ್ ರಾಜಕೀಯ ನಡೆಯುತ್ತಿದೆ. ಸದಸ್ಯತ್ವ ಇಲ್ಲದ ಪ್ರಾಮಾಣಿಕ ಪತ್ರಕರ್ತನನ್ನು ಪೊಲೀಸ್ ಅಧಿಕಾರಿಗಳು, ತಹಶೀಲ್ದಾರರು, ರಾಜಕಾರಣಿಗಳು ಕಡೆಗಣಿಸುವ, ಅವಮಾನಿಸುವ ದೃಶ್ಯಗಳು ಸಾಮಾನ್ಯವಾಗುತ್ತಿವೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ.
ಮೊದಲನೆಯದಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಚಾರವೆಂದರೆ ಪತ್ರಕರ್ತರ ಸಂಘವೆಂದರೆ ಏನು? ಅದು ಒಂದು ವೃತ್ತಿಪರರ ಕ್ಷೇಮಾಭಿವೃದ್ಧಿ ಸಂಘ. ಅದು ಒಂದು ಟ್ರೇಡ್ ಯೂನಿಯನ್ ಇದ್ದ ಹಾಗೆ. ಪತ್ರಕರ್ತರ ಹಕ್ಕು, ವೇತನ, ಭದ್ರತೆಗಾಗಿ ಹೋರಾಡಲು ಕಟ್ಟಿಕೊಂಡ ಸಂಘಟನೆ. ಅದು ಪತ್ರಕರ್ತನಿಗೆ ಅರ್ಹತಾ ಪ್ರಮಾಣಪತ್ರ ನೀಡುವ ವಿಶ್ವವಿದ್ಯಾಲಯವಲ್ಲ, ಅದು ಸರ್ಕಾರಿ ನೋಂದಣಿ ಪ್ರಾಧಿಕಾರವೂ ಅಲ್ಲ. ಒಬ್ಬ ವಕೀಲನಿಗೆ ಬಾರ್ ಕೌನ್ಸಿಲ್ ನೋಂದಣಿ ಬೇಕು, ಒಬ್ಬ ವೈದ್ಯನಿಗೆ ಮೆಡಿಕಲ್ ಕೌನ್ಸಿಲ್ ನೋಂದಣಿ ಬೇಕು, ಏಕೆಂದರೆ ಅದು ಕಾನೂನಿನ ಕಟ್ಟಳೆ. ಆದರೆ ಪತ್ರಕರ್ತನಾಗಲು ಭಾರತದ ಸಂವಿಧಾನದಲ್ಲಿ ಅಥವಾ ಯಾವುದೇ ಕಾನೂನಿನಲ್ಲಿ ಯಾವುದೇ ಸಂಘದ ಸದಸ್ಯತ್ವ ಕಡ್ಡಾಯ ಎಂದು ಎಲ್ಲಿಯೂ ಹೇಳಿಲ್ಲ. ಸಂವಿಧಾನದ 19(1)(ಎ) ವಿಧಿಯು ಪ್ರತಿಯೊಬ್ಬ ಪ್ರಜೆಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆ ಸ್ವಾತಂತ್ರ್ಯದ ವಿಸ್ತೃತ ರೂಪವೇ ಪತ್ರಿಕಾ ಸ್ವಾತಂತ್ರ್ಯ. ಒಬ್ಬ ವ್ಯಕ್ತಿ ನಿರಂತರವಾಗಿ ಸಾರ್ವಜನಿಕ ಹಿತಾಸಕ್ತಿಗಾಗಿ ಬರೆಯುತ್ತಿದ್ದರೆ, ವರದಿ ಮಾಡುತ್ತಿದ್ದರೆ, ಅವನೇ ಪತ್ರಕರ್ತ. ಅವನಿಗೆ ಯಾವ ಸಂಘದ ಮುದ್ರೆಯೂ ಬೇಕಿಲ್ಲ.
