ವಿಬಿ ಜಿ ರಾಮ್ ಜಿ ಯೋಜನೆಯಡಿ “ಗ್ರಾಮೀಣ ರೋಜಗಾರ ಗ್ಯಾರಂಟಿ ಕಾರ್ಡ್ ವಿತರಣೆ
ಕೊಟ್ಟೂರು : ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಸಕ್ರಿಯ ಕುಟುಂಬಗಳ ಭಾಗವಹಿಸುವಿಕೆ ಹೆಚ್ಚಿಸಲು ಆರ್ ಡಿಪಿಆರ್ ಇಲಾಖೆ ನಿರ್ದೇಶನದಂತೆ ಆ.15 ರಿಂದ ಸೆ.15 ರವರೆಗೆ ತಾಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ “ಜಾಬ್ ಕಾರ್ಡ್ ಮೇಳ” ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೊಟ್ಟೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ.ಬಿ.ಆನಂದಕುಮಾರ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ಒಟ್ಟು 18350 ನೋಂದಾಯಿತಿ ಉದ್ಯೋಗ ಚೀಟಿಗಳಿದ್ದು, 14369 ಸಕ್ರಿಯ ಕುಟುಂಬಗಳು ಯೋಜನೆಯಡಿ ಪಾಲ್ಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸಕ್ರಿಯ ಕುಟುಂಬಗಳ ಭಾಗವಹಿಸುವುದನ್ನು ಹೆಚ್ಚಿಸುವುದು ಜಾಬ್ ಕಾರ್ಡ್ ಮೇಳ ಅಭಿಯಾನದ ಉದ್ದೇಶವಾಗಿದೆ. ಗ್ರಾಮೀಣ ಜನರ ಭಾಗವಹಿಸುವಿಕೆ ಹೆಚ್ಚಳ, ಜೀವನೋಪಾಯದ ಭದ್ರತೆ, ಬರ ನಿರ್ವಹಣೆ, ಮೂಲ ಸೌಕರ್ಯ ಅಭಿವೃದ್ಧಿ, ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಅಭಿಯಾನ ಪೂರಕವಾಗಿದೆ ಎಂದು ತಿಳಿಸಿದ್ದಾರೆ.
ಅಭಿಯಾನದ ಅವಧಿಯಲ್ಲಿ ಸಕ್ರಿಯವಲ್ಲದ ಕುಟುಂಬಗಳ ಪಟ್ಟಿ ಸಿದ್ಧಪಡಿಸಿಕೊಂಡು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ವಿಬಿ ಜಿ ರಾಮ್ ಜಿ ಸಿಬ್ಬಂದಿಗಳು, ಎನ್‌ಆರ್ ಎಲ್‌ಎಂ ಸಿಬ್ಬಂದಿಗಳು, ವಿಆರ್ ಡಬ್ಲ್ಯು ಸಿಬ್ಬಂದಿ ಮನೆ ಮನೆ ಭೇಟಿ ಕೈಗೊಂಡು ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ ಜಾಬ್ ಕಾರ್ಡ್ ಮೇಳದ ಕುರಿತು ಗ್ರಾ. ಪಂ. ಮಟ್ಟದಲ್ಲಿ ಡಂಗೂರ ಸಾರುವುದು, ಸ್ವಚ್ಛತಾ ವಾಹನಗಳಲ್ಲಿ ಧ್ವನಿ ವರ್ಧಕದ ಮೂಲಕ ಜಾಗೃತಿ ಸಂದೇಶಗಳನ್ನು ಸಾರುತ್ತಾ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಜಾಬ್ ಕಾರ್ಡ್ ಇಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಗಳಲ್ಲಿ ನಮೂನೆ-1 ಪಡೆದು ಭರ್ತಿ ಮಾಡಿ, ಕಡ್ಡಾಯ ದಾಖಲೆಗಳಾಗಿ ಇ-ಕೆವೈಸಿ ಆದ ಬ್ಯಾಂಕ್ ಪುಸ್ತಕ, ಆಧಾರ್, ರೇಷನ್ ಕಾರ್ಡ್ ನಕಲು ಪ್ರತಿ ಹಾಗೂ ಎರಡು ಭಾವಚಿತ್ರ ನೀಡಿ ಹೊಸ ಗ್ರಾಮೀಣ ರೋಜಾರ್ ಗ್ಯಾರಂಟಿ ಕಾರ್ಡ್ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.
” ಮಹಿಳಾ ಪ್ರಧಾನ ಕುಟುಂಬಗಳು, ವಿಶೇಷ ಚೇತನರು, ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ಯೋಜನೆಯಿಂದ ಹೊರಗುಳಿದವರನ್ನು ಗುರುತಿಸಿ ಯೋಜನೆಗೆ ಒಳಪಡಿಸಲಾಗುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ನೋಂದಾಯಿಸಿ ಅವರಿಗೆ “ಗ್ರಾಮೀಣ ರೋಜ ಗಾರ್ ಗ್ಯಾರಂಟಿ ಕಾರ್ಡ್” ನೀಡಲಾಗುತ್ತದೆ “.
- ಡಾ.ಬಿ.ಆನಂದಕುಮಾರ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ ಕೊಟ್ಟೂರು.
ವರದಿ: ಕೆ. ಗೋಣೆಪ್ಪ




















