
ಮಾಜಿ ಸಚಿವರಾದ ಎಸ್ ಆರ್ ಪಾಟೀಲರು ಅಧಿಕಾರದಿಂದ ನಿರ್ಗಮಿಸಿದರೂ ಜನಪರ ಕೆಲಸ ಮಾಡುವುದನ್ನು ಬಿಟ್ಟವರಲ್ಲ.
ಕಳೆದ ಜುಲೈ ೩೧ ರಂದು ಅವರ ೭೮ನೇ ಹುಟ್ಟು ಹಬ್ಬ ನೆರವೇರಿತು.
ಎಸ್ ಆರ್ ಪಾಟೀಲರ ನೈತಿಕ ಶಕ್ತಿ, ವಿಶಾಲ ಹೃದಯವಂತಿಕೆ, ಜನ ಸಾಮಾನ್ಯರ ಬಗ್ಗೆ ಅವರಿಗಿರುವ ಕಳಕಳಿ ಇವು ಅವರ ಬದುಕಿನ ಭಾಗವಾಗಿ ಅವರ ಸಾಮರ್ಥ್ಯವನ್ನು ಗಟ್ಟಿಗೊಳಿಸಿವೆ. ಹೀಗಾಗಿ ಅವರು ಯಾವ ತೊಂದರೆ ತೊಡಕುಗಳಿಗೆ ಅಳುಕದೆ ಮುನ್ನಡೆದಿದ್ದಾರೆ, ಏಕೆಂದರೆ ಅವರ ಆತ್ಮಿಕ ಶಕ್ತಿ ಅಚಲ. ಆ ಅಚಲವಾದ ಶಕ್ತಿಯಿಂದಲೇ ಮೆಡಿಕಲ್ ಕಾಲೇಜದಂತ ದೊಡ್ಡ ಕೆಲಸ ಅವರಿಂದ ಕೈಗೂಡಿತು.
ಸುಸಂಸ್ಕೃತ ಮನುಷ್ಯ ಶೃತಿ ತೀಡಿ ಇಟ್ಟ ವೀಣೆಯಂತೆ, ಅದರಿಂದ ಎಂದೂ ಅಪಸ್ವರ ಹೊರಡದು ಎಂದು ಮಾಸ್ತಿಯವರು ಸುಸಂಸ್ಕೃತ ಮನುಷ್ಯರ ಬಗೆಗೆ ಹೇಳಿದ ಮಾತಿದು. ಶೃತಿ ತೀಡಿ ಇಟ್ಟ ವೀಣೆಯಲ್ಲಿ ಅಪಸ್ವರ ಹೊರಟರೂ ಹೊರಡಬಹುದು ಆದರೆ ಎಸ್ ಆರ್ ಪಾಟೀಲರ ಬಾಯಿಂದ ಅಪಸ್ವರದ ಮಾತು ಎಂದೂ ಹೊರಬರದು. ಅವರಲ್ಲಿ ಬಹಳಷ್ಟು ಅದಮ್ಯ ಶಕ್ತಿ ಇದೆ. ಅವರು ಅದನ್ನೆಂದೂ ತೋರಿಸಿಕೊಂಡವರಲ್ಲ. ಅವರು ಶುಭ್ರವಾದ ಬಟ್ಟೆಯನ್ನೆ ತೊಡುತ್ತಾರೆ. ಅವರ ಜೀವನ ಅವರು ತೊಡುವ ಬಟ್ಟೆಗಿಂತಲೂ ಹೆಚ್ಚು ಪರಿಶುದ್ದವಾಗಿದೆ.