ಆದರೆ ಇಂದು ಏನಾಗಿದೆ? ಪತ್ರಿಕೋದ್ಯಮಕ್ಕೆ ಯಾವುದೇ ಸಂಬಂಧವಿಲ್ಲದ, ವರ್ಷಕ್ಕೆ ಒಂದು ಲೇಖನವನ್ನೂ ಬರೆಯದ, ಕೇವಲ ರಾಜಕೀಯ ಮುಖಂಡರ ಹಿಂದೆ ಓಡಾಡಿ ಕಾರ್ಡ್ ಪಡೆದವರು ‘ಹಿರಿಯ ಪತ್ರಕರ್ತ’ರಾಗುತ್ತಿದ್ದಾರೆ. ಆದರೆ ಹಳ್ಳಿಯಲ್ಲಿ ಕೂತು, ಪ್ರತಿ ದಿನ ತನ್ನ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ, ರಸ್ತೆಯ ಗುಂಡಿ, ಶಾಲೆಯ ಅವ್ಯವಸ್ಥೆ, ಭೂ ಕಬಳಿಕೆಯ ಬಗ್ಗೆ ದಿಟ್ಟವಾಗಿ ಬರೆಯುವ, ಬೆದರಿಕೆಗಳನ್ನು ಎದುರಿಸುವ ಗ್ರಾಮೀಣ ಪತ್ರಕರ್ತನನ್ನು ‘ನೀನು ಯಾವ ಸಂಘದ ಸದಸ್ಯ?’ ಎಂದು ಪ್ರಶ್ನಿಸಲಾಗುತ್ತಿದೆ. ಇದು ನಿಷ್ಠಾವಂತ ಮತ್ತು ಪ್ರಾಮಾಣಿಕ ಪತ್ರಕರ್ತರನ್ನು ತುಳಿಯುವ ವ್ಯವಸ್ಥಿತ ಷಡ್ಯಂತ್ರವಲ್ಲದೆ ಮತ್ತೇನೂ ಅಲ್ಲ. ಅನುಕೂಲಸಿಂಧು ರಾಜಕಾರಣಿಗಳು ತಮಗೆ ಬೇಕಾದವರನ್ನು ಮಾತ್ರ ಗುರುತಿಸಿ, ಪ್ರಶ್ನೆ ಕೇಳುವ, ನೇರವಾಗಿ ಮಾತನಾಡುವ ಪತ್ರಕರ್ತರನ್ನು ಮೂಲೆಗುಂಪು ಮಾಡುವ ತಂತ್ರ ಇದು. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಅನಾಗರಿಕ ಕೆಲಸ.
ನಿಜವಾದ ಪತ್ರಕರ್ತನನ್ನು ಅವನ ಕಾರ್ಡ್ ನಿಂದ ಗುರುತಿಸಬಾರದು, ಅವನ ಕಾಳಜಿಯಿಂದ ಗುರುತಿಸಬೇಕು. ಅವನ ಬರವಣಿಗೆಯ ಪ್ರಾಮಾಣಿಕತೆಯಿಂದ ಗುರುತಿಸಬೇಕು. ಅವನ ಧೈರ್ಯದಿಂದ ಗುರುತಿಸಬೇಕು. ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆಂದು ಹೇಳುವ ನೇರ ನುಡಿಯೇ ಪತ್ರಕರ್ತನ ನಿಜವಾದ ಸದಸ್ಯತ್ವ ಕಾರ್ಡ್. ಮಹಾತ್ಮ ಗಾಂಧೀಜಿಯವರು ಯಾವ ಪತ್ರಕರ್ತರ ಸಂಘದ ಸದಸ್ಯರಾಗಿದ್ದರು? ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಮೂಕನಾಯಕ’ ಪತ್ರಿಕೆ ನಡೆಸಿದಾಗ ಯಾವ ಸಂಘ ಅವರಿಗೆ ಸದಸ್ಯತ್ವ ನೀಡಿತ್ತು? ಪತ್ರಿಕೋದ್ಯಮದ ಇತಿಹಾಸದಲ್ಲಿ ದೊಡ್ಡ ಕ್ರಾಂತಿ ಮಾಡಿದವರೆಲ್ಲರೂ ಯಾವುದೇ ಸಂಘದ ಹಂಗಿನಲ್ಲಿ ಇರಲಿಲ್ಲ, ಅವರು ಜನರ ಹಂಗಿನಲ್ಲಿ ಇದ್ದರು.
ಆದ್ದರಿಂದ ಈ ವಿಷಯವನ್ನು ರಾಜ್ಯ ಸರ್ಕಾರ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಿ ಸೌಲಭ್ಯಗಳು, ಅಕ್ರೆಡೇಶನ್ ಕಾರ್ಡ್, ಪತ್ರಿಕಾ ಗೋಷ್ಠಿಗಳಿಗೆ ಆಹ್ವಾನ, ಇವೆಲ್ಲವನ್ನೂ ಕೇವಲ ಒಂದು ಅಥವಾ ಎರಡು ಸಂಘಗಳ ಸದಸ್ಯತ್ವದ ಆಧಾರದ ಮೇಲೆ ನಿರ್ಧರಿಸಬಾರದು. ಒಬ್ಬ ವ್ಯಕ್ತಿ ನಿಜವಾಗಿಯೂ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾನೆಯೇ ಎಂಬುದನ್ನು ಅವನ ಬರವಣಿಗೆ, ಅವನು ಕೆಲಸ ಮಾಡುತ್ತಿರುವ ಪತ್ರಿಕೆ ಅಥವಾ ಮಾಧ್ಯಮ ಸಂಸ್ಥೆಯ ದೃಢೀಕರಣ, ಅವನ ನಿರಂತರ ಕಾರ್ಯದ ಆಧಾರದ ಮೇಲೆ ನಿರ್ಧರಿಸಬೇಕು. ವಿವಿಧ ಸಂಘಗಳಲ್ಲಿ ಸದಸ್ಯತ್ವ ಪಡೆಯದಿದ್ದರೂ ಪ್ರಾಮಾಣಿಕವಾಗಿ ದುಡಿಯುವ ಸಾವಿರಾರು ಗ್ರಾಮೀಣ, ತಾಲೂಕು ಮಟ್ಟದ ಪತ್ರಕರ್ತರಿಗೆ ನ್ಯಾಯಬದ್ಧ ಅವಕಾಶ ಮತ್ತು ಗೌರವ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು.
