ಇತ್ತೀಚಿನ ದಿನಗಳಲ್ಲಿ ಒಂದು ಗಂಭೀರವಾದ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಬೀದಿಗೊಬ್ಬ ಪತ್ರಕರ್ತ, ಗಲ್ಲಿಗೊಬ್ಬ ವರದಿಗಾರ. ಪತ್ರಕರ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಲ್ಲ, ಪತ್ರಿಕೋದ್ಯಮದ ಗುಣಮಟ್ಟ ಹೆಚ್ಚುತ್ತಿದೆಯೇ? ಖಂಡಿತವಾಗಿಯೂ ಇಲ್ಲ. ಸಂಖ್ಯೆ ಹೆಚ್ಚಾದಂತೆ ಗುಣಮಟ್ಟ ಕುಸಿಯುತ್ತಿದೆ. ಒಂದು ಪದವನ್ನೂ ಸಹ ಸರಿಯಾಗಿ ಬರೆಯಲು ಬಾರದ, ಒಂದು ವಾಕ್ಯವನ್ನು ಅರ್ಥಪೂರ್ಣವಾಗಿ ರಚಿಸಲು ಬಾರದ, ಕನ್ನಡದ ಕಾಗುಣಿತದ ಪರಿಜ್ಞಾನವಿಲ್ಲದ, ವೈಚಾರಿಕತೆ ಎಂದರೇನೆಂದು ಗೊತ್ತಿಲ್ಲದ ಅನೇಕ ಜನ ಇಂದು ತಮ್ಮನ್ನು ತಾವೇ ಪತ್ರಕರ್ತರೆಂದು ಕರೆದುಕೊಳ್ಳುತ್ತಿದ್ದಾರೆ. ಇದು ಪತ್ರಿಕೋದ್ಯಮದ ಬಿಕ್ಕಟ್ಟು ಮಾತ್ರವಲ್ಲ, ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲಿನ ನೇರ ದಾಳಿ.
ಹಿಂದೆ ಪತ್ರಕರ್ತನಾಗಬೇಕೆಂದರೆ ಒಂದು ತಪಸ್ಸು ಮಾಡಬೇಕಿತ್ತು. ವರ್ಷಗಟ್ಟಲೆ ಹಿರಿಯರ ಬಳಿ ಕಲಿಯಬೇಕು, ಭಾಷೆಯನ್ನು ಸಾಧಿಸಬೇಕು, ಸಮಾಜವನ್ನು ಓದಬೇಕು, ಬರೆಯುತ್ತಾ ಬರೆಯುತ್ತಾ ತಿದ್ದಿಕೊಳ್ಳಬೇಕು. ಒಂದು ಸುದ್ದಿ ಬರೆಯುವಾಗ ಹತ್ತು ಬಾರಿ ಯೋಚಿಸಬೇಕು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಒಂದು ಮೊಬೈಲ್ ಫೋನ್ ಇದ್ದರೆ ಸಾಕು, ಒಂದು ಬೈಕ್ ಇದ್ದರೆ ಸಾಕು, ತಕ್ಷಣವೇ ಪತ್ರಕರ್ತ. ಯಾರೋ ಹೇಳಿದ್ದನ್ನು ಕಾಪಿ ಪೇಸ್ಟ್ ಮಾಡಿ, ವಾಟ್ಸಾಪ್ ನಲ್ಲಿ ಬಂದಿದ್ದನ್ನು ನಕಲು ಮಾಡಿ ಫೇಸ್ಬುಕ್ ನಲ್ಲಿ ಹಾಕಿದರೆ ಆತ ಪತ್ರಕರ್ತನಾದ. ಇಂತಹವರಿಗೆ ಒಂದು ವರ್ಷದೊಳಗೇ ಪತ್ರಕರ್ತರ ಸಂಘದ ಸದಸ್ಯತ್ವವೂ ದೊರೆಯುತ್ತದೆ. ಐಡಿ ಕಾರ್ಡ್ ಸಿಕ್ಕಿತು ಎಂದರೆ ಮುಗಿಯಿತು, ಆತ ಸರ್ವಶಕ್ತ. ಇಂತಹವರಿಂದ ಸಮಾಜದ ಉನ್ನತಿಯನ್ನು ಎತ್ತಿ ಹಿಡಿಯಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ.