ಮಕ್ಕಳು ವಿದ್ಯಾವಂತರಾಗಲು ತಮ್ಮ ಹಳ್ಳಿ ಬಾಡಗಂಡಿಯಲ್ಲೇ ಬಾಪೂಜಿ ಇಂಟರ್‌ನ್ಯಾಶನಲ್ ಸ್ಕೂಲ್ ತೆಗೆದರು. ಅಲ್ಲಿ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿಕೊಂಡು ಉತ್ತಮ ಶಿಕ್ಷಣ ಕೊಡಲು ವ್ಯವಸ್ಥೆ ಮಾಡಿದರು. ಈಗ ಜಿಲ್ಲೆಯಲ್ಲಿ ಎದ್ದು ಕಾಣುವ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಬಾಪೂಜಿ ಇಂಟರ್‌ನ್ಯಾಶನಲ್ ಸ್ಕೂಲ್ ಒಂದು ಎಂದು ಹೆಮ್ಮೆಯಿಂದ ಹೇಳಬಹುದು.
ಅವರು ಏನೇ ಮಾಡಲಿ ಅದರಲ್ಲಿ ವಿಶೇಷತೆ ಇರುತ್ತದೆ. ದೋಷಗಳಿಗೆ ಪರಿಹಾರ ಕಂಡು ಹಿಡಿಯುವ ಶಕ್ತಿಯನ್ನು ಅವರು ಬೆಳೆಸಿಕೊಂಡಿದ್ದಾರೆ. ಹೀಗಾಗಿ ಅವರು ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಯಶಸ್ವಿಯೂ ಆಗಿದ್ದಾರೆ.
ಈಗ ಜಿಲ್ಲೆಗೆ ಪ್ರಥಮವಾಗಿ ಖಾಸಗಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ಎಸ್.ಆರ್.ಪಾಟೀಲರ ಶಿಕ್ಷಣ ಸಂಸ್ಥೆಗೆ ಅನುಮತಿ ದೊರಕಿರುವುದು ಶ್ಲಾಘನೀಯ. ಬಾಡಗಂಡಿಯ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ಬಿ.ಎಸ್.ಸಿ (ತೋಟಗಾರಿಕೆ) ಪದವಿ ಮಹಾವಿದ್ಯಾಲಯ ಆರಂಭಿಸಿದ್ದು ಜಿಲ್ಲೆಯ ಜನರಿಗೆ ಹರ್ಷ ತಂದಿದೆ. ಇದಲ್ಲದೆ ಲಾ ಕಾಲೇಜಿಗೂ ಅನುಮತಿ ದೊರಕಿರುವುದು ಸಂತಸದ ಸಂಗತಿ. ಕಾನೂನು ಪದವಿ ಪಡೆಯಬೇಕೆನ್ನುವ ಆಸಕ್ತರಿಗೆ ಇದು ವರದಾನವಾಗಿದೆ. ಇವು ಎಸ್.ಆರ್ ಪಾಟೀಲರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ರಜತ ಮಹೋತ್ಸವ ಬಹಳ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.
೧೯೯೭ ರ ಜುಲೈ ೧೧ ರಂದು ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಆರಂಭಗೊಂಡಿತು, ಈ ಸುಧೀರ್ಘ ಅವಧಿಯಲ್ಲಿ ಯಾವುದೇ ಸಣ್ಣ ಪುಟ್ಟ ಗೊಂದಲಗಳೂ ಇಲ್ಲದೆ ಬ್ಯಾಂಕ್ ಅತ್ಯಂತ ಯಶಸ್ವಿಯಾಗಿ ಮುನ್ನೆಡೆದುಕೊಂಡು ಬಂದಿದೆ. ಬ್ಯಾಂಕ್ ನಿರ್ದೇಶಕ ಮಂಡಳಿ, ಸಿಬ್ಬಂದಿಗಳ ಪ್ರಾಮಾಣಿಕ ಸೇವೆ, ಗ್ರಾಹಕರ ಸಹಕಾರ ಹಾಗೂ ಬೆಂಬಲವನ್ನು ಎಸ್.ಆರ್.ಪಾಟೀಲರು ಸ್ಮರಿಸುತ್ತಾರೆ.