ಇದಕ್ಕಾಗಿ ಸರ್ಕಾರ ಒಂದು ಪಾರದರ್ಶಕ ಮಾರ್ಗಸೂಚಿಯನ್ನು ರೂಪಿಸಬೇಕು. ಪತ್ರಕರ್ತರ ಅಕ್ರೆಡೆಶನ್ ಗೆ ಸಂಘದ ಶಿಫಾರಸ್ಸು ಕಡ್ಡಾಯ ಎಂಬ ನಿಯಮವನ್ನು ತೆಗೆದು ಹಾಕಬೇಕು. ಬದಲಿಗೆ ಸಂಬಂಧಪಟ್ಟ ಪತ್ರಿಕೆ, ಚಾನೆಲ್ ನ ಸಂಪಾದಕರ ಶಿಫಾರಸ್ಸು ಮತ್ತು ಕಳೆದ ಒಂದು ವರ್ಷದ ಬೈಲೈನ್ ಇರುವ ವರದಿಗಳನ್ನು ಪರಿಗಣಿಸಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಜವಾದ ಪತ್ರಕರ್ತರನ್ನು ಗುರುತಿಸುವ ಸಮಿತಿ ರಚಿಸಬೇಕು, ಅದರಲ್ಲಿ ಎಲ್ಲಾ ಸಂಘಗಳಿಗೂ ಪ್ರಾತಿನಿಧ್ಯ ಇರಬೇಕು, ಆದರೆ ಯಾವುದೇ ಒಂದು ಸಂಘದ ಏಕಸ್ವಾಮ್ಯ ಇರಬಾರದು.
ಪತ್ರಕರ್ತರ ಸಂಘಗಳು ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಪತ್ರಕರ್ತರನ್ನು ಬೆಳೆಸುತ್ತಿದ್ದೇವೆಯೇ ಅಥವಾ ಒಡೆಯುತ್ತಿದ್ದೇವೆಯೇ ಎಂದು. ಸದಸ್ಯತ್ವವನ್ನು ಒಂದು ವ್ಯಾಪಾರವನ್ನಾಗಿ ಮಾಡದೆ, ಅದನ್ನು ಒಂದು ಜವಾಬ್ದಾರಿಯನ್ನಾಗಿ ನೋಡಬೇಕು. ಪ್ರಾಮಾಣಿಕ ಪತ್ರಕರ್ತರನ್ನು ತಮ್ಮ ಸಂಘಕ್ಕೆ ಆಹ್ವಾನಿಸಿ ಗೌರವಿಸಬೇಕು, ಹೊರಗಿಡಬಾರದು.
ಕೊನೆಯದಾಗಿ, ಪತ್ರಕರ್ತ ಗೆಳೆಯರೇ, ನಾವು ಕಾರ್ಡ್ ಗಾಗಿ ಹೋರಾಡಬಾರದು, ನಾವು ಕರ್ತವ್ಯಕ್ಕಾಗಿ ಹೋರಾಡಬೇಕು. ನಮ್ಮ ಬರವಣಿಗೆಯೇ ನಮ್ಮ ಗುರುತು, ನಮ್ಮ ಪ್ರಾಮಾಣಿಕತೆಯೇ ನಮ್ಮ ಶಕ್ತಿ. ಯಾವ ಸಂಘದ ಸದಸ್ಯತ್ವ ಇಲ್ಲದಿದ್ದರೂ ನೀವು ಸತ್ಯಕ್ಕಾಗಿ ಬರೆಯುತ್ತಿದ್ದರೆ ನೀವೇ ನಿಜವಾದ ಪತ್ರಕರ್ತರು.
ಈ ದೇಶದ ಸಂವಿಧಾನ ನಿಮ್ಮೊಂದಿಗಿದೆ, ಜನರ ಆಶೀರ್ವಾದ ನಿಮ್ಮೊಂದಿಗಿದೆ. ಈ ಅನುಕೂಲಸಿಂಧು ವ್ಯವಸ್ಥೆಯ ವಿರುದ್ಧ ನಾವು ಒಂದಾಗಿ ಧ್ವನಿ ಎತ್ತಬೇಕಿದೆ. ಸರ್ಕಾರ ಕೂಡ ಕೂಡಲೇ ಎಚ್ಚೆತ್ತುಕೊಂಡು ಈ ತಾರತಮ್ಯವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೇ ದುರ್ಬಲಗೊಳ್ಳುತ್ತದೆ.

ಲೇಖಕರು: ಸಂಗಮೇಶ ಎನ್. ಜವಾದಿ, ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ್ ಜಿಲ್ಲೆ.
9663809340.




