ನಿಜವಾದ ಪತ್ರಕರ್ತನಿಗೆ ಸಮಾಜದ ಬಗ್ಗೆ ಕಳಕಳಿ ಇರಬೇಕು. ಬಡವನ ಕಣ್ಣೀರು ಒರೆಸುವ ಮನಸ್ಸು ಇರಬೇಕು, ರೈತನ ನೋವು ಅರ್ಥಮಾಡಿಕೊಳ್ಳುವ ಹೃದಯ ಇರಬೇಕು, ಅಧಿಕಾರಿಯನ್ನು ಪ್ರಶ್ನಿಸುವ ಧೈರ್ಯ ಇರಬೇಕು. ಆದರೆ ಇಂದು ಹುಟ್ಟಿಕೊಂಡಿರುವ ಅನೇಕ ನಕಲಿ ಪತ್ರಕರ್ತರಿಗೆ ಸಮಾಜದ ಕಳಕಳಿಯೇ ಇಲ್ಲ. ಅವರಿಗೆ ಇರುವುದು ಸ್ವಹಿತಾಸಕ್ತಿ, ಪ್ರಚಾರದ ಹಂಬಲ, ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುವ ದುರಾಸೆ. ಅವರಿಗೆ ಅಭಿವೃದ್ಧಿಯ ಬಗ್ಗೆ ಬರೆಯಲು ಬರುವುದಿಲ್ಲ, ಏಕೆಂದರೆ ಅಭಿವೃದ್ಧಿ ಎಂದರೇನು ಎಂಬುದೇ ಅವರಿಗೆ ಗೊತ್ತಿಲ್ಲ. ಸಮಾಜದಲ್ಲಿರುವ ಅಂಕುಡೊಂಕುಗಳ ಬಗ್ಗೆ ಬರೆಯಲು ಅವರಿಗೆ ಸಾಧ್ಯವಿಲ್ಲ, ಏಕೆಂದರೆ ಅವರೇ ಆ ಅಂಕುಡೊಂಕುಗಳ ಭಾಗವಾಗಿದ್ದಾರೆ. ಅವರು ಮಾಡುವುದು ಒಂದೇ, ಯಾರೋ ಹೇಳಿದ್ದನ್ನು ಹೆದರಿಸಿ ಬರೆಯುವುದು, ಅಥವಾ ಹೊಗಳಿ ಬರೆಯುವುದು.
ಇವರಿಗೆ ಸ್ಥಳೀಯ ರಾಜಕೀಯ ನಾಯಕರ ಆಶ್ರಯವಿದೆ, ಸ್ಥಳೀಯ ಅಧಿಕಾರಿಗಳ ಬೆಂಬಲವಿದೆ, ಕೆಲವು ಸಂಘ ಸಂಸ್ಥೆಗಳ ರಕ್ಷಣೆಯಿದೆ. ಒಬ್ಬ ನಿಷ್ಠಾವಂತ ಅಧಿಕಾರಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಂಡರೆ, ಇಂತಹ ನಕಲಿ ಪತ್ರಕರ್ತರು ತಕ್ಷಣ ಆ ಅಧಿಕಾರಿಯ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಒಬ್ಬ ಒಳ್ಳೆಯ ಜನಪ್ರತಿನಿಧಿ ಭ್ರಷ್ಟರಿಗೆ ಸೊಪ್ಪು ಹಾಕದಿದ್ದರೆ, ಆತನ ವಿರುದ್ಧ ಅಪಪ್ರಚಾರ ಮಾಡುತ್ತಾರೆ.