ಹಿಂದಿನ ೪೦ ವರ್ಷಗಳಿಂದಲೂ ಅವರು ರಾಜಕೀಯದಲ್ಲಿ ತತ್ವನಿಷ್ಠತೆ ಇರಿಸಿಕೊಂಡು ಬಂದಿದ್ದಾರೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ಎಸ್ ಆರ್ ಪಾಟೀಲರು, ನಾಲ್ಕು ಸಲ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬಿ.ಟಿ.ಡಿ.ಎ ಅಧ್ಯಕ್ಷರಾಗಿ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗಿ, ಐಟಿ.ಬಿಟಿ ಸಚಿವರಾಗಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಿದ ಸೇವೆ ಸ್ಮರಣೀಯ. ಅವರು ತಮ್ಮ ಸೃಜನಶೀಲ ಕಾರ್ಯಗಳಿಂದ ಎತ್ತರಕ್ಕೆ ಬೆಳೆದಿದ್ದಾರೆ. ರಾಜಕೀಯದಲ್ಲಿ ದಕ್ಷತೆಯನ್ನು ಉಳಿಸಿಕೊಂಡು ಬಂದಿದ್ದು ಶುದ್ಧ ಹಸ್ತರೆಂದು ಪ್ರಸಿದ್ಧಿ ಪಡೆದಿದ್ದಾರೆ.
ಎಸ್ ಆರ್ ಪಾಟೀಲರು ಜನಸಾಮಾನ್ಯರ ಬಗ್ಗೆ ಹೆಚ್ಚು ಕಳಕಳಿವುಳ್ಳವರು, ಅದಕ್ಕಾಗಿಯೆ ಅವರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವ ಸಲುವಾಗಿ ಸ್ವಂತ ಗ್ರಾಮ ಬಾಡಗಂಡಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರು, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕು, ಬಾಪೂಜಿ ಸಹಕಾರಿ ಬ್ಯಾಂಕು, ಬಾಪೂಜಿ ಇಂಟರ್ ನ್ಯಾಶಲ್ ಸ್ಕೂಲ್ ಇವು ಕೆಲವರಿಗೆ ಉದ್ಯೋಗ, ಶಿಕ್ಷಣ ನೀಡುವುದರೊಂದಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗಿರುವುದಂತೂ ಸತ್ಯ, ಹೀಗಾಗಿ ಅವರು ಸ್ನೇಹದ ಕಡಲಂತೆ, ತುಂಬಿದ ಕೊಡದಂತೆ, ನಮ್ಮ ನಡುವೆ ಇರುವ ಮೇರು ವ್ಯಕ್ತಿತ್ವದ ವ್ಯಕ್ತಿ. ಅವರ ಬದುಕು ಇತರರಿಗೆ ಮಾದರಿಯಂತಿದೆ. ಈಗ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಎಲ್ಲಾ ಸಂಸ್ಥೆಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ.
ಕರ್ನಾಟಕ ಸರಕಾರದಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೨೦೨೧-೨೨ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ಅವರ ವ್ಯಕ್ತಿತ್ಚಕ್ಕೆ ಹಾಗೂ ಅವರ ಪ್ರಾಮಾಣಿಕ ರಾಜಕೀಯ ಜೀವನಕ್ಕೆ ನಿದರ್ಶನ. ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆಯಾದವರನ್ನು ಶಾಸಕರಾಗಿ ಉಳಿಸಿಕೊಳ್ಳುವುದು ಅವರ ಪಕ್ಷಕ್ಕೆ ಆಗಿಲ್ಲ ಎನ್ನುವುದೆ ವಿಷಾದಪಡುವ ಸಂಗತಿ. ಒಳ್ಳೆಯ ಜನರು ರಾಜಕೀಯದಲ್ಲಿ ಇರಬೇಕು. ಅವರಿಂದ ಪಕ್ಷಕ್ಕೆ ಗೌರವ. ಇದನ್ನು ರಾಜಕೀಯದಲ್ಲಿ ಮುಂಚೂಣಿಯಲ್ಲಿರುವವರು ತಿಳಿದುಕೊಳ್ಳಬೇಕು.
