ತುಮಕೂರು- ತುಮಕೂರು ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೆಸಿಸಿ ಸಾಲ ಪಡೆದು ಸಾಲಗಾರರು ಮೃತಪಟ್ಟು ಸುಸ್ತಿಯಾಗಿರುವ ರೈತರ 25,000 ವರೆಗೆ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಯೋಜನೆಯನ್ನು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಜಾರಿಗೊಳಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷರು ಹಾಗೂ ಮಾಜಿ ಸಚಿವ ಕೆಎನ್ ರಾಜಣ್ಣ ತಿಳಿಸಿದರು.
ತುಮಕೂರಿನಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕೆ ಎನ್ ರಾಜಣ್ಣ ಈ ಬಗ್ಗೆ ತಿಳಿಸಿ ಈ ಹಿಂದೆ ನಮ್ಮ ಬ್ಯಾಂಕಿನಿಂದ ಮೃತ ರೈತರ ಒಂದು ಲಕ್ಷ ವರಗಿನ ಸಾಲ ಮನ್ನಾ ಮಾಡುತ್ತಿದ್ದು ಇದರಿಂದಾಗಿ ಬ್ಯಾಂಕಿಗೆ 44 ಕೋಟಿ ರೂಗಳ ಹೊರೆಯಾದ ಕಾರಣ ತಾತ್ಕಾಲಿಕವಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ನಮ್ಮ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ದಿ. 01.04.2022 ರಿಂದ 31.03.2025 ರವರೆಗೆ ಸಾಲ ಪಡೆದು ಮೃತರಾದ ಹಾಗೂ ಸಾಲ ಸುಸ್ತಿ ಇರುವ ರೈತರ 25,000 ರೂ.ವರೆಗಿನ ಅಸಲು ಮತ್ತು ಬಡ್ಡಿಯನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಬರಿಸುತ್ತಿದ್ದು ಉಳಿದ ಸಾಲವನ್ನು ರೈತರು ಮರುಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ಇಡೀ ದೇಶದಲ್ಲಿಯೇ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದ ಹೆಗ್ಗಳಿಕೆ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನದ್ದಾಗಿದ್ದು ಇದೊಂದು ದೇಶಕ್ಕೆ ಮಾದರಿ ಯೋಜನೆಯಾಗಿದೆ. ರೈತ ದೇಶದ ಬೆನ್ನೆಲುಬಾದರೂ ಆತನ ಕಷ್ಟಗಳು ಹೇಳತಿರದು ಹಾಗಾಗಿ ಕನಿಷ್ಠ ಮರಣ ಹೊಂದಿದಾಗಲಾದರೂ ಋಣಮುಕ್ತನಾಗಿ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಯಿಂದಾಗಿ ತುಮಕೂರು ಜಿಲ್ಲೆಯ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಹಾಗೂ ಈ ಬಗ್ಗೆ ಶೀಘ್ರದಲ್ಲಿಯೇ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.
ವರದಿ – ಮನು ಸಿಡ್ಲೆಹಳ್ಳಿ



