“ನಮ್ಮ ಹಿಂದೆ ಪತ್ರಕರ್ತರ ಸಂಘ ಇದೆ” ಎಂಬ ಒಂದೇ ವಾಕ್ಯ ಅವರ ಬ್ರಹ್ಮಾಸ್ತ್ರ. ಪತ್ರಕರ್ತರ ಸಂಘ ಎಂದಿಗೂ ಕೆಟ್ಟದನ್ನು ಹೇಳುವುದಿಲ್ಲ, ಕೆಟ್ಟದನ್ನು ಮಾಡಲು ಪ್ರೇರೇಪಿಸುವುದಿಲ್ಲ. ಆದರೆ ಈ ನಕಲಿ ಪತ್ರಕರ್ತರು ಸಂಘದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಿಜವಾದ, ಪ್ರಾಮಾಣಿಕ ಪತ್ರಕರ್ತರಿಗೂ ಕೆಟ್ಟ ಹೆಸರು ಬರುತ್ತಿದೆ.
ಇನ್ನೊಂದು ದುರಂತವೆಂದರೆ, ನಿಜವಾಗಿಯೂ ಸಮಾಜಮುಖಿಯಾಗಿ ಕೆಲಸ ಮಾಡುವ, ಜನರ ಸಮಸ್ಯೆಗಳನ್ನು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಲುಪಿಸುವ ನೈಜ ಪತ್ರಕರ್ತರಿಗೆ ಇಂದು ಬೆಂಬಲವೇ ಇಲ್ಲ. ಅವರು ಇದ್ದಿದ್ದನ್ನು ಇದ್ದ ಹಾಗೆ ಬರೆಯುತ್ತಾರೆ ಎಂಬ ಕಾರಣಕ್ಕೆ ಸ್ಥಳೀಯ ರಾಜಕಾರಣಿಗಳು ಅವರನ್ನು ದ್ವೇಷಿಸುತ್ತಾರೆ, ಅಧಿಕಾರಿಗಳು ಅವರಿಗೆ ಮಾಹಿತಿ ನೀಡುವುದಿಲ್ಲ, ಜಾಹೀರಾತು ನೀಡುವುದಿಲ್ಲ. ಅವರು ಯಾವುದೇ ಗುಂಪಿಗೆ ಸೇರದ ಕಾರಣ, ಅವರಿಗೆ ರಕ್ಷಣೆಯೂ ಇರುವುದಿಲ್ಲ. ಹೀಗಾಗಿ ಒಳ್ಳೆಯ ಪತ್ರಕರ್ತರು ದಿನದಿಂದ ದಿನಕ್ಕೆ ಕುಗ್ಗಿ ಹೋಗುತ್ತಿದ್ದಾರೆ, ನಕಲಿ ಪತ್ರಕರ್ತರು ಮೆರೆಯುತ್ತಿದ್ದಾರೆ.
ಇದು ಸಮಾಜಕ್ಕೆ ಒಳ್ಳೆಯ ಲಕ್ಷಣವಲ್ಲ.