ಅವರು ಎಲ್ಲ ಜನರ ಬಗ್ಗೆ ವಾತ್ಸಲ್ಯ ತುಂಬಿದ ಮಾತೃ ಹೃದಯಿ. ಜಾತಿ, ವರ್ಣ, ವರ್ಗ, ಧರ್ಮಗಳ ಆಚೆ ನಿಂತು ನಾಡು-ನುಡಿ ಕಟ್ಟುವ ಇಂತಹದೊಂದು ಶಕ್ತಿ ನಮ್ಮ ನಡುವೆ ಇರುವುದೇ ಸೋಜಿಗ, ಯಾವುದೇ ಪ್ರತಿಫಲವನ್ನು ಯಾರಿಂದಲೂ ಅಪೇಕ್ಷಿಸದ ವಿಚಾರಶೀಲ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಮೆಡಿಕಲ್ ಕಾಲೇಜ ಸ್ಥಾಪನೆ :
ಮೆಡಿಕಲ್ ಕಾಲೇಜು ಸ್ಥಾಪನೆ ಎಂದರೆ ಅದು ಸಾಮಾನ್ಯವಾದದ್ದಲ್ಲ ಅದು ಅಸಾಮಾನ್ಯ, ಅದ್ಭುತ. ಒಂದು ಸರಕಾರ ಮಾಡದ ಕೆಲಸವನ್ನು ಎಸ್.ಆರ್.ಪಾಟೀಲರು ಮಾಡಿ ತೋರಿಸಿದ್ದಾರೆ. ಪ್ರಾಥಮಿಕ ಶಾಲೆಯಿಂದ ಪ್ರಾರಂಭವಾದ ಅವರ ಶಿಕ್ಷಣ ಸಂಸ್ಥೆ ಈಗ ವೈದ್ಯಕೀಯ ಮಾಹಾವಿದ್ಯಾಲಯ ಸ್ಥಾಪಿಸಿರುವುದು ಕಲ್ಪನೆಗೆ ಮೀರಿದ್ದು, ಮೆಡಿಕಲ್ ಕಾಲೇಜು ಸ್ಥಾಪನೆ ಸ್ಥಾಪನೆಯಾದ ವರ್ಷ ರಾಜ್ಯದಲ್ಲಿ ಮೂರು ಮೆಡಿಕಲ್ ಕಾಲೇಜುಗಳಿಗೆ ಅನುಮತಿ ಸಿಕ್ಕಿದೆ ಅದರಲ್ಲಿ ಎಸ್.ಆರ್.ಪಾಟೀಲರದು ಒಂದು ಎಂದು ಹೆಮ್ಮೆಯಿಂದ ಹೇಳಬಹುದು. ಇದಕ್ಕೆಲ್ಲ ಅವರ ದೂರ ದೃಷ್ಠಿ, ಶ್ರಮ, ಆತ್ಮವಿಶ್ವಾಸ, ದೃಢ ಮನಸ್ಸು ಕಾರಣ ಎಂದು ಹೇಳಬಹುದು.
ಬಹಳಷ್ಟು ಜನ ಕಾರ್ಖಾನೆ, ಆಸ್ಪತ್ರೆ, ಶಾಲೆಗಳನ್ನು ದೊಡ್ಡ ದೊಡ್ಡ ನಗರಳಲ್ಲಿ ಕಟ್ಟುತ್ತಾರೆ. ಆದರೆ ಎಸ್.ಆರ್.ಪಾಟೀಲರು ತಮ್ಮ ಗ್ರಾಮದಲ್ಲಿಯೇ ಕಟ್ಟಿ ಯಶಸ್ವಿಯಾದ ಕೆಲವೇ ಕೆಲವು ಜನರಲ್ಲಿ ಅವರೂ ಒಬ್ಬರು. ಜನ್ಮ ನೀಡಿದ ಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂಬುದನ್ನು ಬದುಕಿನಲ್ಲಿ ತೋರಿಸಿಕೊಟ್ಟರು. ತಮ್ಮೂರಿನಲ್ಲಿಯೇ ಬೃಹತ್ ಆಸ್ಪತ್ರೆ, ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮೂರಿನ ಕೀರ್ತಿಯನ್ನು ಬೆಳಗಿಸಿದರು.
