ಗಂಗಾವತಿ : ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ತಾಣ ಹಿರೇಬೆಣಕಲ್ ಗ್ರಾಮದ ಬಳಿ ಇರುವ ಶಿಲಾಸಮಾಧಿಗಳ ತಾಣದ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಹತ್ತು ಕೋಟಿ ರೂಪಾಯಿ ಅನುದಾನ ನೀಡುವಂತೆ ಚಾರಣ ಬಳಗದ ಸದಸ್ಯ ಮಂಜುನಾಥ ಗುಡ್ಲಾನೂರು ಒತ್ತಾಯಿಸಿದ್ದಾರೆ. ಫೆ.1ರಂದು ಕೇಂದ್ರ ಸರ್ಕಾರದ 2026-27ನೇ ಸಾಲಿನ ಆರ್ಥಿಕ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ, ಗುಡ್ಲಾನೂರು ಹತ್ತು ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
3500 ವರ್ಷಗಳ ತಾಣ:
ಈ ಬಗ್ಗೆ ಮಾತನಾಡಿದ ಮಂಜುನಾಥ ಗುಡ್ಲಾನೂರು, ಹಿರೇಬೆಣಕಲ್ ಗ್ರಾಮದ ಬಳಿ ಇರುವ ಶಿಲಾ ಸಮಾಧಿಗಳ ತಾಣ, ಸುಮಾರು 3,500 ವರ್ಷಗಳ ಹಿಂದಿನ ಬೃಹತ್ ಶಿಲಾಯುಗ ಕಾಲದ ಸಂಸ್ಕೃತಿಯ ಪ್ರಮುಖ ಪುರಾವೆಗಳನ್ನು ಹೊಂದಿದೆ.
ಬೃಹತ್ ಶಿಲಾಸಮಾಧಿಗಳು, ಗವಿಚಿತ್ರಗಳು, ಕಲ್ಗೊಂಬೆಗಳು ಮತ್ತು ವಸತಿ ಅವಶೇಷಗಳನ್ನು ಒಳಗೊಂಡ ಈ ತಾಣವನ್ನು, ಸಮಗ್ರ ಪುರಾವೆಗಳು ಒಂದೇ ಸ್ಥಳದಲ್ಲಿ ದೊರಕುವುದು ವಿಶ್ವದಲ್ಲಿ ಅಪರೂಪ ಎಂದು ತಜ್ಞರು ಗುರುತಿಸಿದ್ದಾರೆ.
ಭಾರತೀಯ ಪುರಾತತ್ವ ರಕ್ಷಣೆಯಲ್ಲಿದ್ದರೂ, ತಾಣವು ಹವಾಮಾನ ಮತ್ತು ಮಾನವ ಹಸ್ತಕ್ಷೇಪದಿಂದ’ ಹಾನಿಗೊಳಗಾಗುತ್ತಿದೆ.
ಸಂಶೋಧನೆ, ಭದ್ರತೆ ಮತ್ತು ಪ್ರವಾಸಿ ಸೌಕರ್ಯಗಳ ಕೊರತೆ ಇದೆ. ಹೀಗಾಗಿ ತಾಣದ ರಕ್ಷಣೆ ಮತ್ತು ಅಭಿವೃದ್ಧಿಗೆ ಅನುದಾನ
ನೀಡಬೇಕು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ:
ತಾಣ ಪ್ರಸ್ತುತ ಸ್ಥಿತಿ ಅರಿಯಬೇಕು. ಯುನೆಸ್ಕೋ ವಿಶ್ವ ಪರಂಪರೆಯ ತಾಣದ ದೀರ್ಘಕಾಲೀನ ಯೋಜನೆ ರೂಪಿಸಲು ಮತ್ತು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಈ ತಾಣದ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಒಮ್ಮೆ ಈ ತಾಣಕ್ಕೆ ಭೇಟಿ ನೀಡುವಂತೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನು ಗುಡ್ಲಾನೂರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಹಿರೇಬೆಣಕಲ್ಲಿನ ಈ ಆದಿ ಮಾನವ ವಾಸದ ನೆಲೆ ನಾಗರಿಕತೆಯ ಆರಂಭಿಕ ಹೆಜ್ಜೆಗಳ ಸಾಕ್ಷಿಯಾಗಿರುವ ರಾಷ್ಟ್ರೀಯ-ಜಾಗತಿಕ ಸಂಪತ್ತು. ಇದರ ಸಂರಕ್ಷಣೆ ಸಾರ್ವಜನಿಕರ ಮತ್ತು ಸರ್ಕಾರಗಳ ಕರ್ತವ್ಯ ಎಂದು ಗುಡ್ಲಾನೂರ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