ಆದ್ದರಿಂದ ಈಗ ಜವಾಬ್ದಾರಿ ಜನಸಾಮಾನ್ಯರ ಮೇಲಿದೆ, ಅಧಿಕಾರಿಗಳ ಮೇಲಿದೆ, ಜನಪ್ರತಿನಿಧಿಗಳ ಮೇಲಿದೆ. ಜನಸಾಮಾನ್ಯರು ಒಳ್ಳೆಯ ಪತ್ರಕರ್ತರನ್ನು ಗುರುತಿಸಬೇಕು. ಯಾರು ನಾಟಕ ಮಾಡಿ ನಿಮ್ಮನ್ನು ಮರುಳು ಮಾಡುತ್ತಿದ್ದಾನೆ, ಯಾರು ನಿಜವಾಗಿಯೂ ನಿಮ್ಮ ಸಮಸ್ಯೆಗಾಗಿ ಹೋರಾಡುತ್ತಿದ್ದಾನೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕೇವಲ ಐಡಿ ಕಾರ್ಡ್ ನೋಡಿ ಪತ್ರಕರ್ತನೆಂದು ನಂಬಬಾರದು, ಆತನ ಬರವಣಿಗೆ ನೋಡಬೇಕು, ಆತನ ವ್ಯಕ್ತಿತ್ವ ನೋಡಬೇಕು, ಆತನ ಹೋರಾಟ ನೋಡಬೇಕು. ನಿಷ್ಠಾವಂತ, ನೇರ, ದಿಟ್ಟ ಪತ್ರಕರ್ತರನ್ನು ಜನರು ಬೆಂಬಲಿಸಬೇಕು, ಪ್ರೋತ್ಸಾಹಿಸಬೇಕು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಾ ಇಂತಹ ನಕಲಿ ಪತ್ರಕರ್ತರ ಬಗ್ಗೆ ಸೂಕ್ಷ್ಮವಾಗಿ ನಿಗಾ ಇಡಬೇಕು. ಬೆದರಿಕೆಗೆ ಹೆದರಬಾರದು, ಸುಳ್ಳು ಸುದ್ದಿಗೆ ಬಗ್ಗಬಾರದು. ನಿಜವಾದ ಪತ್ರಕರ್ತರಿಗೆ ಗೌರವ ನೀಡಬೇಕು, ಅವರಿಂದ ಬರುವ ರಚನಾತ್ಮಕ ಟೀಕೆಯನ್ನು ಸ್ವೀಕರಿಸಬೇಕು. ಪತ್ರಕರ್ತರ ಸಂಘಗಳು ಕೂಡ ಎಚ್ಚೆತ್ತುಕೊಳ್ಳಬೇಕು. ಸದಸ್ಯತ್ವ ನೀಡುವಾಗ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು. ಕನಿಷ್ಠ ಮೂರು ವರ್ಷ ನಿರಂತರವಾಗಿ ಬರೆದ ಲೇಖನಗಳು, ಭಾಷಾ ಜ್ಞಾನ, ಸಮಾಜ ಸೇವೆಯ ದಾಖಲೆಗಳನ್ನು ಪರಿಶೀಲಿಸಿ ಮಾತ್ರ ಸದಸ್ಯತ್ವ ನೀಡಬೇಕು. ವರ್ಷಕ್ಕೊಮ್ಮೆ ಸದಸ್ಯರ ಕೃತಿಗಳ ಮೌಲ್ಯಮಾಪನ ಮಾಡಬೇಕು. ತಪ್ಪು ಮಾಡಿದವರ ಸದಸ್ಯತ್ವವನ್ನು ರದ್ದುಗೊಳಿಸಬೇಕು.
ಪತ್ರಿಕೋದ್ಯಮವೆಂದರೆ ಅದು ಒಂದು ಉದ್ಯೋಗವಲ್ಲ, ಅದು ಒಂದು ಜವಾಬ್ದಾರಿ, ಒಂದು ತಪಸ್ಸು, ಒಂದು ಹೋರಾಟ. ಅದು ಸಮಾಜದ ಕಣ್ಣು, ಕಿವಿ, ಮೂಗು. ಆ ಕಣ್ಣು ಕೊಳಕಾದರೆ ಸಮಾಜ ಕುರುಡಾಗುತ್ತದೆ. ಆದ್ದರಿಂದ ನಕಲಿ ಪತ್ರಕರ್ತರನ್ನು ಗುರುತಿಸಿ ದೂರವಿಡುವುದು, ಅಸಲಿ ಪತ್ರಕರ್ತರನ್ನು ಉಳಿಸಿ ಬೆಳೆಸುವುದು ಇಂದಿನ ತುರ್ತು ಅಗತ್ಯ. ಜನಸಾಮಾನ್ಯರು ಎಚ್ಚರವಾದಾಗ ಮಾತ್ರ ಸಮಾಜ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಏನಂತೀರಿ, ಇದು ಸತ್ಯವಲ್ಲವೇ?

ಲೇಖಕರು: ಸಂಗಮೇಶ ಎನ್ ಜವಾದಿ, ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ್ ಜಿಲ್ಲೆ.




