ಎಸ್.ಆರ್.ಪಾಟೀಲರು ಯಾವುದೇ ಕೆಲಸ ಮಾಡಲಿ ಯಾವುದೇ ಹೊಣೆ ಹೊತ್ತುಕೊಂಡಿರಲಿ ಪ್ರತಿಯೊಂದರಲ್ಲಿಯೂ ಮೇಲ್ಪಂಕ್ತಿಯ ಮಾದರಿಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಶಕ್ತಿಗೆ ಸಮಾನವಾದ ಶಕ್ತಿ ಇರುವ ವ್ಯಕ್ತಿ ಸಿಗುವುದು ಅಪರೂಪ. ಅವರು ಮೃದುವಾದ ಹೃದಯವನ್ನು ಪಡೆದ ಭಾರೀ ಅಂತಃಕರುಣಿ. ಆದರೆ ಅವರ ದೇಹದಲ್ಲಿ ದೈತ್ಯ ಶಕ್ತಿ, ಅದ್ಭುತ ಧೈರ್ಯ ತುಂಬಿಕೊಂಡಿದೆ. ಅದಕ್ಕಾಗಿಯೇ ಮೆಡಿಕಲ್ ಕಾಲೇಜದಂತ ಸಾಹಸದ ಕೆಲಸ ಸಾಧ್ಯವಾಗಿದೆ.
ಅವರು ಬರೆದಿಡುವಂತಹ ಜೀವನವನ್ನು ಬದುಕಿದ್ದಾರೆ. ಅವರ ಬದುಕು ಒಂದು ಸುಂದರವಾದ ಕಥೆಯಂತಿದೆ. ಅವರು ಸಾಮಾನ್ಯತೆಯನ್ನು ಹಿಂದೆ ಸರಿಸಿ ಅಸಾಮಾನ್ಯರಾಗಿ ಬೆಳೆದರು. ತಮ್ಮ ವ್ಯಕ್ತಿತ್ವವನ್ನು ದೊಡ್ಡ ಆಲದ ಮರದಂತೆ ಬೆಳೆಸಿಕೊಂಡು ಅದಕ್ಕೆ ಬಹು ವಿಸ್ತಾರವನ್ನು ತಂದುಕೊಂಡಿದ್ದಾರೆ. ದೊಡ್ಡವರಾಗಿ ಬೆಳೆದವರೆಲ್ಲ ದೊಡ್ಡವರಾಗಿ ಉಳಿದಿಲ್ಲ. ಆದರೆ ಎಸ್.ಆರ್.ಪಾಟೀಲರು ದೊಡ್ಡವರಾಗಿ ಬೆಳೆದರು, ದೊಡ್ಡವರಾಗಿ ಉಳಿದರು. ಇಂತಹ ನಿಷ್ಕಳಂಕಿತ ವ್ಯಕ್ತಿ ನೂರುಕಾಲ ಬದುಕಲಿ. ಎಂಬುದೆ ಅವರ ಅಭಿಮಾನಿಗಳ, ಹಿತೈಷಿಗಳ, ಬಂಧು ಮಿತ್ರರ ಹಾರೈಕೆಯಾಗಿದೆ.
ಲೇಖನ ಜಗದೀಶ ಮ. ಹದ್ಲಿ.
ತಿಮ್ಮಾಪೂರ
96117 61979




















