ಹಿಂದೂ ಜನಜಾಗೃತಿ ಸಮಿತಿಯನ್ನು ‘ದೇಶದ್ರೋಹಿ’ ಎಂದು ಬಿಂಬಿಸಿ ಅಪಪ್ರಚಾರ ! – ತಪ್ಪಿತಸ್ಥರ ವಿರುದ್ಧ ಬಂಟ್ವಾಳ ಪೊಲೀಸರಿಗೆ ದೂರು
ಬಂಟ್ವಾಳ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ 29 ರಂದು ಬಿ.ಸಿ.ರೋಡ್‌ನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಸಂವಿಧಾನಬದ್ಧ ಹಾಗೂ ಶಾಂತಿಯುತವಾಗಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾ ಮಹೋತ್ಸವದ ವಿರುದ್ಧ ಎಸ್‌ಡಿಪಿಐ ಮುಖಂಡ ಅಶ್ರಫ್ ತಲಪಾಡಿ ಅವರು ಮಾಡಿರುವ ಸುಳ್ಳು, ಆಧಾರ ರಹಿತ ಹಾಗೂ ಪ್ರಚೋದನಕಾರಿ ಆರೋಪಗಳನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ. ಈ ಸಂಬಂಧ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಸಮಿತಿಯು ಮನವಿ ಸಲ್ಲಿಸಿದೆ.
ಕಾರ್ಯಕ್ರಮದ ಪ್ರಚಾರಕ್ಕಾಗಿ ಅಳವಡಿಸಲಾಗಿದ್ದ ಫಲಕಗಳನ್ನು ಆಧಾರವಾಗಿಟ್ಟುಕೊಂಡು, ವ್ಯಾಸಪೂಜೆ ಹಾಗೂ ರಾಮರಾಜ್ಯದ ಕುರಿತ ಧಾರ್ಮಿಕ ಪ್ರವಚನಗಳನ್ನು ಒಳಗೊಂಡಿದ್ದ ಪವಿತ್ರ ಗುರುಪೂರ್ಣಿಮಾ ಮಹೋತ್ಸವವನ್ನು “ದೇಶದ್ರೋಹಿ ಕಾರ್ಯಕ್ರಮ” ಎಂದು ಬಿಂಬಿಸಲಾಗಿದೆ.
ಯಾವುದೇ ಸಾಕ್ಷ್ಯಾಧಾರವಿಲ್ಲದೆ ಇಂತಹ ಆರೋಪಗಳನ್ನು ಮಾಡಿ ಸಮಾಜದಲ್ಲಿ ಗೊಂದಲ, ಕೋಮು ಉದ್ವಿಗ್ನತೆ ಹಾಗೂ ಸಮಿತಿಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಸಲಾಗಿದೆ ಎಂದು ಸಮಿತಿಯು ಆರೋಪಿಸಿದೆ.
ಹಿಂದೂ ಜನಜಾಗೃತಿ ಸಮಿತಿಯು ಕಳೆದ 24 ವರ್ಷಗಳಿಂದ ಭಾರತೀಯ ಸಂವಿಧಾನದ ಚೌಕಟ್ಟಿನೊಳಗೆ ಧರ್ಮಜಾಗೃತಿ, ರಾಷ್ಟ್ರಜಾಗೃತಿ ಹಾಗೂ ಸಾಂಸ್ಕೃತಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಭಾರತೀಯ ಸಂವಿಧಾನದ ವಿಧಿ 19(1)(a) ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು, ಧರ್ಮ, ಸಂಸ್ಕೃತಿ ಹಾಗೂ “ಹಿಂದೂ ರಾಷ್ಟ್ರ”ದ ಪರಿಕಲ್ಪನೆಯ ಕುರಿತು ಶಾಂತಿಯುತವಾಗಿ ವಿಚಾರ ಮಂಡಿಸುವುದು ಯಾವುದೇ ಕಾನೂನುಬಾಹಿರ ಕೃತ್ಯವಲ್ಲ. ಆದಾಗ್ಯೂ, ಧಾರ್ಮಿಕ ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿ “ದೇಶದ್ರೋಹಿ” ಎಂದು ಬಿಂಬಿಸುವುದು ಹಾಗೂ ಸಮಿತಿಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಅಪಪ್ರಚಾರ ನಡೆಸುವುದು ಗಂಭೀರ ಮತ್ತು ಖಂಡನೀಯ ಕೃತ್ಯವಾಗಿದೆ.
ಆದ್ದರಿಂದ, ಸುಳ್ಳು ಹಾಗೂ ಪ್ರಚೋದನಕಾರಿ ಆರೋಪಗಳನ್ನು ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಸಂವಿಧಾನಬದ್ಧವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳು ಅಡ್ಡಿಪಡಿಸದಂತೆ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.
ಇದೇ ಪ್ರಕರಣದ ಮತ್ತೊಂದು ಬೆಳವಣಿಗೆಯಾಗಿ, ಗುರುಪೂರ್ಣಿಮಾ ಮಹೋತ್ಸವದ ಪ್ರಚಾರಕ್ಕಾಗಿ ಬ್ಯಾನರ್ ಅಳವಡಿಸಿದ್ದ ಧರ್ಮಪ್ರೇಮಿ ಜ್ಯೋತಿಷಿ ಶ್ರೀ ಅನಿಲ್ ಪಂಡಿತ್ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಕೋಮು ಪ್ರಚೋದನಕಾರಿ ಸಂದೇಶಗಳನ್ನು ಹರಡಲಾಗಿದೆ. ಇದರಿಂದ ಅವರ ವೈಯಕ್ತಿಕ ಘನತೆಗೆ ಧಕ್ಕೆಯುಂಟಾಗಿದ್ದು, ಧಾರ್ಮಿಕ ಭಾವನೆಗಳಿಗೂ ನೋವುಂಟಾಗಿದೆ. ಈ ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸಮಸ್ತ ಹಿಂದೂ ಸಂಘಟನೆಗಳ ಪ್ರಮುಖರು ಇದೇ ದಿನ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.
ಈ ವೇಳೆ ವಿಶ್ವ ಹಿಂದೂ ಪರಿಷತ್ ನ ಶ್ರೀ ಅಶೋಕ್ ಶೆಟ್ಟಿ, ಹಿಂದೂ ಮುಖಂಡರಾದ ಶ್ರೀ ಸುಕುಮಾರ್ ಶೆಟ್ಟಿ, ಶ್ರೀ. ಶೇಖರ್ ಕೊಟ್ಟಾರಿ, ಜ್ಯೋತಿಷ್ಯರಾದ ಶ್ರೀ ಅನಿಲ್ ಪಂಡಿತ್, ಸುರೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ ಹೆಬ್ಬಾರ್ ಕೊಲ್ಯ




















